ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಮಾರೇನಹಳ್ಳಿ: ವಾಂತಿ ಭೇದಿಯಿಂದ 11 ಮಂದಿ ಅಸ್ವಸ್ಥ

Published 27 ಆಗಸ್ಟ್ 2024, 18:31 IST
Last Updated 27 ಆಗಸ್ಟ್ 2024, 18:31 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌. ಪೇಟೆ ತಾಲ್ಲೂಕು ಸಂತೇಬಾಚಹಳ್ಳಿ ಹೋಬಳಿಯ ಮಾರೇನಹಳ್ಳಿಯಲ್ಲಿ ಕಳೆದ ಐದು ದಿನಗಳಿಂದ ವಾಂತಿ–ಭೇದಿಯಿಂದ 11 ಮಂದಿ ಅಸ್ವಸ್ಥಗೊಂಡಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಹಾಸನ ಜಿಲ್ಲಾಸ್ಪತ್ರೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ಇದುವರೆಗೆ 11 ಮಂದಿ ಚಿಕಿತ್ಸೆ ಪಡೆದಿದ್ದು, ಐವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ನಿಂಗೇಗೌಡ ಮತ್ತು ಲಕ್ಷ್ಮಮ್ಮ ಎಂಬುವವರು ಪ್ರಸ್ತುತ ತೀವ್ರ ನಿಗಾ ಘಟಕ (ಐಸಿಯು) ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಗ್ರಾಮ ಪಂಚಾಯಿತಿಯಿಂದ ಪೂರೈಕೆಯಾದ ನೀರು ಕಲುಷಿತವಾಗಿದ್ದು, ಇದರಿಂದಲೇ ಗ್ರಾಮಸ್ಥರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದೆ. ನಾಲ್ಕು ದಿನಗಳ ಹಿಂದೆ ಶತಾಯುಷಿ ಜವರಮ್ಮ ಮತ್ತು ಅವರ ಸಂಬಂಧಿ ಕಾಳಮ್ಮ (70) ಎಂಬುವರು ಮರಣ ಹೊಂದಿದ್ದು, ಇವರ ಸಾವಿಗೆ ಕಲುಷಿತ ನೀರೇ ಕಾರಣ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

‘ಇನ್ನೂ ಮೂವರಿಗೆ ವಾಂತಿ–ಭೇದಿ ಕಾಣಿಸಿಕೊಂಡಿದ್ದು, ಅವರು ಗ್ರಾಮದಲ್ಲೇ ಇದ್ದು ಆರೋಗ್ಯ ಇಲಾಖೆ ನೀಡಿದ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ. ಗ್ರಾಮಸ್ಥರಿಗೆ ಸಕಾಲದಲ್ಲಿ ಉತ್ತಮ ಚಿಕಿತ್ಸೆ ನೀಡಬೇಕು. ಕಲುಷಿತ ನೀರು ಪೂರೈಕೆ ಮಾಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡುವೆ: ‘ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಅಸ್ವಸ್ಥಗೊಂಡವರಿಗೆ ಓಆರ್‌ಎಸ್‌ ಮತ್ತು ಮಾತ್ರೆಗಳನ್ನು ನೀಡಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಯೋಗಾಲಯಕ್ಕೆ ಕಳುಹಿಸಿರುವ ನೀರಿನ ಮಾದರಿಯ ವರದಿ ಬಂದ ನಂತರ ನಿಖರ ಕಾರಣ ಗೊತ್ತಾಗಲಿದೆ. ಮಾರೇನಹಳ್ಳಿಗೆ ನಾಳೆ (ಬುಧವಾರ) ಬೆಳಿಗ್ಗೆ 10 ಗಂಟೆಗೆ ಭೇಟಿ ನೀಡಿ, ಸಮಸ್ಯೆ ಬಗ್ಗೆ ಪರಿಶೀಲಿಸುವೆ’ ಎಂದು ಡಿಎಚ್‌ಒ ಡಾ.ಕೆ.ಮೋಹನ್‌ ತಿಳಿಸಿದ್ದಾರೆ.

ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಮಾರೇನಹಳ್ಳಿ ಗ್ರಾಮಸ್ಥರು

ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರೇನಹಳ್ಳಿ ಗ್ರಾಮಸ್ಥರು

ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಮಾರೇನಹಳ್ಳಿ ಗ್ರಾಮಸ್ಥರು

ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರೇನಹಳ್ಳಿ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT