ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕಟ್ಟೆ, ಕಲ್ಯಾಣಿಯಲ್ಲಿ ಜಿನುಗಿದ ನೀರು

Published 23 ಮಾರ್ಚ್ 2024, 6:40 IST
Last Updated 23 ಮಾರ್ಚ್ 2024, 6:40 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮೀಣ ಭಾಗದ ಜಲಮೂಲಗಳಿಗೆ ಪುನಶ್ಚೇತನ ನೀಡಲು ಜಿಲ್ಲಾ ಪಂಚಾಯಿತಿ ‘ಜಲ ಸಂರಕ್ಷಣಾ ಆಂದೋಲನ’ ಅನುಷ್ಠಾನಗೊಳಿಸುತ್ತಿದ್ದು ಜಿಲ್ಲೆಯಾದ್ಯಂತ 130 ಕಟ್ಟೆ, ಕಲ್ಯಾಣಿಗಲ್ಲಿ ಹೊಸ ನೀರು ಜಿನುಗುತ್ತಿದೆ. ವಿಶ್ವ ಜಲ ದಿನಾಚರಣೆ (ಮಾರ್ಚ್‌ 22) ಅಂಗವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಆರಂಭಗೊಂಡಿರುವ ಈ ಯೋಜನೆ ಬರಪರಿಸ್ಥಿತಿಯಲ್ಲಿ ಜಲ ಜಾಗೃತಿ ಮೂಡಿಸುತ್ತಿದೆ.

ಕಾವೇರಿ, ಹೇಮಾವತಿ ನದಿ ನೀರಿನ ಹರಿವಿದ್ದರೂ ಜಿಲ್ಲೆಯ ಹಲವು ಭಾಗ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದೆ, ಈ ವರ್ಷ ಎಲ್ಲಾ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಮುಚ್ಚಿ ಹೋಗಿರುವ, ಹೂಳು ತುಂಬಿರುವ, ಒತ್ತುವರಿಯಾಗಿರುವ ಕಟ್ಟೆ, ಕಲ್ಯಾಣಿ ಗುರುತಿಸಿ ಜಲ ಸಂರಕ್ಷಣಾ ಆಂದೋಲನದಡಿ ಅಭಿವೃದ್ಧಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ವಿಶೇಷ ಆಸಕ್ತಿ ವಹಿಸಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಯೋಜನೆ ರೂಪಿಸಿದ್ದಾರೆ. ವರ್ಷಪೂರ್ತಿ ನಡೆಯುವ ಆಂದೋಲನದ ಮೂಲಕ ಗ್ರಾಮೀಣ ಜನರಲ್ಲಿ ಜಲ ಸಾಕ್ಷರತೆ ಮೂಡಿಸುವ, ಐತಿಹಾಸಿಕ ಕಟ್ಟೆ, ಕಲ್ಯಾಣಿ ಸಂರಕ್ಷಿಸುವ, ಜಲ ಮರುಪೂಣಕ್ಕೆ ಉತ್ತೇಜಿಸುವ ಉದ್ದೇಶ ಹೊಂದಿದ್ದಾರೆ.

ಉದ್ಯೋಗ ಖಾತ್ರಿ ಅಡಿ ಅನುಮೋದನೆ; ಜಿಲ್ಲೆಯಾದ್ಯಂತ 176 ಕಟ್ಟೆ, ಕಲ್ಯಾಣಿ ಗುರುತಿಸಿ ಅವುಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವೃದ್ಧಿಗೊಳಿಸಲು ಅನುಮೋದನೆ ನೀಡಲಾಗಿದೆ. ಈಗಾಗಲೇ 130 ಕಾಮಗಾರಿ ಆರಂಭಗೊಂಡಿದ್ದು ಹಲವು ಕಟ್ಟೆ, ಕಲ್ಯಾಣಿಗಳಲ್ಲಿ ನೀರಿನ ಸೆಲೆ ಜಿನುಗುತ್ತಿರುವುದು ಭರವಸೆ ಮೂಡಿಸಿದೆ.

ಬಹಳ ಹಿಂದಿನಿಂದಲೂ ಹಳ್ಳಿ ಜನರಿಗೆ ಕುಡಿಯುವ ನೀರು ಕಲ್ಪಿಸುತ್ತಿದ್ದ ಕಟ್ಟೆ, ಕಲ್ಯಾಣಿಗಳನ್ನೇ ಗುರುತಿಸಿ ಅಭಿವೃದ್ಧಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಗಿಡಗಂಟಿ ತೆರವುಗೊಳಿಸಿ, ಕಲ್ಲು ಚಪ್ಪಡಿ ಸರಿಪಡಿಸಿ. ಒತ್ತುವರಿ ತೆರವುಗೊಳಿಸಿ, ಹೂಳೆತ್ತಿ ನೀರಿನ ಪಸೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿಗಳ ಮೂಲಕ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ.

‘ಹಿಂದೆ ಗ್ರಾಮೀಣ ಭಾಗದಲ್ಲಿ ಕಟ್ಟೆ, ಬಾವಿ, ಕಲ್ಯಾಣಿಗಳೇ ಕುಡಿಯುವ ನೀರಿಗೆ ಆಧಾರವಾಗಿದ್ದವು. ಈಗ ಅವುಗಳು ಕಣ್ಮರೆಯಾಗುತ್ತಿದ್ದು ಮತ್ತೆ ಪುನಶ್ಚೇತನ ನೀಡುವ ಉದ್ದೇಶದಿಂದ ಆಂದೋಲನ ರೂಪಿಸಲಾಗಿದೆ. ಇದರಿಂದ ಜಲ ಮರುಪೂರಣಗೊಂಡು ಜಲಮೂಲಗಳು ಅಭಿವೃದ್ಧಿಗೊಳ್ಳಲಿವೆ. ಮುಂದಿನ ಪೀಳಿಗೆಗೆ ಶುದ್ಧ ನೀರು ಲಭ್ಯವಾಗುವಂತೆ ಮಾಡಲು ಆಂದೋಲನ ಸಹಾಯಕವಾಗಲಿದೆ’ ಎಂದು ಶೇಖ್‌ ತನ್ವೀರ್‌ ಆಸೀಫ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT