ಮಂಗಳವಾರ, ಜೂನ್ 22, 2021
21 °C
ಪುಲ್ವಾಮಾ ದಾಳಿಗೆ ವರ್ಷ: ಹುತಾತ್ಮ ಯೋಧ ಗುರು ಊರಿನಲ್ಲಿ ಪುಣ್ಯಸ್ಮರಣೆ

ವೀರ ಯೋಧ ಗುರು ಪೋಷಕರ ಸ್ಥಿತಿ ಬದಲಾಗಿಲ್ಲ, ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಪುಲ್ವಾಮಾ ಉಗ್ರರ ದಾಳಿಗೆ ವರ್ಷ ಕಳೆದಿದ್ದು, ಘಟನೆಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧ, ಮದ್ದೂರು ತಾಲ್ಲೂಕಿನ ಗುಡಿಗೆರೆ ಕಾಲೊನಿಯ ಎಚ್‌.ಗುರು ಸಮಾಧಿ ಸ್ಥಳ ಇದುವರೆಗೂ ಸ್ಮಾರಕವಾಗಿಲ್ಲ. ಯೋಧನ ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿಲ್ಲ. ಪೋಷಕರ ಸ್ಥಿತಿ ಬದಲಾಗಿಲ್ಲ.

ಗುರು ಅವರ ಪತ್ನಿ ಕಲಾವತಿ ಬೆಂಗಳೂರಿನ ದಾಸರಹಳ್ಳಿಯ ಬಾಡಿಗೆ ಮನೆಯಲ್ಲಿ ಪೋಷಕರೊಂದಿಗೆ ನೆಲೆಸಿದ್ದಾರೆ. ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ತಾತ್ಕಾಲಿಕವಾಗಿ ‘ಜನತಾ ಸಹಕಾರ ಬ್ಯಾಂಕ್‌’ನಲ್ಲಿ ಗುತ್ತಿಗೆ ಆಧಾರದ ಕೆಲಸ ಕೊಡಿಸಿ, ಶೀಘ್ರವೇ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಸಮ್ಮಿಶ್ರ ಸರ್ಕಾರ ಬಿದ್ದುಹೋದ ಕಾರಣ ಕಲಾವತಿ ಅವರ ಸರ್ಕಾರಿ ಕೆಲಸದ ಕನಸು ಕನಸಾಗಿಯೇ ಉಳಿಯಿತು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕಲಾವತಿ, ‘ನಾನು ಬಿಎ ಪದವಿ ಪೂರೈಸಿದ್ದು, ಅದರ ಆಧಾರದ ಮೇಲೆ ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಉತ್ತಮ ಕೆಲಸ ಸಿಗುತ್ತದೆ ಎಂದು ನಿರೀಕ್ಷಿಸಿದ್ದೆ. ಈಚೆಗೆ ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಮನವಿ ಮಾಡಿದ್ದೇನೆ. ಅವರಾದರೂ ಸರ್ಕಾರಿ ಕೆಲಸ ಕೊಡಿಸುತ್ತಾರೆ ಎಂದು ನಂಬಿದ್ದೇನೆ’ ಎಂದು ತಿಳಿಸಿದರು.

ನಿಲ್ಲದ ಕೌಟುಂಬಿಕ ಕಲಹ: ಗುರು ಪೋಷಕರಾದ ಹೊನ್ನಯ್ಯ ಹಾಗೂ ಚಿಕ್ಕಹೊಳ್ಳಮ್ಮ ದಂಪತಿ ಮೊದಲಿನಂತೆಯೇ ಭಾರತೀನಗರದಲ್ಲಿ ಲಾಂಡ್ರಿ ನೋಡಿಕೊಳ್ಳುತ್ತಿದ್ದಾರೆ. ಸರ್ಕಾರ ಹಾಗೂ ದಾನಿಗಳು ನೀಡಿದ ಕೋಟ್ಯಂತರ ರೂಪಾಯಿ ಪರಿಹಾರವೂ ಅವರ ಬಡತನ ನೀಗಿಸಿಲ್ಲ.

ಇದರೊಂದಿಗೆ ಅವರ ನಡುವಿನ ಕೌಟುಂಬಿಕ ಕಲಹ ಮುಂದುವರಿದಿದ್ದು, ಪೊಲೀಸ್‌ ಠಾಣೆ, ಸಿಆರ್‌ಪಿಎಫ್‌ ದೂರು ಘಟಕದವರೆಗೂ ಹೋಗಿದೆ. ದಾನಿಗಳು ಕೊಟ್ಟ ಹಣವನ್ನು ಸೊಸೆ ಹೊತ್ತೊಯ್ದಿದ್ದಾಳೆ ಎಂದು ಗುರು ಪೋಷಕರು ಆರೋಪಿಸುತ್ತಾರೆ.

‘ಮಗ ಸತ್ತ ಕೆಲವೇ ದಿನಗಳಲ್ಲಿ ಹಣದ ವಿಚಾರಕ್ಕೆ ನಮ್ಮನ್ನು ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತಿಸಿದಳು. ಪೊಲೀಸ್‌ ಠಾಣೆ ಮಾತ್ರವಲ್ಲದೇ ಸಿಆರ್‌ಪಿಎಫ್‌ ಯೋಧರನ್ನೂ ಕರೆತಂದು ಮನೆಯಲ್ಲಿದ್ದ ವಸ್ತುಗಳು, ಚೆಕ್‌, ಹಣವನ್ನು ಕೊಂಡೊಯ್ದಳು. ನನ್ನ ಹೆಸರಿನಲ್ಲಿ ಕೊಟ್ಟ ಅಪಾರ ಹಣದ ಚೆಕ್‌ವೊಂದನ್ನು ಅದರ ಅವಧಿ ಮುಗಿದ ಮೇಲೆ ಕೊಟ್ಟಳು. ಆ ಹಣ ನಮಗೆ ಸಿಗಲೇ ಇಲ್ಲ’ ಎಂದು ಚಿಕ್ಕಹೊಳ್ಳಮ್ಮ ತಮ್ಮ ಸೊಸೆಯ ವಿರುದ್ಧ ಕಿಡಿಕಾರಿದರು.

 ಆದರೆ, ತಾವು ಮನೆಯಿಂದ ಶೈಕ್ಷಣಿಕ ದಾಖಲೆಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾಗಿ ಕಲಾವತಿ ಹೇಳುತ್ತಾರೆ.

16ರಂದು ಪ್ರತ್ಯೇಕ ಪೂಜೆ: ವರ್ಷದ ಪುಣ್ಯಸ್ಮರಣೆ ವಿಚಾರದಲ್ಲೂ ಗುರು ಪತ್ನಿ ಹಾಗೂ ಪೋಷಕರ ನಡುವೆ ಸಮನ್ವಯತೆ ಇಲ್ಲದಾಗಿದೆ. ಶುಕ್ರವಾರ ವಿವಿಧ ಸಂಘಟನೆಗಳ ಸದಸ್ಯರು, ಮಾಜಿ ಸೈನಿಕರು ಸಮಾಧಿ ಸ್ಥಳದಲ್ಲಿ ಸಸಿ ನೆಟ್ಟು ನಮನ ಸಲ್ಲಿಸಿದರು. ಇದೇ ವೇಳೆ ಮಗನ ಸಮಾಧಿಗೆ ಪೋಷಕರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಲಾವತಿ ಹಾಜರಿರಲಿಲ್ಲ.

‘ಫೆ.16ರಂದು ಪತಿಯ ಅಂತ್ಯಕ್ರಿಯೆ ನಡೆದಿದ್ದು, ಅಂದಿಗೆ ವರ್ಷವಾಗುತ್ತದೆ. ಭಾನುವಾರ ಸಮಾಧಿ ಸ್ಥಳಕ್ಕೆ ಬಂದು ಪೂಜೆ ಮಾಡಲಾಗುವುದು’ ಎಂದು ಕಲಾವತಿ ತಿಳಿಸಿದರು.

ಸಮಾಧಿ ಸ್ಥಳದ ನಿರ್ಲಕ್ಷ್ಯ

ವರ್ಷದೊಳಗೆ ಸ್ಮಾರಕ ನಿರ್ಮಿಸುವುದಾಗಿ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಆಗಿಲ್ಲ. ಆ ಜಾಗವನ್ನು ಸುತ್ತಲಿನ ರೈತರು ಒಕ್ಕಣೆ ಕಾರ್ಯಕ್ಕೆ ಬಳಸುತ್ತಿದ್ದಾರೆ.

‘ಜಿಲ್ಲಾಡಳಿತವು ಸಮಾಧಿ ಸ್ಥಳದ ಸುತ್ತ ಕಡೇ ಪಕ್ಷ ಒಂದು ಬೇಲಿಯನ್ನೂ ಹಾಕಿಸಿಲ್ಲ’ ಎಂಬುದು ವಿವಿಧ ಸಂಘಟನೆಗಳ ಸದಸ್ಯರ ದೂರು.

‘ಸ್ಮಾರಕ ನಿರ್ಮಾಣಕ್ಕೆ ವಿಶೇಷ ಅನುದಾನದ ಅಗತ್ಯವಿದೆ. ಈ ಕುರಿತು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು