ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ: ಬಾಕಿ ₹ 15.37 ಕೋಟಿ ಬಿಡುಗಡೆಗೆ ಒತ್ತಾಯ

Last Updated 24 ಜೂನ್ 2021, 13:25 IST
ಅಕ್ಷರ ಗಾತ್ರ

ಮಂಡ್ಯ: ಸಾಲ ಮನ್ನಾ ಯೋಜನೆಯಡಿ ಸರ್ಕಾರದಿಂದ ಬರಬೇಕಾಗಿರುವ ₹ 15.37 ಕೋಟಿ ಬಾಕಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಸಿ.ಪಿ.ಉಮೇಶ್‌ ನೇತೃತ್ವದ ನಿಯೋಗ ಗುರುವಾರ ಸಹಕಾರ ಸಚಿವ ಎಚ್‌.ಟಿ.ಸೋಮಶೇಖರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಲ ಮನ್ನಾ ಯೋಜನೆ ಜಾರಿಗೊಳಿಸಲಾಗಿತ್ತು. ಸಹಕಾರ ಸಂಘಗಳ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ 1,09,294 ರೈತರಿಗೆ ಅನುಕೂಲವಾಗಿದ್ದು ₹ 509 ಕೋಟಿ ಹಣ ಮನ್ನಾ ಆಗಿದೆ. ಬಾಕಿ ಉಳಿದಿರುವ ₹ 15.37 ಕೋಟಿ ಹಣ ಬಿಡುಗಡೆಯಾದರೆ ಎಲ್ಲಾ ರೈತರಿಗೂ ಯೋಜನೆಯ ಲಾಭ ದೊರೆಯಲಿದೆ. ಆದಷ್ಟು ಬೇಗ ಬಾಕಿ ಹಣ ಬಿಡುಗಡೆ ಮಾಡುವಂತೆ ಕೋರಿದರು.

ಬ್ಯಾಂಕ್‌ನಿಂದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ನೀಡಲಾಗಿದ್ದ ಸಾಲ ವಸೂಲಾತಿಯಲ್ಲಿ ವಿಳಂಬವಾಗಿದೆ. ಶೀಘ್ರ ಸಾಲ ಮರುಪಾವತಿಗೆ ಸೂಚನೆ ನೀಡಬೇಕು. ಒಟ್ಟಾರೆ ಸಾಲ ಹಾಗೂ ಬಡ್ಡಿ ಸೇರಿ ಬ್ಯಾಂಕ್‌ಗೆ ₹ 30 ಕೋಟಿ ಸಾಲ ಪಾವತಿಯಾಗಬೇಕಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಸಿ.ಪಿ.ಉಮೇಶ್‌ ತಿಳಿಸಿದರು.

‘ಸಹಕಾರ ಕಾಯ್ದೆಗೆ ತಿದ್ದುಪಡಿ ತಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಯದರ್ಶಿಗಳನ್ನು ಡಿಸಿಸಿ ಬ್ಯಾಂಕ್‌ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು. ಶೀಘ್ರ ಈ ಬಗ್ಗೆ ಕಾರ್ಯೋನ್ಮುಖರಾಗಿ ಬ್ಯಾಂಕಿನ ಅನುಕೂಲ ಮಾಡಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ’ ಎಂದರು.

‘ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಗಿರಿಜಾ ಚಿತ್ರಮಂದಿರದ ಪಕ್ಕದಲ್ಲಿರುವ ಡಿಸಿಸಿ ಬ್ಯಾಂಕಿಗೆ ಸೇರಿದ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಂಕುಸ್ಥಾಪನೆಗಾಗಿ ಸಚಿವರನ್ನು ಆಹ್ವಾನಿಸಿದ್ದು, ಶೀಘ್ರ ದಿನಾಂಕ ತಿಳಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ಎಂದರು.

ಉಪಾಧ್ಯಕ್ಷ ಎಚ್.ಕೆ.ಅಶೋಕ್, ನಿರ್ದೇಶಕರಾದ ಪಿ.ಎಂ.ನರೇಂದ್ರಸ್ವಾಮಿ, ಸಿ. ಅಶ್ವಥ್, ಚಂದ್ರಶೇಖರ್, ಜೋಗಿಗೌಡ, ಕಾಳೇಗೌಡ, ಸಂದರ್ಶ, ಚಲುವರಾಜು, ಗುರುಸ್ವಾಮಿ, ಪಾಲಹಳ್ಳಿ ಚಂದ್ರಶೇಖರ್, ವ್ಯವಸ್ಥಾಪಕ ನಿರ್ದೇಶಕಿ ವನಜಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT