ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಕಾರಾಗೃಹ ಅಕ್ರಮ ತಡೆಗೆ ‘ಪ್ರಿಸನ್‌ ಕಾಲ್‌ ಸಿಸ್ಟಂ’

ಕೈದಿಗಳಿಗೆ ‘ಇ–ಮುಲಾಖಾತ್‌’ ಮತ್ತು ದೂರವಾಣಿ ಕರೆ ಸೌಲಭ್ಯ
Published 2 ಸೆಪ್ಟೆಂಬರ್ 2024, 20:26 IST
Last Updated 2 ಸೆಪ್ಟೆಂಬರ್ 2024, 20:26 IST
ಅಕ್ಷರ ಗಾತ್ರ

ಮಂಡ್ಯ: ಕಾರಾಗೃಹ ಸಿಬ್ಬಂದಿಯ ಕಣ್ತಪ್ಪಿಸಿ ಕೈದಿಗಳು ಕಾನೂನುಬಾಹಿರವಾಗಿ ಮೊಬೈಲ್‌ಫೋನ್ ಬಳಸುವುದನ್ನು ತಡೆಗಟ್ಟಲೆಂದೇ, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ಉಚಿತ ದೂರವಾಣಿ ವ್ಯವಸ್ಥೆ (ಪ್ರಿಸನ್‌ ಕಾಲ್‌ ಸಿಸ್ಟಮ್‌) ಮತ್ತು ವಿಡಿಯೊ ಸಂದರ್ಶನ (ಇ–ಮುಲಾಖಾತ್‌) ಸೌಲಭ್ಯ ಕಲ್ಪಿಸಿದೆ. 

ರಾಜ್ಯದ ಕೇಂದ್ರ ಕಾರಾಗೃಹ ಮತ್ತು ಜಿಲ್ಲಾ ಕಾರಾಗೃಹಗಳಲ್ಲಿ ಒಟ್ಟು 83 ‘ಪ್ರಿಸನ್‌ ಕಾಲ್‌ ಸಿಸ್ಟಮ್‌’ ಉಪಕರಣ ಅಳವಡಿಸಲಾಗಿದೆ. ಪ್ರತಿ ಕೈದಿಯು ನಿರ್ದಿಷ್ಟವಾದ ಮೂರು ಸಂಖ್ಯೆಗಳಿಗೆ (ವಕೀಲರು, ಕುಟುಂಬಸ್ಥರು ಮತ್ತು ಸಂಬಂಧಿಕರು) ಕರೆ ಮಾಡಲು ಅವಕಾಶವಿದೆ. 

‘ಟೆಲಿಫೋನ್‌ ಬೂತ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಕೈದಿ ಯಾರೊಂದಿಗೆ, ಏನು ಮಾತನಾಡುತ್ತಿದ್ದಾರೆ ಎಂಬುದು ಸಂಪೂರ್ಣ ರೆಕಾರ್ಡ್‌ ಆಗುತ್ತದೆ. ನಾವು ಕಂಟ್ರೋಲ್ ರೂಮ್‌ನಲ್ಲಿ ಕುಳಿತು ಆಡಿಯೊ ಮತ್ತು ವಿಡಿಯೊ ದೃಶ್ಯಾವಳಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತೇವೆ. ಹೀಗಾಗಿ ಕೈದಿಗಳು ಸೌಲಭ್ಯ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎನ್ನುತ್ತಾರೆ ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್‌.

ನಿತ್ಯ 140 ಕರೆಗಳು!

ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಿತ್ಯ ಸರಾಸರಿ 140 ಕೈದಿಗಳು ‘ಪ್ರಿಸನ್‌ ಕಾಲ್‌ ಸಿಸ್ಟಮ್‌’ ಮೂಲಕ ಕರೆ ಮಾಡುತ್ತಿದ್ದಾರೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ಕರೆಗೆ ಗರಿಷ್ಠ 7 ನಿಮಿಷ ನಿಗದಿಪಡಿಸಿದ್ದು, ಪ್ರತಿ ಕೈದಿ ತಿಂಗಳಲ್ಲಿ ಗರಿಷ್ಠ 100 ನಿಮಿಷ ಮಾತನಾಡಬಹುದು. 

‘ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ಮಾಹಿತಿ ಪಡೆಯಲು ಮತ್ತು ವಿಷಯವನ್ನು ತಿಳಿಸಲು ಇದು ಕೈದಿಗಳಿಗೆ ಅನುಕೂಲ. ಪತ್ರ ವ್ಯವಹಾರ ಮಾಡುವವರಿಗೆ ಉಚಿತವಾಗಿ ಪೋಸ್ಟ್‌ ಕಾರ್ಡ್‌ಗಳನ್ನು ಒದಗಿಸುತ್ತೇವೆ. ಈ ಸೌಲಭ್ಯಗಳು ಕೈದಿಗಳ ಖಿನ್ನತೆಯನ್ನು ದೂರ ಮಾಡುತ್ತವೆ’ ಎನ್ನುತ್ತಾರೆ ಕಾರಾಗೃಹದ ವೀಕ್ಷಕರು.

ಮೊಬೈಲ್‌ ಬಳಸಿದರೆ 5 ವರ್ಷ ಶಿಕ್ಷೆ

ಕಾರಾಗೃಹದಲ್ಲಿ ಮೊಬೈಲ್‌ಫೋನ್ ಬಳಸಿದರೆ ಮೊದಲು 6 ತಿಂಗಳ ಶಿಕ್ಷೆ ಇತ್ತು. ಕಾರಾಗೃಹಗಳ ಅಧಿನಿಯಮಕ್ಕೆ 2022ರಲ್ಲಿ ತಿದ್ದುಪಡಿ ತಂದ ನಂತರ, ಮೊಬೈಲ್‌ ಸೇರಿದಂತೆ ಯಾವುದೇ ನಿಷೇಧಿತ ವಸ್ತುಗಳನ್ನು ಕೈದಿಗಳು ಬಳಕೆ ಮಾಡಿದರೆ ಮತ್ತು ಅದಕ್ಕೆ ಸಹಾಯ ಮಾಡುವ ಅಧಿಕಾರಿ, ಸಿಬ್ಬಂದಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಬಹುದು. ಮಂಡ್ಯ ಕಾರಾಗೃಹದಲ್ಲಿ ಕಾನೂನುಬಾಹಿರವಾಗಿ ಮೊಬೈಲ್‌ ಬಳಕೆ ಮಾಡಿದ ಆರೋಪದ ಮೇಲೆ ಮಂಡ್ಯ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ 5 ಪ್ರಕರಣಗಳನ್ನು ದಾಖಲಿಸಲಾಗಿದೆ.

‘ದುಷ್ಕರ್ಮಿಗಳ ಭೇಟಿಗೆ ಕಡಿವಾಣ’

‘ಮುಖಾಮುಖಿ ಸಂದರ್ಶನದಲ್ಲಿ ಕೆಲವೊಮ್ಮೆ ಕೈದಿಗಳನ್ನು ಭೇಟಿ ಮಾಡಲು ದುಷ್ಕರ್ಮಿಗಳು ಸ್ನೇಹಿತರ ಸೋಗಿನಲ್ಲಿ ಬರುತ್ತಿದ್ದರು. ಆದರೆ ಇ–ಮುಲಾಖಾತ್‌ (ವಿಡಿಯೊ ಸಂದರ್ಶನ) ವ್ಯವಸ್ಥೆಯಿಂದ ಅದಕ್ಕೆ ಕಡಿವಾಣ ಬಿದ್ದಿದೆ’ ಎನ್ನುತ್ತಾರೆ ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್‌. ‘ಕೈದಿಗಳ ಕುಟುಂಬದವರು ಅಥವಾ ಸ್ನೇಹಿತರು (ಸಂದರ್ಶಕರು) ಸ್ಮಾರ್ಟ್‌ಫೋನ್‌/ ಕಂಪ್ಯೂಟರ್‌ ಮೂಲಕ NPIP ವೆಬ್‌ಸೈಟ್‌ನಲ್ಲಿ ಹೆಸರು ವಿಳಾಸ ದೂರವಾಣಿ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಸಂದರ್ಶಕರ ಕೋರಿಕೆಯನ್ನು ಕಾರಾಗೃಹದ ಸಿಬ್ಬಂದಿ ಅನುಮತಿಸಿ ದಿನಾಂಕ ಮತ್ತು ಸಮಯ ನಿಗದಿಪಡಿಸುತ್ತಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT