ಮಂಡ್ಯ: ‘ಮೈಷುಗರ್ ಕಾರ್ಖಾನೆ 2023-24ನೇ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆಯನ್ನು ಜೂನ್ 30ರಂದು ಪ್ರಾರಂಭಿಸಲಾಗುವುದು’ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ ಪಾಟೀಲ ತಿಳಿಸಿದರು.
‘ಕಾರ್ಖಾನೆಯ ಯಂತ್ರಗಳ ದುರಸ್ತಿ ಕಾರ್ಯವು ಪೂರ್ಣಗೊಂಡಿದ್ದು, ನಿರಂತರ ಕಬ್ಬು ಅರೆಯುವಿಕೆಗೆ ಸಜ್ಜಾಗಿದೆ. ಕಬ್ಬು ಕಟಾವು ಹಾಗೂ ಕಾರ್ಮಿಕರ ವ್ಯವಸ್ಥೆಯನ್ನೂ ಕಂಪನಿ ವತಿಯಿಂದ ವ್ಯವಸ್ಥೆ ಮಾಡಲಾಗುವುದು. ರೈತರು ಕಬ್ಬು ಕಟಾವು ಮಾಡಿದ 24 ಗಂಟೆಯೊಳಗೆ ನುರಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನಗಳಿಗೊಮ್ಮೆ ಕಬ್ಬಿನ ಹಣ ಪಾವತಿಸಲಾಗುವುದು. ರೈತರು ಕಂಪನಿಯ ಏಳಿಗೆಗಾಗಿ ತಾವು ಬೆಳೆದ ಗುಣಮಟ್ಟದ ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಪರಭಾರೆ ಮಾಡದೆ ಮೈಷುಗರ್ ಕಾರ್ಖಾನೆಗೆ ಸರಬರಾಜು ಮಾಡಬೇಕು’ ಎಂದರು.
‘ಸರ್ಕಾರದದಿಂದ ಕಾರ್ಖಾನೆಯ ಖಾತೆಗೆ ₹ 50 ಕೋಟಿ ಹಣ ಜಮೆ ಆಗಿದೆ, ಸದ್ಯಕ್ಕೆ ಹಣದ ಕೊರತೆ ಇಲ್ಲ. ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನಗಳಿಗೊಮ್ಮೆ ಹಣ ಬಿಡುಗಡೆ ಮಾಡಲಾಗುವುದು. ಕಾರ್ಖಾನೆಯಲ್ಲಿ 18 ಸಾವಿರ ಕ್ವಿಂಟಲ್ ಸಕ್ಕರೆ ಇದ್ದು ಅದನ್ನ ಮಾರಾಟ ಮಾಡಿ ಹಣಕಾಸಿನ ಪರಿಸ್ಥಿತಿಯನ್ನು ಸರಿದೂಗಿಸಲಾಗುವುದು’ ಎಂದರು.
‘ಒಂದು ಸಾವಿರ ಸ್ಥಳೀಯರು ಕಾರ್ಮಿಕರು, ಬಳ್ಳಾರಿಯಿಂದ ಸಾವಿರ ಕಾರ್ಮಿಕರು, ಮಹಾರಾಷ್ಟ್ರ 500, ವಿಜಯಪುರ 500, ಜಾರ್ಖಂಡ್‌ನಿಂದ 500 ಕಾರ್ಮಿಕರು ಸೇರಿದಂತೆ ಒಟ್ಟು 3,500 ಕಾರ್ಮಿಕರು ಕೆಲಸ ನಿರ್ವಹಿಸಲು ಸಿದ್ದರಾಗಿದ್ದಾರೆ. ಸದ್ಯ 300 ಕಾರ್ಮಿಕರು ಕೆಲಸ ನಿರ್ವಹಿಸಿಸುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.