ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವೇಗೌಡ, ಕುಮಾರಸ್ವಾಮಿ ಬದುಕಿದ್ದೂ ಸತ್ತಂತೆ: ಡಿಕೆಶಿ

ಅದ್ಧೂರಿ ಮೆರವಣಿಗೆಯೊಂದಿಗೆ ಸ್ಟಾರ್‌ ಚಂದ್ರು ನಾಮಪತ್ರ ಸಲ್ಲಿಕೆ
Published 1 ಏಪ್ರಿಲ್ 2024, 20:30 IST
Last Updated 1 ಏಪ್ರಿಲ್ 2024, 20:30 IST
ಅಕ್ಷರ ಗಾತ್ರ

ಮಂಡ್ಯ: ‘ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಜಾತ್ಯತೀತ ಮೌಲ್ಯಗಳನ್ನು ಬಲಿಕೊಟ್ಟಿರುವ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಬದುಕಿದ್ದೂ ಸತ್ತಂತೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಸೋಮವಾರ ನಾಮಪತ್ರ ಸಲ್ಲಿಸಿದ ನಂತರ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಅವರಿಗೆ ರಾಜಕೀಯ ಜನ್ಮ ನೀಡಿದ ರಾಮನಗರ ಬಿಟ್ಟು ಮಂಡ್ಯಕ್ಕೆ ಬಂದಿದ್ದಾರೆ. ಅಲ್ಲಿಯ ಜನರಿಗೇ ನ್ಯಾಯ ಕೊಡಲು ಸಾಧ್ಯವಾಗಿಲ್ಲ. ಇನ್ನು ಮಂಡ್ಯ ಜನರಿಗೆ ನ್ಯಾಯ ಕೊಡಿಸುವರೇ? ಜೆಡಿಎಸ್‌ನಲ್ಲಿ ಜಾತ್ಯತೀತ ಶಬ್ದ ಉಳಿದಿಲ್ಲ. ತಮ್ಮ ಭಾವಮೈದುನನಿಗೆ ತಮ್ಮ ಪಕ್ಷದ ಚಿಹ್ನೆಯಲ್ಲಿ ಕಣಕ್ಕೆ ಇಳಿಸಲು ಸಾಧ್ಯವಾಗಲಿಲ್ಲ. ಕುಮಾರಸ್ವಾಮಿ ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿಕೊಳ್ಳಲಿ’ ಎಂದು ಆರೋಪಿಸಿದರು.

‘ಕುಮಾರಸ್ವಾಮಿಯನ್ನು ನಾವು ಮುಖ್ಯಮಂತ್ರಿ ಮಾಡಿದೆವು, ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ಕಿರುಕುಳ ಕೊಟ್ಟು ಕೆಳಗಿಳಿಸಿದರು ಎಂದು ನನ್ನ ವಿರುದ್ಧ ಆರೋಪಿಸುತ್ತಾರೆ. ಅಧಿಕಾರದಿಂದ ತೆಗೆದವರು ನಾವಲ್ಲ, ಈಗ ಅಧಿಕಾರದಿಂದ ಕೆಳಗಿಳಿಸಿದವರ ಜೊತೆಯಲ್ಲೇ ಹೋಗಿದ್ದಾರೆ’ ಎಂದರು.

‘ಮಂಡ್ಯ ಜನರು ಹೊರಗಿನ ಅಭ್ಯರ್ಥಿಗೆ ಎಂದೂ ಮಣೆ ಹಾಕಿದವರಲ್ಲ, ಸದಾ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಈ ಬಾರಿಯೂ ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸಿ ಸ್ವಾಭಿಮಾನ ರಕ್ಷಿಸಲಿದ್ದಾರೆ’ ಎಂದರು.

ಅದ್ದೂರಿ ಮೆರವಣಿಗೆ: ಸ್ಟಾರ್‌ ಚಂದ್ರು ನಗರದ ಕಾಳಿಕಾಂಬಾ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಜನಪದ ತಂಡ, ಸಾವಿರಾರು ಜನರೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಬಿರು ಬಿಸಿಲಿನಿಂದ ಬಸವಳಿಯುತ್ತಿದ್ದ ಜನರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಕಲ್ಲಂಗಡಿ ಹಣ್ಣು ಹಾಗೂ ನೀರಿನ ಬಾಟಲಿ ವಿತರಿಸುತ್ತಿದ್ದರು. ಆಗ ಜನ ಮುಗಿಬಿದ್ದು ಕಲ್ಲಂಗಡಿ ಹಣ್ಣುಗಳನ್ನು ಹೊತ್ತೊಯ್ಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಜಿಲ್ಲಾಧಿಕಾರಿ ಕಚೇರಿ ಬಳಿ ವಾಹನ ದಟ್ಟಣೆ ಹೆಚ್ಚಾಗಿ ಅಪಾರ ಜನರು ಕಚೇರಿ ಆವರಣಕ್ಕೆ ಬರಲು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT