ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಮಂಡ್ಯ: ಅಸಂಬದ್ಧ, ಅವಹೇಳನಾಕಾರಿ ಮಾತಿಗೆ ವೇದಿಕೆ

ನಾಲಗೆ ಹರಿಬಿಡುತ್ತಿರುವ ನಾಯಕರು, ವೈಯಕ್ತಿಕ ಆರೋಪ– ಪ್ರತ್ಯಾರೋಪಗಳ ಕಾರುಕಾರು
Published 8 ಏಪ್ರಿಲ್ 2024, 8:14 IST
Last Updated 8 ಏಪ್ರಿಲ್ 2024, 8:14 IST
ಅಕ್ಷರ ಗಾತ್ರ

ಮಂಡ್ಯ: ಅಭಿವೃದ್ಧಿ ಪರವಾದ ಚರ್ಚೆಗೆ ವೇದಿಕೆಯಾಗಬೇಕಿದ್ದ ಲೋಕಸಭಾ ಚುನಾವಣೆ ಅಸಂಬದ್ಧ ಮಾತು, ಅವಹೇಳನಾಕಾರಿ ಪದ ಬಳಕೆಗೆ ಸಾಕ್ಷಿಯಾಗುತ್ತಿದೆ. ಒಬ್ಬರಿಗೊಬ್ಬರು ವೈಯಕ್ತಿಕವಾದ ಪ್ರಚೋದನಾಕಾರಿ ಮಾತುಗಳನ್ನಾಡುತ್ತಾ ತಮ್ಮ ನಾಲಗೆಯ ಸಂಸ್ಕೃತಿ ಪ್ರದರ್ಶನ ಮಾಡುತ್ತಿದ್ದಾರೆ.

ಮುತ್ಸದ್ಧಿ ನಾಯಕರ ಮಾದರಿ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಜಿಲ್ಲೆಗೆ ರಾಜ್ಯದಲ್ಲೇ ಉನ್ನತ ಸ್ಥಾನವಿದೆ. ‘ಮಂಡ್ಯ ಎಂದರೆ ಇಂಡಿಯಾ’ ಎನ್ನಲು ಇದೂ ಒಂದು ಕಾರಣ. ಆದರೆ ಇತ್ತೀಚಿನ ರಾಜಕಾರಣಿಗಳ ವರ್ತನೆಗಳು ಜಿಲ್ಲೆಯ ಪರಂಪರೆಗೆ ಮಸಿ ಬಳಿಯುತ್ತಿವೆ. ಜನಪರ ವಿಚಾರಗಳನ್ನು ಚರ್ಚಿಸಲು ವಿಫಲವಾಗಿರುವ ಅವರು ವೈಯಕ್ತಿಕ ಟೀಕೆಯಲ್ಲೇ ಮುಳುಗಿದ್ದಾರೆ. ಒಬ್ಬರ ಕಾಲು ಒಬ್ಬರು ಎಳೆಯುತ್ತಾ ಮುಜುಗರ ಸೃಷ್ಟಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಗೆ ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಾರೆ ಎನ್ನುವ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಮದ್ದೂರು ಶಾಸಕ ಕದಲೂರು ಉದಯ್‌ ‘ಜೆಡಿಎಸ್‌ನಲ್ಲಿ ಗಂಡಸರಿಲ್ಲವೇ’ ಎಂದು ಪ್ರಶ್ನಿಸಿದರು. ಇಲ್ಲಿಂದ ಜೆಡಿಎಸ್ ಹಾಗೂ ಕಾಂಗ್ರೆಸ್‌ ಮುಖಂಡರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು ವೈಯಕ್ತಿಕ ಮಟ್ಟಕ್ಕೆ ಬಂದು ತಲುಪಿದೆ.

ಉದಯ್ ಮಾತಿಗೆ ಪ್ರತಿಯಾಗಿ ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್‌ ಮುಖಂಡ ರವೀಂದ್ರ ಶ್ರೀಕಂಠಯ್ಯ ಅವರು ‘ಶ್ರೀಲಂಕಾ, ಗೋವಾದಲ್ಲಿ ಉದಯ್‌ ಗಂಡಸ್ತನ ಕಳೆದುಕೊಂಡಿದ್ದಾರೆ’ ಎಂದು ವೈಯಕ್ತಿಕ ಟೀಕೆಯನ್ನು ಮುಂದುವರಿಸಿದರು. ಚರ್ಚೆ ಇಲ್ಲಿಗೇ ಮುಗಿದಿದ್ದರೆ ಜನರಿಗೆ ಮುಜುಗರವಾಗುತ್ತಿರಲಿಲ್ಲ.

ಆದರೆ, ರವೀಂದ್ರ ಶ್ರೀಕಂಠಯ್ಯ ಹೇಳಿದ ಮಾತಿಗೆ ಪ್ರತಿಯಾಗಿ ಕದಲೂರು ಉದಯ್‌ ತೀರಾ ಕೀಳು ಮಟ್ಟದ ಭಾಷಾ ಪ್ರಯೋಗ ಮಾಡಿದರು. ನಾಲಗೆ ಹರಿಬಿಟ್ಟ ಅವರು ಜನರು ತಲೆತಗ್ಗಿಸುವಂತಹ ಪದ ಪ್ರಯೋಗ ಮಾಡಿದರು. ಉದಯ್‌ ಆಡಿರುವ ಮಾತುಗಳನ್ನು ಕಾಂಗ್ರೆಸ್‌ ಪಕ್ಷದ ನಾಯಕರೇ ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಉದಯ್‌ ಮಾತಿನಿಂದ ಕೋಪೋದ್ರಿಕ್ತರಾಗಿರುವ ಜೆಡಿಎಸ್‌ ಮುಖಂಡರು ಹೋದಲ್ಲಿ ಬಂದಲ್ಲಿ ತಿರುಗೇಟು ನೀಡುತ್ತಿದ್ದಾರೆ. ವೈಯಕ್ತಿಕ ನೆಲೆಗಟ್ಟಿನಲ್ಲೇ ಉತ್ತರ ನೀಡುತ್ತಿದ್ದಾರೆ. ಜೆಡಿಎಸ್‌ ನಾಯಕ ಸಿ.ಎಸ್‌.ಪುಟ್ಟರಾಜು ಅವರು ‘ಉದಯ್‌ ಅವರಿಗೆ ಅಕ್ಕ–ತಂಗಿಯರಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಈ ಆರೋಪ– ಪ್ರತ್ಯಾರೋಪ ಮತದಾನದವರೆಗೂ ಮುಂದುವರಿಯುವಂತೆ ಕಾಣುತ್ತಿದ್ದು ಹಾದಿಬೀದಿ ರಂಪಾಟವಾದಂತಿದೆ.

‘ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ ಸಾಮಾನ್ಯ. ಆದರೆ ಅವರ ಮಾತುಗಳು ಮರ್ಯಾದೆಯ ಮಿತಿ ಮೀರಬಾರದು. ರಾಜಕಾರಣದಲ್ಲಿ ವಿರೋಧವಿದ್ದರೂ ವೈಯಕ್ತಿಕವಾಗಿ ವಿಶ್ವಾಸ, ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ನಮಗೆ ವೋಟು ಹಾಕಿ ಗೆಲ್ಲಿಸಿದ ಮತದಾರರ ಮರ್ಯಾದೆ ಕಳೆಯುವ ಮಾತುಳನ್ನಾಡಬಾರದು. ಮಾತಿಗೊಂದು ಲಕ್ಷ್ಮಣ ರೇಖೆ ಇರಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ಎಸ್‌.ಆತ್ಮಾನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT