ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಾಣ

ಸಾರಿಗೆ ಇಲಾಖೆ ಜಯಂತಿ ಜಂಟಿ ಆಯುಕ್ತರಿಂದ ಪಿಡಬ್ಲ್ಯುಡಿ ಕಾರ್ಯಪಾಲಕ ಎಂಜಿನಿಯರ್‌ಗೆ ಪತ್ರ
Last Updated 7 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಮಂಡ್ಯ: ಕನಗನಮರಡಿ ಬಸ್‌ ದುರಂತರ ನಂತರ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಜಿಲ್ಲೆಯಲ್ಲಿ ಬಸ್‌ ಓಡಾಡುವ ರಸ್ತೆಯ ಪಕ್ಕದಲ್ಲಿರುವ ನಾಲೆಗಳನ್ನು ಗುರುತಿಸಿ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಸಾರಿಗೆ ಇಲಾಖೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದೆ.

ಪಾಂಡವಪುರ, ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ನಾಲೆ ಹರಿವು ಇದ್ದು ಪಕ್ಕದಲ್ಲೇ ರಸ್ತೆಗಳಿವೆ. ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಹೇಮಾವತಿ ಎಡದಂಡೆ, ಬಲದಂಡೆ ನಾಲೆಗಳು ಹರಿಯುತ್ತವೆ. ಸದ್ಯ ಕೆಆರ್‌ಎಸ್‌, ಹೇಮಾವತಿ ಜಲಾಶಯ ತುಂಬಿರುವ ಕಾರಣ ನಾಲೆಗಳು ಹರಿಯುತ್ತಿದ್ದು ಅಪಾಯಕ್ಕಾಗಿ ಬಾಯಿ ತೆರೆದುಕೊಂಡಿವೆ. ಕನಗನಮರಡಿ ಬಸ್‌ ದುರಂತಕ್ಕೂ ಮೊದಲು ಅಲ್ಲಲ್ಲಿ ನಾಲೆಗೆ ಬಿದ್ದು ಸಾಯುವವರ ಸಂಖ್ಯೆಗೆ ಲೆಕ್ಕವೇ ಇರಲಿಲ್ಲ. ಆದರೆ ಈ ಭೀಕರ ದುರಂತ ಸಂಭವಿಸುವವರೆಗೂ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಡೆಗೋಡೆ ನಿರ್ಮಿಸುವ ಒತ್ತಡ ಇರಲಿಲ್ಲ. ಈಗ ಜನರಿಂದ ಒತ್ತಡ ಹೆಚ್ಚಾಗಿದ್ದು ಗೋಡೆ ನಿರ್ಮಿಸುವುದು ಅನಿವಾರ್ಯವಾಗಿದೆ.

ತಾಲ್ಲೂಕಿನ ಲೋಕಸರ ಗ್ರಾಮದ ಬಳಿ ಸ್ಕೂಟರ್‌ನಿಂದ ನಾಲೆಗೆ ಬಿದ್ದು ಮಗು ಸೇರಿ ಮೂವರು ಮೃತಪಟ್ಟ ಘಟನೆಯೂ ತಡೆಗೋಡೆ ನಿರ್ಮಾಣದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಿದೆ. ಈ ಕಾರಣ ಸಾರಿಗೆ ಇಲಾಖೆಯ ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತರು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ಗೆ ಪತ್ರ ಬರೆದಿದ್ದು ಕನಗನಮರಡಿ ನಾಲೆ ಸೇರಿ ಜಿಲ್ಲೆಯ ವಿವಿಧ ನಾಲೆಗಳಿಗೆ ಭದ್ರತೆಯ ದೃಷ್ಟಿಯಿಂದ ತಡೆಗೋಡೆ ನಿರ್ಮಿಸುವಂತೆ ಒತ್ತಾಯ ಮಾಡಿದ್ದಾರೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಸಿಕ್ಕಿದೆ.

‘ಜಂಟಿ ಆಯುಕ್ತರು ಬರೆದಿರುವ ಪತ್ರ ಪರಿಶೀಲಿಸುವೆ. ನಾವು ಈಗಾಗಲೇ ನಾಲೆ ಹಾದುಹೋಗಿರುವ ರಸ್ತೆಗಳನ್ನು ಗುರುತಿಸಿ ಪಟ್ಟಿ ಮಾಡುತ್ತಿದ್ದೇವೆ. ಸಾರಿಗೆ ಇಲಾಖೆಯಿಂದಲೂ ಪಟ್ಟಿ ಸ್ವೀಕರಿಸಲಾಗುವುದು. ಮುಖ್ಯರಸ್ತೆಗಳಲ್ಲಿರುವ ನಾಲೆಗಳಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ತಡೆಗೋಡೆ ನಿರ್ಮಿಸಲಾಗುವುದು. ನಾಲಾ ಅಚ್ಚುಕಟ್ಟು ವ್ಯಾಪ್ತಿಯ ರಸ್ತೆ ಕಾಮಗಾರಿಯನ್ನು ಕಾವೇರಿ ನೀರಾವರಿ ನಿಗಮ ನಡೆಸಲಿದೆ. ಪಟ್ಟಿ ತಯಾರಾದ ನಂತರ ಕ್ರಿಯಾಯೋಜನೆ ರೂಪಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಹರ್ಷ ತಿಳಿಸಿದರು.

ಎಲ್ಲೆಲ್ಲಿವೆ ಅಪಾಯಕಾರಿ ನಾಲೆಗಳು: ಪಾಂಡವಪುರ ಪಟ್ಟಣದಲ್ಲಿಯೇ ಅಪಾಯಕಾರಿ ನಾಲೆ ಇದ್ದು ತಡೆಗೋಡೆ ಇಲ್ಲ. ಈಚೆಗೆ ಮುಖ್ಯಮಂತ್ರಿ ಕಾರ್ಯಕ್ರಮದ ದಿನವೇ ರೈತರೊಬ್ಬರು ನಾಲೆಗೆ ಬಿದ್ದು ಮೃತಪಟ್ಟಿದ್ದರು. ಪಾಂಡವ ಕ್ರೀಡಾಂಗಣದ ಎದುರಿನಲ್ಲೇ ನಾಲೆ ಹಾದು ಹೋಗಿದೆ. ಇದರ ಜೊತೆಗೆ ಪಾಂಡವಪುರ ತಾಲ್ಲೂಕಿನಲ್ಲಿ ಚಿಕ್ಕ ಬ್ಯಾಡರಹಳ್ಳಿ, ಕೆ.ಬೆಟ್ಟಹಳ್ಳಿ, ಎಂ.ಬೆಟ್ಟಹಳ್ಳಿ, ಎಲೆಕೆರೆ ಹ್ಯಾಂಡ್‌ಪೋಸ್ಟ್‌, ಶಂಭೂನಹಳ್ಳಿ, ಹಾರೋಹಳ್ಳಿ ಮುಂತಾದೆಡೆ ನಾಲೆಗಳು ಬಾಯ್ತೆರೆದು ನಿಂತಿವೆ. ಪಾಂಡವಪುರ– ಮಂಡ್ಯ ರಸ್ತೆಯ ಚಿಕ್ಕಮರಳಿ ಗೇಟ್‌ನಲ್ಲಿ ಲೋಕಪಾವನಿ ನದಿ ಸೇತುವೆ ಶಿಥಿಲಗೊಂಡಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕೋಡಿಶೆಟ್ಟಿಪುರ–ಗಣಂಗೂರು ಬಳಿ ಇರುವ ನಾಲೆಗೂ ತಡೆಗೋಡೆ ಇಲ್ಲ. ಇದು ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇದೆ. ಜೊತೆಗೆ ಕೆ.ಶೆಟ್ಟಿಹಳ್ಳಿ ಮೀಸಲು ಅರಣ್ಯದ ಬಳಿಯ ನಾಲೆಗೂ ತಡೆಗೋಡೆ ಇಲ್ಲ.

ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಹೇಮಾವತಿ ಎಡದಂಡೆ, ಬಲದಂಡೆ ನಾಲೆಗಳು ರಸ್ತೆಯ ಪಕ್ಕದಲ್ಲೇ ಇವೆ. ಜಿಲ್ಲೆಯ ಕಡೆಯ ಭಾಗ ಭಾರತೀಪುರ ಗೇಟ್‌ ಬಳಿ ಸಾಹುಕಾರ್‌ ಚೆನ್ನಯ್ಯ ನಾಲೆ 200 ಅಡಿ ಕೆಳಗೆ ಹರಿಯುತ್ತಿದ್ದು ಬಹಳ ಅಪಾಯಕಾರಿಯಾಗಿದೆ. ಕೆ.ಆರ್‌.ಪೇಟೆ– ಶ್ರವಣಬೆಳಗೊಳ ಮಾರ್ಗವಾಗಿ ಸಾರಿಗೆ ಬಸ್‌ ಸೇರಿದಂತೆ ನೂರಾರು ಆಟೊಗಳು ಇಲ್ಲಿ ಓಡಾಡುತ್ತವೆ. ತಕ್ಷಣ ಇಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಆ ಭಾಗದ ಜನರು ಒತ್ತಾಯಿಸಿದ್ದಾರೆ.

ಮಂಡ್ಯ ತಾಲ್ಲೂಕಿನ ಲೋಕಸರ ಗ್ರಾಮ ವ್ಯಾಪ್ತಿಯಲ್ಲಿ ಕಾಲುವೆ ಏರಿಯನ್ನೇ ರಸ್ತೆ ಮಾಡಲಾಗಿದೆ.

ಇದೇ ಜಾಗದಲ್ಲಿ ಕಬ್ಬನಹಳ್ಳಿಗೆ ಹರಿಯುವ ಇನ್ನೊಂದು ನಾಲೆ ಇದ್ದು ಎರಡು ನಾಲೆಗಳ ನಡುವೆ ರಸ್ತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT