ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ಮುಲ್‌ ಹಾಲು–ನೀರು ಹಗರಣ: ಸುತ್ತಲೂ ರಾಜಕಾರಣ

ಪೊಲೀಸ್‌ ತನಿಖೆಯ ಸುತ್ತ ಹನುಮಾನಗಳ ಹುತ್ತ, ಪ್ರಭಾವಿಗಳ ರಕ್ಷಣೆಗಾಗಿ ಯತ್ನ ಆರೋಪ
Last Updated 14 ಜೂನ್ 2021, 16:46 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಹಾಲು ಒಕ್ಕೂಟದಲ್ಲಿ (ಮನ್‌ಮುಲ್‌) ಹಾಲಿಗೆ ನೀರು ಬೆರೆಸಿದ ಪ್ರಕರಣ ಸಿಐಡಿ ಅಂಗಳ ಸೇರಿದೆ. ಪೊಲೀಸ್‌ ತನಿಖೆಯಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ತಿಳಿಸಿದ್ದಾರೆ.

ಮನ್‌ಮುಲ್‌ ಸುತ್ತಲೂ ರಾಜಕಾರಣವೇ ತುಂಬು ತುಳುಕುತ್ತಿರುವ ಕಾರಣ ಹಗರಣ ನಡೆದು 15 ದಿನ ಕಳೆದರೂ ಇಲ್ಲಿಯವರೆಗೆ ಪ್ರಮುಖ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಪೊಲೀಸ್‌ ತನಿಖೆಯಲ್ಲಿ ಹಲವು ಅನುಮಾನ ಮೂಡಿರುವ ಕಾರಣ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟ್ಯಾಂಕರ್‌ ಗುತ್ತಿಗೆ ಪಡೆದು ಹಾಲು ಸರಬರಾಜು ಮಾಡುತ್ತಿದ್ದ ಪ್ರಮುಖ ಗುತ್ತಿಗೆದಾರೊಬ್ಬರ ವಿರುದ್ಧ ಇಲ್ಲಿಯವರೆಗೂ ಎಫ್‌ಐಆರ್‌ ದಾಖಲು ಮಾಡದೇ ಕೇವಲ ಟ್ಯಾಂಕರ್‌ ಚಾಲಕರು ಹಾಗೂ ಅಧಿಕಾರಿಗಳ ವಿರುದ್ಧವಷ್ಟೇ ಪ್ರಕರಣ ದಾಖಲು ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆ ಗುತ್ತಿಗೆದಾರ ಮನ್‌ಮುಲ್‌ ಮಾತ್ರವಲ್ಲದೇ ರಾಜ್ಯದ ಹಲವು ಒಕ್ಕೂಟಗಳಲ್ಲಿ ಟ್ಯಾಂಕರ್‌ ಗುತ್ತಿಗೆ ಪಡೆದಿದ್ದು ಅಲ್ಲಿಯೂ ಇದೇ ರೀತಿ ನೀರು ಬೆರೆಸಿ ಹಾಲು ಸರಬರಾಜು ಮಾಡಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ.

ಕಳೆದ ವಾರ ಮನ್‌ಮುಲ್‌ ಆವರಣಕ್ಕೆ ಭೇಟಿ ನೀಡಿದ್ದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಮೂರು ದಿನದ ಒಳಗಾಗಿ ಪ್ರಕರಣದ ತನಿಖಾ ವರದಿ ಕೈಸೇರಲಿದ್ದು ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅವರು ಭೇಟಿ ನೀಡಿ ಮೂರು ದಿನಕ್ಕೆ ಸರಿಯಾಗಿ ಮುಖ್ಯಮಂತ್ರಿಗಳು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಪೊಲೀಸ್‌ ತನಿಖೆ ಏನಾಯಿತು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

‘ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸಿಐಡಿ ತನಿಖೆಯ ಮೇಲೂ ವಿಶ್ವಾಸವಿಲ್ಲ. ಇದೊಂದು ಬಹುಕೋಟಿ ಹಗರಣವಾಗಿರುವ ಕಾರಣ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ರೈತ ಮುಖಂಡ ಕೆ.ಬೋರಯ್ಯ ಒತ್ತಾಯಿಸಿದರು.

ಭಾವನಾತ್ಮಕ ಒತ್ತಡ: ಪ್ರಕರಣ ಕೇವಲ ಮನ್‌ಮುಲ್‌ಗಷ್ಟೇ ಸೀಮಿತವಾಗದೇ ರಾಜ್ಯದ ಎಲ್ಲಾ ಒಕ್ಕೂಟಗಳಲ್ಲಿ ಇದೇ ರೀತಿಯ ಹಗರಣ ನಡೆಯುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು ಮೊದಲಿನಿಂದಲೂ ಉನ್ನತ ಮಟ್ಟದ ತನಿಖೆಗೆ ಒತ್ತಡವಿತ್ತು. ಹಾಲಿನ ವಿಷಯ ಭಾವನಾತ್ಮಕವಾಗಿರುವ ಕಾರಣ ನೀರು ಬೆರೆಸಿದ ಪ್ರಕರಣ ರಾಜ್ಯದಾದ್ಯಂತ ಖಂಡನೆಗೆ ಒಳಗಾಗಿತ್ತು.

ಬೆಂಗಳೂರು ನಗರಕ್ಕೆ ಮನ್‌ಮುಲ್‌ ಹೆಚ್ಚಿನ ಹಾಲು ಸರಬರಾಜಾಗುತ್ತಿದ್ದು ಅಲ್ಲಿಯ ಜನರೂ ಆಕ್ರೋಶ ಹೊರಹಾಕಿದ್ದರು. ಒತ್ತಡಕ್ಕೆ ಒಳಗಾದ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ.

‘ಸಾಕ್ಷಿಗಳು ಕಣ್ಣ ಮುಂದೆಯೇ ಇವೆ, ಪಾರದರ್ಶಕವಾಗಿ ತನಿಖೆ ನಡೆಸಿದ್ದರೆ ಇಷ್ಟರ ವೇಳೆಗೆ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬಹುದಾಗಿತ್ತು. ಆದರೆ ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಈಗಲೂ ತನಿಖೆಯ ನಾಟಕ ನಡೆಯುತ್ತಿದೆ. ಮನ್‌ಮುಲ್‌ನಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್‌, ಸರ್ಕಾರ ನಡೆಸುತ್ತಿವ ಬಿಜೆಪಿ ಎರಡೂ ಪಕ್ಷಗಳ ರಾಜಕಾರಣದಿಂದಾಗಿ ರೈತರು ಪರಿತಪಿಸುವಂತಾಗಿದೆ’ ಎಂದು ವಕೀಲ ರಾಮಯ್ಯ ತಿಳಿಸಿದರು.

ಮೂವರ ಬಂಧನ: ‘ಪ್ರಕರಣ ಸಂಬಂಧ ಇಲ್ಲಿಯವರೆಗೆ ಮೂವರನ್ನು ಬಂಧಿಸಲಾಗಿದೆ. ಒಬ್ಬರು ಈಗಾಗಲೇ ಜಾಮೀನು ಪಡೆದು ಹೊರಬಂದಿದ್ದಾರೆ. ಹಲವರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಟ್ಯಾಂಕರ್‌ ಗುತ್ತಿಗೆದಾರರ ಕುರಿತು ಎಫ್‌ಐಆರ್‌ ದಾಖಲಾಗಿಲ್ಲ. ಪ್ರಕರಣದ ಎಲ್ಲಾ ವಿವರವನ್ನು ಸಿಐಡಿ ತಂಡಕ್ಕೆ ಹಸ್ತಾಂತರ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ ತಿಳಿಸಿದರು.

ಸಿಸಿಟಿವಿ ಕ್ಯಾಮೆರಾ ಇರಲಿಲ್ಲ

‘ಮನ್‌ಮುಲ್‌ನಲ್ಲಿ 49 ಟ್ಯಾಂಕರ್‌ಗಳಿಗೆ ಟೆಂಡರ್‌ ನೀಡಲಾಗಿದ್ದು, ಅವುಗಳು ರಿಪೇರಿಗೆ ಬಂದ ಕಾರಣ ಹೆಚ್ಚುವರಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಲಾಗಿತ್ತು. ಮನ್‌ಮುಲ್‌ನ ದ್ವಾರದ ಬಳಿ, ಹಾಲು ಇಳಿಸುವ ಸಂಗ್ರಹಾಲಯದ ಬಳಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ’ ಎಂದುಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ ತಿಳಿಸಿದರು.

‘ಇಷ್ಟೇ ಅಲ್ಲದೇ ಟ್ಯಾಂಕರ್‌ ಎಂಜಿನ್‌, ಚಾರ್ಸಿ, ನೋಂದಣಿ ಸಂಖ್ಯೆಗಳಲ್ಲೂ ವ್ಯತ್ಯಾಸ ಕಂಡು ಬಂದಿದೆ. ಈ ಬಗ್ಗೆ ಆರ್‌ಟಿಒ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT