ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿವಾಸಿಗಳಿಗೆ ಮಂಡ್ಯದಲ್ಲಿ ಮನೆ: ಅನುಮಾನಕ್ಕೆ ಕಾರಣವಾದ ಜಿ ಪ್ಲಸ್‌–2

6 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ ಕಾಮಗಾರಿ, ಅಂಬರೀಷ್‌ ಕನಸಿಗೆ ಅಧಿಕಾರಿಗಳ ಎಳ್ಳುನೀರು
Last Updated 18 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಹಾಲಹಳ್ಳಿ ಕೊಳೆಗೇರಿ ನಿವಾಸಿಗಳಿಗಾಗಿ ಕೊಳಚೆ ನಿರ್ಮೂಲನಾ ಮಂಡಳಿ ಕೈಗೊಂಡಿರುವ ಮನೆ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಆದರೆ ಬಾಕಿ ಉಳಿದಿರುವ 80 ಮನೆಗಳನ್ನು ‘ಜಿ ಪ್ಲಸ್‌–2' ಮಾದರಿಯಲ್ಲಿ ನಿರ್ಮಿಸುತ್ತಿರುವ ಮಂಡಳಿಯ ನಡೆ ಅನುಮಾನಕ್ಕೆ ಕಾರಣವಾಗಿದೆ.

ದಿ.ಅಂಬರೀಷ್‌ ವಸತಿ ಸಚಿವರಾಗಿದ್ದಾಗ 2014ರಲ್ಲಿ ರಾಜೀವ್‌ ಆವಾಸ್‌ ಯೋಜನೆಯಡಿ ಕಾಮಗಾರಿ ಆರಂಭಗೊಂಡಿತ್ತು. ₹ 65 ಕೋಟಿ ವೆಚ್ಚದಲ್ಲಿ 712 ಮನೆಗಳ ಜಿ ಪ್ಲಸ್‌–1 (ತಳ ಮತ್ತು ಮೇಲ್ಮಹಡಿ) ಕಾಮಗಾರಿಗೆ ಯೋಜನೆ ರೂಪಿಸಲಾಗಿತ್ತು. ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಲು ಗಡುವು ವಿಧಿಸಲಾಗಿತ್ತು. ಆದರೆ 6 ವರ್ಷಗಳಾದರೂ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. 632 ಮನೆಗಳು ನಿರ್ಮಾಣವಾಗಿ ವರ್ಷ ಕಳೆದರೂ ನಿವಾಸಿಗಳಿಗೆ ಇನ್ನೂ ಹಂಚಿಕೆ ಮಾಡಿಲ್ಲ.

ಈ ನಡುವೆ ಬಾಕಿ ಉಳಿದಿರುವ 80 ಮನೆಗಳ ಕಾಮಗಾರಿಯಾಗಿ ಜಾಗ ಗುರುತಿಸಲಾಗಿದೆ. ಆದರೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಪ್ರತ್ಯೇಕ ಜಾಗದಲ್ಲಿ ಮನೆ ನಿರ್ಮಾಣ ಮಾಡದೇ ಈಗಿರುವ ಕಟ್ಟಡಗಳ ಮೇಲೆಯೇ ಜಿ ಪ್ಲಸ್‌–2 (ತಳ, ಮೇಲ್ಮಹಡಿ, 2ನೇ ಮಹಡಿ) ಮಾದರಿಯಲ್ಲಿ ಕಾಮಗಾರಿ ಆರಂಭಿಸಿದ್ದಾರೆ.
ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದ್ದು ಕೊಳೆಗೇರಿ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿಗಳು ನಿರ್ಮಾಣ ವೆಚ್ಚ ಹೆಚ್ಚಾಗುವಂತೆ ಮಾಡಿದ್ದಾರೆ. ಜೊತೆಗೆ 80 ಮನೆಗಳನ್ನು ಜಿ ಪ್ಲಸ್‌–2 ಮಾದರಿಯಲ್ಲಿ ನಿರ್ಮಿಸಿ ಉಳಿಕೆ ಹಣದ ದುರ್ಬಳಕೆ ಮಾಡಿಕೊಳ್ಳಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

‘80 ಮನೆಗಳಿಂದ ಅಡಿಪಾಯದ ವೆಚ್ಚ, ಕಟ್ಟಡ ನಿರ್ಮಾಣ ವೆಚ್ಚ, ಜಾಗ ಉಳಿತಾಯವಾಗುತ್ತದೆ. ಅಂತಿಮ ಹಂತದಲ್ಲಿ ಹಣ ಉಳಿಸಿಕೊಳ್ಳಲು ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಂತ್ರ ರೂಪಿಸಿದ್ದಾರೆ’ ಎಂದು ಕೊಳೆಗೇರಿ ನಿವಾಸಿ ಬಾಬು ಆರೋಪಿಸಿದರು.

ಅಂಬರೀಷ್‌ ಅವರಿದ್ದಾಗಲೇ ಜಿ ಪ್ಲಸ್‌–2 ಕಾಮಗಾರಿಗೆ ಅನುಮೋದನೆ ದೊರೆತಿತ್ತು. ಆದರೆ ಕೊಳೆಗೇರಿ ನಿವಾಸಿಗಳು ಹಾಗೂ ವಿವಿಧ ಸಂಘಟನೆ ಮುಖಂಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜನರ ಒತ್ತಾಯಕ್ಕೆ ಮಣಿದ ಅಂಬರೀಷ್‌, ಯೋಜನೆಯನ್ನು ಮಾರ್ಪಾಡು ಮಾಡಿ ಜಿ ಪ್ಲಸ್‌–1ಗೆ ಸೀಮಿತಗೊಳಿಸಿದ್ದರು. ಹೀಗಾಗಿ ಯೋಜನೆಯನ್ನು ಅಂಬರೀಷ್‌ ಅವರ ಕನಸಿನ ಯೋಜನೆ ಎಂದೇ ಬಿಂಬಿಸಲಾಗಿತ್ತು. ಈಗ ಅಂತಿಮ ಹಂತದಲ್ಲಿ ಮತ್ತೆ ಜಿ ಪ್ಲಸ್‌–2 ಕಾಮಗಾರಿ ನಡೆಸಲು ಮುಂದಾಗಿರುವುದು ವಿರೋಧಕ್ಕೆ ಕಾರಣವಾಗಿದೆ.

‘ಜಿ ಪ್ಲಸ್‌–2 ಕಾಮಗಾರಿ ಕೈಬಿಟ್ಟು ಪ್ರತ್ಯೇಕವಾಗಿಯೇ ಬಾಕಿ ಉಳಿದ ಮನೆ ನಿರ್ಮಿಸಬೇಕು. ಕೊರತೆಗಳ ನಡುವೆ ಸಂಕಷ್ಟದಲ್ಲಿ ಬದುಕುತ್ತಿರುವ ಶ್ರಮಿಕರಿಗೆ ನೆಮ್ಮದಿಯ ಜೀವನ ನೀಡಬೇಕು’ ಎಂದು ‘ಸ್ವಂತ ಮನೆ ನಮ್ಮ ಹಕ್ಕು’ ಸಂಘಟನೆ ಮುಖಂಡ ಅಭಿಗೌಡ ಒತ್ತಾಯಿಸಿದರು.

********

ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ ಕಾರಣ ಜಿ ಪ್ಲಸ್‌–2 ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು

–ರಾಮಚಂದ್ರ, ಎಇಇ, ಕೊಳಚೆ ನಿರ್ಮೂಲನಾ ಮಂಡಳಿ

*****

ಗುತ್ತಿಗೆದಾರರ ಮುಖವನ್ನೇ ನೋಡಿಲ್ಲ

‘ನಾನು ಶಾಸಕನಾಗಿ ಎರಡು ವರ್ಷವಾಗಿದೆ. ಇಲ್ಲಿಯವರೆಗೂ ಹಾಲಹಳ್ಳಿಯಲ್ಲಿ ಮನೆ ನಿರ್ಮಿಸುತ್ತಿರುವ ಗುತ್ತಿಗೆದಾರನ ಮುಖವನ್ನೇ ನೋಡಿಲ್ಲ. ಆಧಿಕಾರಿಗಳು ಕೂಡ ಯೋಜನೆ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಬಾಕಿ 80 ಮನೆ ನಿರ್ಮಿಸಲು ಜಾಗ ಅಳತೆ ಮಾಡಲಾಗಿದ್ದು ಪ್ರತ್ಯೇಕವಾಗಿಯೇ ನಿರ್ಮಿಸಬೇಕು. ಜಿ ಪ್ಲಸ್‌–2 ಮಾಡಕೂಡದು’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

‘ಮಂಡಳಿ ಅಧಿಕಾರಿಗಳನ್ನು ಕೂಡಲೇ ಭೇಟಿ ಮಾಡಿ ಯೋಜನೆಯ ಬಗ್ಗೆ ಚರ್ಚೆ ನಡೆಸುತ್ತೇನೆ. ಆದಷ್ಟು ಬೇಗ ಕೊಳೆಗೇರಿ ನಿವಾಸಿಗಳಿಗೆ ಮನೆ ನೀಡಲು ಕ್ರಮ ವಹಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT