ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ ಲೋಕಸಭಾ ಚುನಾವಣೆ | ಎಣಿಕೆ ನಾಳೆ; ಇಬ್ಬರಲ್ಲಿ ಗೆಲ್ಲೋದು ಯಾರು?

ಎಚ್‌.ಡಿ.ಕುಮಾರಸ್ವಾಮಿ, ಸ್ಟಾರ್‌ ಚಂದ್ರು ಎದೆಯಲ್ಲಿ ಡವಡವ, ಗರಿಗೆದರಿದ ಲೆಕ್ಕಾಚಾರ
Published 3 ಜೂನ್ 2024, 7:04 IST
Last Updated 3 ಜೂನ್ 2024, 7:04 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭಾ ಚುನಾವಣೆ ಮತ ಎಣಿಕೆಗೆ 24 ಗಂಟೆ ಮಾತ್ರ ಬಾಕಿ ಉಳಿದಿದ್ದು ಫಲಿತಾಂಶದ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ. ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಅವರ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು ಇಬ್ಬರಲ್ಲಿ ಗೆಲ್ಲುವುದು ಯಾರು ಎಂಬ ಪ್ರಶ್ನೆ ಮೂಡಿದೆ.

ಏ.26ರಂದು ಮತದಾನ ಮುಗಿದ ನಂತರ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ತಿಂಗಳಿಗೂ ಹೆಚ್ಚು ಕಾಲ ಕಾದಿದ್ದಾರೆ. ದೇಶದಾದ್ಯಂತ ಹಲವು ಹಂತಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದ್ದು ಫಲಿತಾಂಶ ಹೊರಬೀಳುವ ಸಮಯ ಬಂದಿದೆ. ಹೀಗಾಗಿ ಎಲ್ಲೆಡೆ ಕುತೂಹಲ ಮನೆ ಮಾಡಿದ್ದು ಚರ್ಚೆಗಳು ಗರಿಗೆದರಿವೆ. ಮತಯಂತ್ರದಲ್ಲಿ 14 ಮಂದಿಯ ಭವಿಷ್ಯವಿದ್ದರೂ ಎಚ್‌ಡಿಕೆ ಹಾಗೂ ಸ್ಟಾರ್‌ ಚಂದ್ರು ನಡುವೆ ಗೆ

ರಾಜ್ಯದಲ್ಲಿ ಮೊದಲ ಹಂತದ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು ಇನ್ನೊಂದು ಹಂತದ ಚುನಾವಣಾ ಪ್ರಚಾರ ನಡೆಸಿ ನಂತರ ವಿಶ್ರಾಂತಿ ಪಡೆದಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಕೂಡ ವಿಶ್ರಾಂತಿಗೆ ಮರಳಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ 8 ತಾಲ್ಲೂಕುಗಳಲ್ಲೂ ಸುತ್ತಾಡಿದ್ದ ಅವರು ಮೌನಕ್ಕೆ ಶರಣಾಗಿದ್ದರು.

ಈಗ ಫಲಿತಾಂಶದ ದಿನ ಬಂದಿದ್ದು ಅಭ್ಯರ್ಥಿಗಳ ಎದೆಯಲ್ಲಿ ಡವಡವ ಆರಂಭವಾಗಿದೆ. ಇಬ್ಬರೂ ಅಭ್ಯರ್ಥಿಗಳು ತಮ್ಮ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರ ವಿಶ್ವಾಸ ನಿಜವಾಗುವುದೇ ಅಥವಾ ಸುಳ್ಳಾಗುವುದೇ ಎಂಬ ಪ್ರಶ್ನೆಗೆ ಉತ್ತರ ದೊರೆಯಬೇಕಾದರೆ ಸೋಮವಾರ ರಾತ್ರಿ ಕಳೆದು ಬೆಳಕಾಗಬೇಕಾಗಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಆರಂಭವಾಗಲಿದ್ದು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮತದಾನ ಪ್ರಮಾಣ ಹೆಚ್ಚಳ: ಕಳೆದ ಹಲವು ಚುನಾವಣೆಗಳಿಂತಲೂ ಈ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನವಾಗಿದೆ. ರಾಜ್ಯದಲ್ಲೇ ಅತೀ ಹೆಚ್ಚು ಮತದಾನವಾಗಿದ್ದು ಜಿಲ್ಲೆ ಹೊಸ ದಾಖಲೆ ಬರೆದಿದೆ. ಜನರು ಬಹಳ ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಅವರು ಯಾರ ಪರವಾಗಿ ಮತದಾನ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಒಂದು ದಿನ ಕಾಯಬೇಕಾಗಿದೆ.

2019ರ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಶೇ 1.26ರಷ್ಟು ಹೆಚ್ಚುವರಿ ಮತದಾನವಾಗಿದೆ. ಕಳೆದ ಬಾರಿ ಶೇ 80.41ರಷ್ಟು ಮತದಾನವಾಗಿದ್ದರೆ ಈ ಬಾರಿ 81.67ರಷ್ಟು ಮತದಾನವಾಗಿದೆ. ಮತದಾನ ಹೆಚ್ಚಳಕ್ಕೆ ಕಾರಣವಾದ ಅಂಶಗಳ ಬಗ್ಗೆ ಮೂರೂ ಪಕ್ಷಗಳ ಮುಖಂಡರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಜೆಡಿಎಸ್‌– ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸಿರುವ ಕಾರಣದಿಂದಲೇ ಮತದಾನದ ಪ್ರಮಾಣ ಹೆಚ್ಚಾಗಿದೆ. ದೇಶ, ವಿದೇಶಗಳಿಂದಲೂ ಜನರು ಬಂದು ಮತದಾನ ಮಾಡಿದ್ದಾರೆ. ಒಕ್ಕಲಿಗರ ಒಂದು ಮತವೂ ಕುಮಾರಸ್ವಾಮಿ ಅವರಿಗೆ ಕೈತಪ್ಪಿಲ್ಲ, ಹೀಗಾಗಿ ಕುಮಾರಣ್ಣನ ಗೆಲುವು ನಿಶ್ಚಿತ. ಮತಗಳ ಅಂತರ ಲಕ್ಷ ಮೀರುತ್ತದೆ ಎಂದು ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರು ಬಣ್ಣಿಸುತ್ತಾರೆ.

‘ಕುಮಾರಸ್ವಾಮಿ ಅವರು ನಾಮಬಲದಿಂದಲೇ ಗೆಲುವು ಸಾಧಿಸುತ್ತಾರೆ. ಕಾಂಗ್ರೆಸ್‌ ಅಭ್ಯರ್ಥಿ ಇಡೀ ಚುನಾವಣೆ ಪ್ರಚಾರದಲ್ಲಿ ಮಾತನಾಡಲಿಲ್ಲ, ತಮ್ಮ ಇರುವಿಕೆಯನ್ನೇ ಸ್ಪಷ್ಟಪಡಿಸಲಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ದೊಡ್ಡ ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂದು ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು.

ಇನ್ನೊಂದೆಡೆ ಮತದಾನದ ಪ್ರಮಾಣ ಹೆಚ್ಚಳವಾಗಿರುವುದಕ್ಕೆ ಕಾಂಗ್ರೆಸ್‌ ಮುಖಂಡರು ಬೇರೆ ಕಾರಣವನ್ನೇ ನೀಡುತ್ತಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾವಣೆ ಮಾಡಿದ್ದಾರೆ, ಹೀಗಾಗಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಅವರೆಲ್ಲರೂ ಗ್ಯಾರಂಟಿ ಯೋಜನೆ ಫಲಾನುಭವಿಗಳಾಗಿದ್ದು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬುದು ಕಾಂಗ್ರೆಸ್‌ ಮುಖಂಡರ ವಾದವಾಗಿದೆ.

‘ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್‌ ಪರವಾಗಿ ಧ್ರವೀಕರಣಗೊಂಡಿವೆ. ಒಕ್ಕಲಿಗರ ಹೊರತಾದ ಮತಗಳು ಕಾಂಗ್ರೆಸ್‌ಗೆ ತಪ್ಪಿಲ್ಲ, ಹೀಗಾಗಿ ಸ್ಟಾರ್‌ ಚಂದ್ರು ಗೆಲ್ಲುತ್ತಾರೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಎಲ್ಲಾ ಲೆಕ್ಕಾಚಾರಗಳಿಗೂ ಮಂಗಳವಾರ ಸ್ಪಷ್ಟ ಚಿತ್ರಣ ದೊರೆಯಲಿದ್ದು ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಎಣಿಕೆ ನಡೆಯುವ ಮಂಡ್ಯ ವಿವಿ ಆವರಣದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.

ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು)
ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು)

ಫಲಿತಾಂಶದತ್ತ ಅಭ್ಯರ್ಥಿಗಳು, ಮುಖಂಡರು ಜನರ ಚಿತ್ತ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿರುವ ಅಭ್ಯರ್ಥಿಗಳು ಮಂಗಳವಾರ ಮಧ್ಯಾಹ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT