ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಐಟಿಐ ಕಲಿಕಾ ಕೇಂದ್ರಗಳಲ್ಲಿ ಅತ್ಯಾಧುನಿಕ ಸೌಲಭ್ಯ

ಮೇಲ್ದರ್ಜೆಗೆ ಏರಿದ ಜಿಲ್ಲೆಯ 6 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಪ್ರಧಾನಿ ಚಾಲನೆ
Last Updated 20 ಜೂನ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ 6 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳು ಕಲಿಕಾ ಕೇಂದ್ರಗಳಾಗಿ ಉನ್ನತೀಕರಣಗೊಂಡಿದ್ದು ಅತ್ಯಾಧುನಿಕ ಯಂತ್ರೋಪಕರಣಗಳು ಕೇಂದ್ರಕ್ಕೆ ಬಂದಿವೆ. ಕೈಗಾರಿಕೆಗಳಿಗೆ ಅವಶ್ಯವಿರುವ ಕೌಶಲ ತರಬೇತಿಯು ಕಲಿಕಾ ಕೇಂದ್ರದಲ್ಲೇ ದೊರೆಯಲಿದ್ದು ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ಹೆಚ್ಚಾಗಲಿದೆ.

ರಾಜ್ಯದಲ್ಲಿ ಮೇಲ್ದರ್ಜೆಗೆ ಏರಿಸಲಾದ 150 ಐಟಿಐಗಳಿಗೆ ಪ್ರಧಾನಮಂತ್ರಿ ಸೋಮವಾರ ಏಕಕಾಲದಲ್ಲಿ ವರ್ಚ್ಯುವಲ್‌ ಮೂಲಕ ಚಾಲನೆ ನೀಡಿದರು. ಟಾಟಾ ಸಂಸ್ಥೆ ಸಹಯೋಗದಲ್ಲಿ ಪ್ರತಿ ಐಟಿಐಗೂ ₹ 30 ಕೋಟಿ ವೆಚ್ಚದಲ್ಲಿ ವರ್ಕ್‌ಶಾಪ್‌ ಹಾಗೂ ಕಂಪ್ಯೂಟರ್‌ ಪ್ರಯೋಗಾಲಯ ನಿರ್ಮಾಣ ಮಾಡಲಾಗಿದೆ. ಆಟೊಮೇಟಿವ್‌, ಗೂಡ್ಸ್–ತಯಾರಿಕೆ, ರೋಬೋಟಿಕ್‌, ಪಂಬ್ಲಿಂಗ್‌ ವಿಭಾಗದಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯಲಿದ್ದಾರೆ.

ಮಂಡ್ಯದ ಸರ್ಕಾರಿ ಐಟಿಐ ಸೇರಿದಂತೆ ಪಾಂಡವಪುರ ತಾಲ್ಲೂಕಿನ ಚಿನಕುರುಳಿ, ಕೆ.ಆರ್‌.ಪೇಟೆ, ಮಳವಳ್ಳಿ, ನಾಗಮಂಗಲ, ಮದ್ದೂರು ಐಟಿಐಗಳಲ್ಲಿ ಕಲಿತಾ ಕೇಂದ್ರಗಳು ಉದ್ಘಾಟನೆಗೊಂಡವೆ. ನಿರ್ಮಿತಿ ಕೇಂದ್ರದ ವತಿಯಿಂದ ಕಟ್ಟಡ ನಿರ್ಮಾಣಗೊಂಡಿವೆ. ಟಾಟಾ ಕಂಪನಿಯ ಸಂಪನ್ಮೂಲ ವ್ಯಕ್ತಿಗಳು ಕೇಂದ್ರಕ್ಕೆ ಬಂದು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.

ಕೇಂದ್ರದಲ್ಲಿ ಏನೇನಿದೆ?: ಹೊಸ ತಲೆಮಾರಿನ ತಂತ್ರಜ್ಞರಿಗೆ ಅವಶ್ಯವಿರುವ ಯಂತ್ರೋಪಕರಣಗಳು ಕಲಿಕಾ ಕೇಂದ್ರಗಳಿಗೆ ಬಂದಿವೆ. ಆಟೊಮೇಟಿವ್‌ ಕ್ಷೇತ್ರದ ಹೆಚ್ಚು ಪ್ರಚಾರಕ್ಕೆ ಬಂದಿರುವ ವಿದ್ಯುಚ್ಛಕ್ತಿ ವಾಹನಗಳ ರಚನೆಯನ್ನು ತಿಳಿಸಿಕೊಡುವ ಉಪಕರಣ ಇಲ್ಲಿವೆ. ಎಲೆಕ್ಟ್ರಿಕ್‌ ವಾಹನದ ಬಿಡಿ ಭಾಗಗಳ ಪರಿಚಯ, ನಿಯಂತ್ರಣ ಕೇಂದ್ರ, ಉಪಕರಣಗಳ ಅಳವಡಿಕೆ, ವೈರಿಂಗ್‌ ಯೂನಿಟ್‌ ಮುಂತಾದ ವಿಚಾರಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ.

ಸ್ಕೂಟರ್, ಬೈಕ್, ಬೃಹತ್‌ ವಾಹನಗಳ ಕ್ಲಚ್‌, ಸಸ್ಪೆನ್ಶನ್‌ ಯೂನಿಟ್‌, ಎಂಜಿನ್‌ ಕೂಲಿಂಗ್‌ ಸಿಸ್ಟಮ್ಸ್‌, ಲ್ಯೂಬ್ರಿಕೇಶನ್‌ ವ್ಯವಸ್ಥೆ, ಏರ್‌ ಬ್ರೇಕ್‌ ಸಿಸ್ಟಂ, ಪವರ್‌ ಸ್ಟೀರಿಂಗ್‌, ರಿಯರ್, ಇಗ್ನೀಷಿಯನ್‌ ಯೂನಿಗಟ್‌ಗಳ ಪರಿಚಯವನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತಿಳಿದುಕೊಳ್ಳಲಿದ್ದಾರೆ. ಅದಕ್ಕೆ ಮಾದರಿಯಾಗಿ ಕೆಲವು ವಾಹನಗಳು ಬಂದಿವೆ. ಸೋಲಾರ್‌ ಶಕ್ತಿ, ವಿದ್ಯುತ್‌ಚ್ಛಕ್ತಿಯಿಂದ ನಡೆಯವ ಮಾದರಿ ವಾಹನಗಳನ್ನು ಕೇಂದ್ರಕ್ಕೆ ತರಲಾಗಿದೆ.

ವಾಹನಗಳ ದೀಪ ವ್ಯವಸ್ಥೆಯನ್ನು ತಿಳಿಸಿಕೊಡಲು ವಿವಿಧ ರೀತಿಯ ಲೈಟಿಂಗ್‌, ವೈರಿಂಗ್‌ ಮಾದರಿಗಳನ್ನು ತಂದಿರಿಸಲಾಗಿದೆ. ಸ್ವಯಂ ಚಾಲಿತ ವಾಹನಗಳ ರಚನೆಯನ್ನು ಪರಿಚಯಿಸುವ ಹಲವು ಯಂತ್ರೋಪಕರಣಗಳು ಕೇಂದ್ರಕ್ಕೆ ಬಂದಿವೆ.

ಕೈಗಾರಿಕೆಗಳಲ್ಲಿ ಹೆಚ್ಚು ಪ್ರಚಲಿತಗೊಳ್ಳುತ್ತಿರುವ ರೋಬೋಟಿಕ್‌ ತಂತ್ರಜ್ಞಾನದ ಅವರಿವನ್ನೂ ಐಟಿಐ ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ವಸ್ತುಗಳನ್ನು ಕೊಂಡೊಯ್ಯವ (ಪಿಕ್‌ ಅಂಡ್‌ ಪ್ಲೇಸ್‌) ರೋಬೋಟ್‌, ಯಂತ್ರೋಪಕರಣಗಳನ್ನು ವೆಲ್ಡಿಂಗ್‌ ಮಾಡುವ ರೋಬೋಟ್‌ಗಳು ಬಂದಿವೆ. ಜಪಾನ್‌ನಲ್ಲಿ ತಯಾರಾಗಿರುವ ಈ ರೋಬೋಟ್‌ಗಳು ವಿದ್ಯಾರ್ಥಿಗಳಿಗೆ ಆಧುನಿಕ ರೋಬೋಟಿಕ್‌ ತಂತ್ರಜ್ಞಾನದ ಪರಿಚಯ ಮಾಡಿಕೊಡಲಿವೆ. 40 ಕಂಪ್ಯೂಟರ್‌ ಇರುವ ಹೈಟೆಕ್‌ ಲ್ಯಾಬ್‌ ಕೂಡ ಸಿದ್ಧಗೊಂಡಿದೆ.

******

ಪ್ಲಂಬಿಂಗ್‌ ಅಲ್ಪಾವಧಿ ಕೋರ್ಸ್‌

2 ವರ್ಷದ ಐಟಿಐ ಕೋರ್ಸ್‌ ಜೊತೆಗೆ ‘ಪ್ಲಂಬಿಂಗ್‌’ ತರಬೇತಿಯ ಅಲ್ಪಾವಧಿ ತರಬೇತಿಯನ್ನೂ ಕಲಿತಾ ಕೇಂದ್ರದಲ್ಲಿ ಪಡೆಯಬಹುದಾಗಿದೆ. ತರಬೇತಿಗೆ ಅವಶ್ಯವಿರುವ ಅತ್ಯಾಧುನಿಕ ಪ್ಲಂಬಿಂಗ್‌ ಉಪಕರಣಗಳು ಕೇಂದ್ರಕ್ಕೆ ಬಂದಿವೆ.

ಮನೆ ಬಳಕೆಯ ಸ್ಯಾನಿಟರಿ ಯೂನಿಟ್ಸ್‌ ಅಳವಡಿಕೆ, ಮಳೆ ಕೊಯ್ಲು ಘಟಕ ಸ್ಥಾಪನೆ, ಸೋಲರ್‌ ಘಟಕ ಅಳವಡಿಕೆ, ಅಗ್ನಿಶಾಮಕ ಉಪಕರಣ ಬಳಕೆಯ ತರಬೇತಿ ಈ ಕೋರ್ಸ್‌ನಲ್ಲಿ ದೊರೆಯಲಿದೆ.

*********

ಕೇವಲ ₹ 1,200 ಶುಲ್ಕ

‘ಕೇಂದ್ರಗಳಲ್ಲಿ ಈಗಾಗಲೇ ಒಂದು ಬ್ಯಾಚ್‌ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರಿಸಿದರೆ ಇನ್ನೂ ಹೆಚ್ಚಿನ ಬ್ಯಾಚ್‌ ಆರಂಭಿಸಲಾಗುವುದು. ಪ್ರತಿ ವರ್ಷ ತಲಾ ಪ್ರತಿ ವಿದ್ಯಾರ್ಥಿಯಿಂದ ಕೇವಲ 1,200 ಶುಲ್ಕ ನಿಗದಿ ಮಾಡಲಾಗಿದೆ’ ಎಂದು ಮಂಡ್ಯ ಸರ್ಕಾರಿ ಐಟಿಐ ಪ್ರಾಚಾರ್ಯ ಆರ್‌.ನಾಗಾನಂದ ತಿಳಿಸಿದರು.

‘ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಕೌಶಲ ತರಬೇತಿ ದೊರೆಯಲಿದೆ. ಐಟಿಐ ಹಾಗೂ ಕೈಗಾರಿಕೆ ನಡುವೆ ಇದ್ದ ಅಂತರ ಇನ್ನುಮುಂದೆ ಮರೆಯಲಾಗಲಿದೆ’ ಎಂದರು.

***

ಟಾಟಾ ಸಂಸ್ಥೆಯಿಂದ ಅತ್ಯಂತ ಗುಣಮಟ್ಟದ ಯಂತ್ರೋಪಕರಣಗಳನ್ನು ತರಬೇತಿ ಸಂಸ್ಥೆಗಳಿಗೆ ವಿತರಣೆ ಮಾಡಲಾಗಿದೆ. ಕನಿಷ್ಠ 2 ವರ್ಷ ಸಂಸ್ಥೇಯೇ ಕಲಿತಾ ಕೇಂದ್ರಗಳನ್ನು ನಿರ್ವಹಣೆ ಮಾಡಲಿದೆ

–ಮಹಾಲಿಂಗೇಗೌಡ, ಟಾಟಾ ಸಂಸ್ಥೆ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT