ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಹೆಣ್ಣು ಭ್ರೂಣಹತ್ಯೆ ಪ್ರಕರಣ: ತನಿಖೆಗೆ ಡಿವೈಎಸ್ಪಿ ನೇತೃತ್ವದ 3 ತಂಡ

Published 7 ಮೇ 2024, 23:26 IST
Last Updated 7 ಮೇ 2024, 23:26 IST
ಅಕ್ಷರ ಗಾತ್ರ

ಪಾಂಡವಪುರ (ಮಂಡ್ಯ ಜಿಲ್ಲೆ):ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ, ಆರೋಗ್ಯ ಇಲಾಖೆ ವಸತಿ ಗೃಹದಲ್ಲೇ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ ಪ್ರಕರಣದ ತನಿಖೆಗೆ ಡಿವೈಎಸ್‌ಪಿ ಮುರುಳಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾದ ಇನ್ನಿತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಆರೋಪಿಗಳಾದ ಅಶ್ವಿನಿ, ಆನಂದ್, ಶಶಿಕಲಾ ಹಾಗೂ ಖಾಸಗಿ ನರ್ಸಿಂಗ್ ಹೋಂನ ಗಿರಿಜಾಂಬ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ‘ಅಕ್ರಮವಾಗಿ ಹಣ ಸಂಪಾದಿಸಲು ಗರ್ಭಪಾತ ನಡೆಸುತ್ತಿದ್ದುದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪ್ರಾಥಮಿಕ ವರದಿಯಲ್ಲಿ ದಾಖಲಿಸಲಾಗಿದೆ.

ಕೃತ್ಯ ನಡೆಯುತ್ತಿದ್ದ ಆರೋಗ್ಯ ಇಲಾಖೆ ವಸತಿ ಗೃಹವನ್ನು ಪೊಲೀಸರು ಮಹಜರು ನಡೆಸಿ, ಕೃತ್ಯಕ್ಕೆ ಬಳಸಲಾಗಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

‘ಗರ್ಭಪಾತಕ್ಕಾಗಿ ಸೆರಿಫ್ರೈಮ್ ಜೆಲ್ ಲೇಪಿಸಿ ನೀಡಿದ್ದ, ಐದು ಮಾತ್ರೆಗಳಿದ್ದ ಖಾಲಿ ಕಿಟ್‌, ರಕ್ತಸಿಕ್ತ ಪಂಚೆ, ಹ್ಯಾಂಡ್ ಗ್ಲೌಸ್, ಮೂರು ಸ್ಟಾಂಜ್ ಒವಮ್ ಫೋರ್ಸೆಪ್ಸ್‌, ಸಿಮ್ಸ್‌ ಸ್ಪೆಕ್ಲಮ್ ಸೇರಿದಂತೆ ಕೆಲವು ವಸ್ತುಗಳು ಕಸದ ಬುಟ್ಟಿಯಲ್ಲಿ ಪತ್ತೆಯಾಗಿವೆ‘ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಬೆಟ್ಟಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.

ನಾಗಣ್ಣಗೌಡ ಸಭೆ:

‘ತಾಲ್ಲೂಕು ವ್ಯಾಪ್ತಿಯಲ್ಲಿರುವ ಲ್ಯಾಬ್‌ಗಳು, ಸ್ಕ್ಯಾನಿಂಗ್ ಸೆಂಟರ್, ರಕ್ತ ಪರೀಕ್ಷಾ ಕೇಂದ್ರ, ಖಾಸಗಿ ನರ್ಸಿಂಗ್ ಹೋಂಗಳಿಗೆ ತಹಶೀಲ್ದಾರ್ ನೇತೃತ್ವದ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಆರೋಗ್ಯ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ತಂಡದಲ್ಲಿರಬೇಕು. ಇಂಥ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕು’ ಎಂದು ತಾಕೀತು ಮಾಡಿದರು.

‘ಪ್ರಕರಣದಲ್ಲಿ ಅನುಭವಿ ವೈದ್ಯರ ಪಾತ್ರವಿರಬಹುದು. ಆಸ್ಪತ್ರೆಯಲ್ಲಿ ‘ಡಿ’ ಗ್ರೂಪ್ ನೌಕರರಿಗೆ ಗರ್ಭಪಾತ ಮಾಡಿಸುವ ಅನುಭವ ಮತ್ತು ಔಷಧದ ಅರಿವಿರುವುದು ಕಡಿಮೆ. ಹೀಗಾಗಿ ಪ್ರಭಾವಿಗಳ ಕೈವಾಡವಿರಬಹುದೆಂದು ಸಾರ್ವಜನಿಕರು ಶಂಕಿಸಿದ್ದಾರೆ. ಪೊಲೀಸರು ಈ ಬಗ್ಗೆಯೂ ಗಮನ ಹರಿಸಬೇಕು’ ಎಂದರು. ನಂತರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗರ್ಭಪಾತಕ್ಕೆ ಒಳಗಾದ ಮಹಿಳೆಗೆ ಸಾಂತ್ವನ ಹೇಳಿದರು.

ತಹಶೀಲ್ದಾರ್ ಜಿ.ಎನ್.ಶ್ರೇಯಸ್, ತಾ.ಪಂ.ಇಒ ಲೋಕೇಶ್ ಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಪಿಎಸ್‌ಐ ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT