ಮಂಗಳವಾರ, ಜೂನ್ 28, 2022
28 °C
ಒಂದು ಪ್ರಕರಣಕ್ಕೆ ಹಲವು ತನಿಖೆ; ಆಡಳಿತ ಮಂಡಳಿಯ ಅನುಮಾನಾಸ್ಪದ ನಡೆ

ನೀರುಮಿಶ್ರಿತ ಹಾಲು: ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ?

ಎಂ.ಆರ್.ಅಶೋಕ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ಮನ್‌ಮುಲ್‌ಗೆ ನೀರು ಮಿಶ್ರಿತ ಹಾಲು ಸರಬರಾಜು ಮಾಡುತ್ತಿದ್ದ ಪ್ರಕರಣದ ತನಿಖೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಒಂದು ಪ್ರಕರಣಕ್ಕೆ ಹಲವು ತನಿಖೆಗಳು ನಡೆಯುತ್ತಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ.

ನಾಗಮಂಗಲದ ಡಿವೈಎಸ್‌ಪಿ ನವೀನ್ ಕುಮಾರ್ ನೇತೃತ್ವದಲ್ಲಿ ಒಂದೆಡೆ ತನಿಖೆ ನಡೆಯುತ್ತಿದೆ. ಮದ್ದೂರಿನ ಎಸ್.ಐ.ಗಳಾದ ನವೀನ್ ಗೌಡ ಹಾಗೂ ಮೋಹನ್ ಪಟೇಲ್ ಅವರು ತಂಡದಲ್ಲಿದ್ದಾರೆ. ಘಟನೆ ನಡೆದು ವಾರ ಕಳೆದರೂ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಪ್ರಕರಣದ ರೂವಾರಿಗಳು ಮನ್‌ಮುಲ್‌ ಅಂಗಳದಲ್ಲೇ ಇದ್ದಾರೆ ಎಂಬ ಮಾಹಿತಿ ಇದ್ದರೂ ಯಾವುದೇ ಅಧಿಕಾರಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಆಡಳಿತ ಮಂಡಳಿ ಸದಸ್ಯರನ್ನು ಪ್ರಕರಣದಲ್ಲಿ ಸೇರಿಸಿಕೊಂಡಿಲ್ಲ. ಹೀಗಾಗಿ ಇಡೀ ಪ್ರಕರಣ ಯಾವ ಹಂತಕ್ಕೆ ತಲುಪುತ್ತಿದೆ ಎಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉಳಿದಿವೆ.

ಇನ್ನೊಂದೆಡೆ, ಶುಕ್ರವಾರ, ಶನಿವಾರ ಮೈಸೂರು ವಿಭಾಗೀಯ ಮಟ್ಟದ ತನಿಖಾ ತಂಡವೊಂದು ಮನ್‌ಮುಲ್‌ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಜೊತೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಕೂಡ ಮನ್‌ಮುಲ್ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕೋಟ್ಯಂತರ ರೂಪಾಯಿ ಹಗರಣಕ್ಕೆ ಕಾರಣ ಯಾರು ಎಂಬ ಬಗ್ಗೆ ಸ್ಪಷ್ಟತೆ ಬಂದಿಲ್ಲ.

‘ಪ್ರಕರಣ ತನಿಖೆಯ ಹಂತದಲ್ಲಿದ್ದು ಎಲ್ಲವನ್ನೂ ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಪ್ರಕರಣದ ತನಿಖೆ ಮುಗಿದ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾಹಿತಿ ನೀಡಲಿದ್ದಾರೆ’ ಎನ್ನುತ್ತಾರೆ ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್‌ಪಿ ನವೀನ್‌ ಕುಮಾರ್‌.

ನೀರು ಮಿಶ್ರಿತ ಹಾಲು ಸರಬರಾಜು ಮಾಡುತ್ತಿದ್ದ ಟ್ಯಾಂಕರ್‌ಗಳು ಸಿಕ್ಕಿವೆ. ಟ್ಯಾಂಕರ್‌ ಮಾಲೀಕರ ವಿವರವೂ ಸಿಕ್ಕಿದೆ. ಹಾಲಿನ ಗುಣಮಟ್ಟದ ಪರೀಕ್ಷೆ ಮಾಡುತ್ತಿದ್ದ ಪರೀಕ್ಷಕರು, ತಜ್ಞರು ಹಾಗೂ ಅಧಿಕಾರಿಗಳ ತಂಡದ ಮಾಹಿತಿಯೂ ಇದೆ. ಇಷ್ಟಾದರೂ ಪ್ರಕರಣದ ತನಿಖೆಯಲ್ಲಿ ಒಂದು ಸ್ಪಷ್ಟತೆ ಇಲ್ಲ. ಇಲ್ಲಿ ಆಡಳಿತ ಮಂಡಳಿ ಯಾರನ್ನೋ ರಕ್ಷಣೆ ಮಾಡಲು ಮುಂದಾಗುತ್ತಿದೆ ಎಂಬ ಪ್ರಶ್ನೆ ಜಿಲ್ಲೆಯ ರೈತರನ್ನು ಕಾಡುತ್ತಿದೆ.

‘ಮನ್‌ಮುಲ್‌ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ಈ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲೂ ಈ ಅವ್ಯವಹಾರ ನಡೆಯುತ್ತಿತ್ತೇ ಎಂಬ ಬಗ್ಗೆ ತಿಳಿಯಬೇಕಾಗಿದೆ. ಅದಕ್ಕೆ ಸಿಬಿಐ ತನಿಖೆಯೊಂದೇ ಪರಿಹಾರ. ಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಈಗಿನ ಆಡಳಿತ ಮಂಡಳಿಯನ್ನು ರದ್ದು ಮಾಡಬೇಕು’ ಎಂದು ರೈತರ ಮುಖಂಡ ಶಿವಲಿಂಗಯ್ಯ ಒತ್ತಾಯಿಸಿದರು.

ರಾಜೀನಾಮೆ ಪಡೆಯಿರಿ: ನೀರು ಮಿಶ್ರಿತ ಹಾಲು ಸ್ವೀಕರಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿರುವ ಮನ್‌ಮುಲ್‌ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಯಾವುದೇ ನೈತಿಕತೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ರಾಜೀನಾಮೆ ಪಡೆಯಬೇಕು ಎಂದು ಹಾಲು ಉತ್ಪಾದಕರು ಒತ್ತಾಯಿಸಿದ್ದಾರೆ.

7 ಅಧಿಕಾರಿಗಳ ವರ್ಗಾವಣೆ

ಪ್ರಕರಣ ಬೆಳಕಿಗೆ ಬಂದ ವಾರದ ನಂತರ ಮನ್‌ಮುಲ್‌ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ಸೇರಿದಂತೆ ಏಳು ಅಧಿಕಾರಿಗಳನ್ನು ತರಾತುರಿಯಲ್ಲಿ ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಧಿಕಾರಿಗಳನ್ನು ರಕ್ಷಿಸಿ ಹಗರಣ ಮುಚ್ಚಿಕೊಳ್ಳಲು ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಎಂದೇ ಹೇಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರ ಅವರಿಗೆ ಹಲವು ಬಾರಿ ಕರೆ ಮಾಡಿದಾಗ ಅವರು ಕರೆ ಸ್ಥಗಿತಗೊಳಿಸಿದರು.

ನೂತನ ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ನೇಮಕಗೊಂಡಿದ್ದು, ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು