ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು ಎಳನೀರು ಬೆಲೆ ಕುಸಿತ; ಒಂದು ಎಳನೀರು ದರ ₹ 20ರಷ್ಟು ಇಳಿಕೆ

ಒಂದು ಎಳನೀರು ದರ ₹ 20ರಷ್ಟು ಇಳಿಕೆ l ಏಷ್ಯಾದ ದೊಡ್ಡ ಮಾರುಕಟ್ಟೆಯಲ್ಲಿ ರೈತ ಕಂಗಾಲು
Last Updated 1 ಡಿಸೆಂಬರ್ 2021, 21:13 IST
ಅಕ್ಷರ ಗಾತ್ರ

ಮಂಡ್ಯ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿ, ಮಳೆ ಹೆಚ್ಚಾಗಿರುವುದರಿಂದ ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿದೆ. ಪ್ರತಿ ಎಳನೀರಿನ ಬೆಲೆಯಲ್ಲಿ ₹ 20 ಕಡಿಮೆಯಾಗಿದ್ದು ರೈತರು ಕಂಗಾಲಾಗಿದ್ದಾರೆ. 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಬೆಲೆ ಕುಸಿದಿದೆ.

ಏಷ್ಯಾದ ಅತೀದೊಡ್ಡ ಎಳನೀರು ಮಾರುಕಟ್ಟೆ ಎಂಬ ಕೀರ್ತಿಗೆ ಪಾತ್ರವಾಗಿರುವ ಮದ್ದೂರು ಮಾರುಕಟ್ಟೆಯ ಒಟ್ಟು ವಹಿವಾಟಿನ ಶೇ 90ರಷ್ಟು ಎಳನೀರು ದೆಹಲಿಗೆ ರವಾನೆಯಾಗುತ್ತದೆ. ನಿತ್ಯ 50 ಲಾರಿ (6 ಲಕ್ಷ ಎಳನೀರು) ಹೊರರಾಜ್ಯಗಳಿಗೆ ತೆರಳುತ್ತವೆ. 40 ಲಾರಿಗಳು ದೆಹಲಿಗೆ ತೆರಳಿದರೆ ಉಳಿದವು ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶಕ್ಕೆ ತೆರಳುತ್ತವೆ.

ತಿಂಗಳ ಹಿಂದೆ ಎಳನೀರಿನ ಬೆಲೆ ₹ 36ವರೆಗೂ ತಲುಪಿತ್ತು, ಬೇಸಿಗೆಯಲ್ಲಿ ₹ 38ಕ್ಕೆ ಏರಿಕೆಯಾಗಿದ್ದೂ ಉಂಟು. ಆದರೆ ವಾಯುಭಾರ ಕುಸಿತದಿಂದ ಶೀತಗಾಳಿ ಹೆಚ್ಚಾದ ನಂತರ ಬೇಡಿಕೆ ಕುಸಿದಿದೆ. ಸದ್ಯ ಉತ್ತಮ ಗುಣಮಟ್ಟದ ಎಳನೀರು ₹ 14–15ಕ್ಕೆ ಮಾರಾಟವಾಗುತ್ತಿದ್ದು ಪ್ರತಿ ಎಳನೀರಿನ ಬೆಲೆಯಲ್ಲಿ ₹ 20–22 ಕುಸಿತ ಕಂಡಿರುವುದರಿಂದ, ಮಾರುಕಟ್ಟೆಗೆ ತಂದ ಎಳನೀರನ್ನು ನೋವಿನಿಂದ ವಾಪಸ್‌ ಕೊಂಡೊಯ್ಯುತ್ತಿದ್ದಾರೆ.

ಮದ್ದೂರು ಸಿಹಿ ಎಳನೀರು ದೇಶದೆಲ್ಲೆಡೆ ಪ್ರಸಿದ್ಧಿ ಪಡೆದಿದ್ದು ಚಳಿಗಾಲದಲ್ಲೂ ಬೇಡಿಕೆ ಕಡಿಮೆಯಾಗುತ್ತಿರಲಿಲ್ಲ. ನವೆಂಬರ್‌–ಡಿಸೆಂಬರ್‌ನಲ್ಲಿ ಹೆಚ್ಚೆಂದರೆ ₹ 8–10 ಕಡಿಮೆಯಾಗುತ್ತಿತ್ತು, ಆದರೆ ಈಗ ದಿಢೀರ್‌ ₹ 20 ಕುಸಿದಿರುವುದು ರೈತರ ಕಳವಳಕ್ಕೆ ಕಾರಣವಾಗಿವೆ.

‘ಕಳೆದ ತಿಂಗಳು ₹ 36ಕ್ಕೆ ಮಾರಾಟ ಮಾಡಿದ್ದೆ, ಈಗ ₹ 14ಕ್ಕೆ ಕೇಳುತ್ತಿದ್ದಾರೆ. ಎಳನೀರು ಕೊಯ್ದ ಖರ್ಚು ಕೂಡ ಬರುವುದಿಲ್ಲ. ಹೀಗಾಗಿ ವಾಪಸ್‌ ಕೊಂಡೊಯ್ಯುತ್ತೇನೆ. ಸ್ಥಳೀಯ ವರ್ತಕರು ಹೆಚ್ಚು ಬೆಲೆ ಕೊಟ್ಟರೆ ಅವರಿಗೆ ಮಾರುತ್ತೇನೆ’ ಎಂದು ಮದ್ದೂರು ತಾಲ್ಲೂಕು ವಳಗೆರೆಹಳ್ಳಿಯ ರೈತ ಯೋಗೇಶ್‌ ಹೇಳಿದರು.

ಚಳಿಗಾಳಿ ಕಾರಣ: ‘ದೆಹಲಿಯಲ್ಲಿ ಚಳಿಗಾಳಿ ತೀವ್ರಗೊಂಡಿದ್ದು ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಎಳನೀರು ಬೇಡಿಕೆ ಕಡಿಮೆಯಾಗಿದೆ. ಜೊತೆಗೆ ಡೀಸೆಲ್‌ ಬೆಲೆ ಏರಿಕೆಯಾದ ನಂತರ ಸಾಗಣೆ ವೆಚ್ಚ ದುಬಾರಿಯಾಗುತ್ತಿದ್ದು ವರ್ತಕರು ಮದ್ದೂರು ಎಳನೀರು ಬದಲಿಗೆ ಗುಜರಾತ್‌ನಿಂದ ಎಳನೀರು ತರಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಎಳನೀರಿನ ಬೆಲೆ ಕುಸಿದಿದೆ’ ಎಂದು ವರ್ತಕರು ಹೇಳುತ್ತಾರೆ.

‘ಈ ಪರಿ ಬೆಲೆ ಕುಸಿದದ್ದನ್ನು ಎಂದೂ ನೋಡಿಲ್ಲ. ರೈತರಿಗೆ ತೀವ್ರ ನಷ್ಟವಾಗುತ್ತಿದ್ದು ಮಾರುಕಟ್ಟೆಯ ವಹಿವಾಟು ಕೂಡ ಕುಸಿಯುತ್ತಿದೆ’ ಎಂದು ವರ್ತಕ ರಾಘವ್‌ ತಿಳಿಸಿದರು.

‘ಚಳಿಗಾಲದಲ್ಲಿ ಬೆಲೆ ಕುಸಿತ ಸಾಮಾನ್ಯ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಲೆ ಕುಸಿದಿರುವುದು ಇದೇ ಮೊದಲು. ಕಾರಣಗಳ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಎಪಿಎಂಸಿ ಕಾರ್ಯದರ್ಶಿ ತಾಸೀನ್‌ ನಿಕತ್‌ಖಾನ್‌ ತಿಳಿಸಿದರು.

ಚಿಲ್ಲರೆ ಮಾರುಕಟ್ಟೆ ದರ ₹ 40

ಎಪಿಎಂಸಿ ಮಾರುಕಟ್ಟೆಯಲ್ಲಿ ಎಳನೀರು ಬೆಲೆ ತೀವ್ರ ಕುಸಿದಿದ್ದರೂ ಲಾಭ ಗ್ರಾಹಕರಿಗೆ ದೊರಕುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ₹ 40ಕ್ಕೇ ಮಾರಾಟ ನಡೆದಿದೆ. ‘ಬೆಲೆ ಕುಸಿದಿರುವುದು ಗ್ರಾಹಕರಿಗೆ ಗೊತ್ತಿಲ್ಲ, ಯಾರೂ ಪ್ರಶ್ನಿಸಿಲ್ಲ. ಹೀಗಾಗಿ ಮಾಮೂಲಿ ದರದಲ್ಲೇ ಮಾರುತ್ತಿದ್ದೇವೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT