ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದ ಸೇವೆಗೆ ಸಿದ್ಧರಾಗಿ: ಡಾ. ಕೆ. ಸುಧಾಕರ್

ಸಚಿವ ಡಾ.ಕೆ.ಸುಧಾಕರ್ ಹೇಳಿಕೆ, ವೈದ್ಯಕೀಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
Last Updated 20 ಜನವರಿ 2021, 11:59 IST
ಅಕ್ಷರ ಗಾತ್ರ

ನಾಗಮಂಗಲ: ದೇಶದಲ್ಲಿ ಒಂದು ಸಾವಿರ ಜನರಿಗೆ ಕೇವಲ ಒಂದು ಹಾಸಿಗೆಯ ಸೌಲಭ್ಯವಿದೆ. ಹೀಗಾಗಿ, ತುರ್ತು ಚಿಕಿತ್ಸಾ ವಾಹನ (ಆಂಬುಲೆನ್ಸ್‌) ಮತ್ತು ಚಿಕಿತ್ಸೆಯ ವ್ಯವಸ್ಥೆಯಲ್ಲಿ ಗಣನೀಯವಾಗಿ ಬದಲಾವಣೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ 2 ಲಕ್ಷ ಜನರಿಗೆ ಒಂದು ಆಂಬುಲೆನ್ಸ್‌ ಸೌಲಭ್ಯವಿತ್ತು. ಆದರೆ, ಈಗ 30 ಸಾವಿರ ಜನರಿಗೆ ಒಂದುಆಂಬುಲೆನ್ಸ್‌ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿಯೊಂದು ಆರೋಗ್ಯ ಕೇಂದ್ರಕ್ಕೂ ಆಂಬುಲೆನ್ಸ್‌ ಒದಗಿಸಲು ಕ್ರಮವಹಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಟೆಲಿ ಮೆಡಿಸಿನ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಇದು ದೇಶದಲ್ಲೇ ವಿಭಿನ್ನ ಪ್ರಯತ್ನವಾಗಿದೆ ಎಂದರು.

ಬಾಲಗಂಗಾಧರನಾಥ ಸ್ವಾಮೀಜಿ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವ ಜೊತೆಗೆ ಗ್ರಾಮೀಣ ಭಾಗದ ಜನ ಸೇವೆಗಾಗಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದ್ದಾರೆ. ವೈದ್ಯರಾದವರಿಗೆ ಅನುಕಂಪ, ದಯೆ, ಬದ್ಧತೆ, ಅನುಭೂತಿ‌ ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ದೀರ್ಘಕಾಲದ ಅಧ್ಯಯನವನ್ನು ವೈದ್ಯಕೀಯ ಶಿಕ್ಷಣದ ನಂತರ ಮುಂದುವರಿಸಬೇಕು. ವೈದ್ಯ ವೃತ್ತಿಯಲ್ಲಿ ಅಧ್ಯಯನಕ್ಕೆ ಎಂದೂ ಕೊನೆಯಿಲ್ಲ. ತಂತ್ರಜ್ಞಾನ ಮತ್ತು ಆವಿಷ್ಕಾರಗಳು ನಿರಂತರವಾಗಿ ಬದಲಾಗುತ್ತಿರುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಯಾವ ವ್ಯಕ್ತಿಯ ಪ್ರಜ್ಞೆ ಅರಳಿದೆಯೋ ಅಂತಹ ವ್ಯಕ್ತಿ ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಯಾರನ್ನೂ ವರ್ಗೀಕರಿಸುವುದಿಲ್ಲ. ಇಂದು ವೈದ್ಯರಾಗಲು ಬಂದಿರುವ ನೀವು ಮಾನವೀಯ ಮೌಲ್ಯಗಳನ್ನು ಮರೆತರೆ ನಿಮ್ಮ ವಿದ್ಯೆ ವ್ಯರ್ಥವಾಗುತ್ತದೆ. ಕಡಿಮೆ ಪ್ರಜ್ಞೆಯಿಂದ ಉನ್ನತ ಪ್ರಜ್ಞೆ ಕಡೆಗೆ ಮನುಷ್ಯ ಸಾಗಬೇಕು. ದೇಹದ ರೋಗಗಳನ್ನು ವಾಸಿ ಮಾಡುವ ಜೊತೆಗೆ ಮನಸ್ಸಿನಿಂದ ಬರುವ ರೋಗಗಳನ್ನು ಗುಣಪಡಿಸುವುದನ್ನು ಹೇಳಿಕೊಟ್ಟರೆ ಅದೇ ನಿಜವಾದ ಶಿಕ್ಷಣವಾಗುತ್ತದೆ. ನೀವು ಎಂದಿಗೂ ಕಲಿತದ್ದು, ಮುಗಿಯಿತು ಎಂದು ಭಾವಿಸಿದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ತಂದೆ–ತಾಯಿಗಳ ತ್ಯಾಗವನ್ನು ಎಂದಿಗೂ ಮರೆಯದಿರಿ’ ಎಂದು ಹೇಳಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ‌.ಚಂದ್ರಶೇಖರ್ ಶೆಟ್ಟಿ ಮಾತನಾಡಿ, ‘ವೈದ್ಯರಾದವರು ವೃತ್ತಿಯಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಡಾ.ರವಿಶಂಕರ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

‌ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಡಾ.ಎಂ.ಎ.ಶೇಖರ್, ಆದಿಚುಂಚನಗಿರಿ ವಿವಿಯ ಡಾ.ಕೆ.ಭೈರಪ್ಪ, ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಡಾ.ಬಿ.ಜಿ.ಸಾಗರ್, ಡಾ.ನರೇಂದ್ರ, ಡಾ.ರಮೇಶ್, ಡಾ.ಪ್ರಸಾದ್ ಮತ್ತು ವಿದ್ಯಾರ್ಥಿಗಳು ಇದ್ದರು.

‘ಗ್ರಾಮೀಣ ಭಾಗದ ಸೇವೆಗೆ ಸಿದ್ಧರಾಗಿ’

ರಾಜ್ಯದ ಗ್ರಾಮೀಣ ಭಾಗದಲ್ಲಿ ಸರಿಯಾದ ತುರ್ತು ಚಿಕಿತ್ಸೆ ಇಲ್ಲದೇ‌ ಸಾವಿರಾರು ಜನರು ಮೃತಪಡುತ್ತಿದ್ದಾರೆ. ಶೇ 70ರಷ್ಟು ಉತ್ತಮ ಆಸ್ಪತ್ರೆಗಳು ನಗರ ಪ್ರದೇಶದಲ್ಲಿ ಮಾತ್ರ ಸ್ಥಾಪನೆಯಾಗಿವೆ. ಗ್ರಾಮೀಣ ಭಾಗದ ಜನರ ಸೇವೆ ಮಾಡುವವರು ಯಾರು? ಆದ್ದರಿಂದ ನೀವೆಲ್ಲರೂ ಸಹ ಗ್ರಾಮೀಣ ಭಾಗದ ಸೇವೆಗೂ ಸಿದ್ಧರಾಗಬೇಕು ಎಂದು ಡಾ.ಕೆ.ಸುಧಾಕರ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT