ಭಾನುವಾರ, ಜೂನ್ 20, 2021
23 °C
ಮುನ್ಸಿಪಲ್‌ ಹೈಸ್ಕೂಲ್‌ ದುರಸ್ತಿಗೆ ₹ 4 ಕೋಟಿ ವೆಚ್ಚ, ಪೇಟೆಬೀದಿ ಶಾಲೆ ಅಭಿವೃದ್ಧಿ ಏಕಿಲ್ಲ?

ಮಂಡ್ಯ | ಕುಸಿದು ಬೀಳುತ್ತಿದೆ ಯಡಿಯೂರಪ್ಪ ಓದಿದ ಶಾಲೆ!

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರೌಢಶಾಲೆ ಶಿಕ್ಷಣ ಪಡೆದ ಮುನ್ಸಿಪಲ್‌ ಹೈಸ್ಕೂಲ್‌ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತ ₹ 4 ಕೋಟಿ ವೆಚ್ಚ ಮಾಡುತ್ತಿದೆ. ಆದರೆ ಮುಖ್ಯಮಂತ್ರಿಗಳು 7 ಮತ್ತು 8ನೇ ತರಗತಿ ಓದಿದ, ಶತಮಾನದಷ್ಟು ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದು ಬೀಳುತ್ತಿದ್ದರೂ ಅಧಿಕಾರಿಗಳು ಅತ್ತ ಕಡೆ ತಿರುಗಿ ನೋಡುತ್ತಿಲ್ಲ.

ಯಡಿಯೂರಪ್ಪ ಅವರು ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಬೂಕನಕೆರೆಯಲ್ಲಿ ಪೂರೈಸಿ ಪ್ರಾಥಮಿಕ ಶಿಕ್ಷಣ ಪಡೆಯಲು ಮಂಡ್ಯಕ್ಕೆ ಬಂದರು. ಆನೆಕೆರೆ ಬೀದಿಯ ತಾತನ ಮನೆಯಲ್ಲಿ ತಂಗಿದ್ದರು. ಪೇಟೆಬೀದಿ ಕೆಂಪೇಗೌಡರ ಕಟ್ಟಡದಲ್ಲಿದ್ದ ಆರ್‌ಎಸ್‌ಎಸ್‌ ಕಚೇರಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಪೇಟೆಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7, 8ನೇ ತರಗತಿ ಪೂರೈಸಿ ನಂತರ ಮುನ್ಸಿಪಲ್‌ ಪ್ರೌಢಶಾಲೆಯಲ್ಲಿ 10ನೇ ತರಗತಿಯವರೆಗೆ ಓದಿದ್ದರು.

ಮಾಜಿ ಸಚಿವ ಕೆ.ವಿ.ಶಂಕರಗೌಡ, ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ ಮುಂತಾದವರು ಇದೇ ಶಾಲೆಯಲ್ಲಿ ಓದಿದವರು. ಶಾಲಾ ಆವರಣದಲ್ಲೇ ತಹಶೀಲ್ದಾರ್‌ ಹಾಗೂ ಉಪನೋಂದಣಾಧಿಕಾರಿ ಕಚೇರಿಯೂ ಇತ್ತು. ಕಚೇರಿಗಳು ಸ್ಥಳಾಂತರಗೊಂಡ ನಂತರ ಇಡೀ ಕಟ್ಟಡವನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಈಗಲೂ ಇದು ‘ಹಳೇ ತಹಶೀಲ್ದಾರ್‌ ಕಚೇರಿ ಶಾಲೆ’ ಎಂದೇ ಇದು ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ 800ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದ ಶಾಲೆಯಲ್ಲಿ ಈಗ ಕೇವಲ 20 ಮಕ್ಕಳಿದ್ದಾರೆ.

ನಗರದ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಲು ನಗರಸಭೆ 2007ರಲ್ಲಿ ಸರ್ಕಾರಿ ಶಾಲೆಯ ಕಾಂಪೌಂಡ್‌ ಸುತ್ತಲೂ 160 ಮಳಿಗೆ ನಿರ್ಮಾಣ ಮಾಡಿತು. ಆದರೆ ಮೂಲಸೌಲಭ್ಯ ಕೊರತೆಯ ನೆಪವೊಡ್ಡಿ ವ್ಯಾಪಾರಿಗಳು ಹೊಸ ಮಳಿಗೆಗಳಿಗೆ ತೆರಳಲಿಲ್ಲ. ಹೀಗಾಗಿ ಆ ಮಳಿಗೆಗಳು ಕಿಡಿಗೇಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿಯೇ ಉಳಿದವು. ಮಳಿಗೆಗೆ ಹೊಂದಿಕೊಂಡಂತಿರುವ ಶಾಲೆಗೂ ಅನೈತಿಕ ಚಟುವಟಿಕೆ ಚಾಚಿಕೊಂಡಿತು. ಇದರಿಂದ ಮಕ್ಕಳ ದಾಖಲಾತಿ ಕುಸಿಯಿತು.

ಪೇಟೆಬೀದಿ ಶಾಲೆಯಲ್ಲಿ 10 ಕೊಠಡಿಗಳಿದ್ದರೂ ಒಂದು ಕೊಠಡಿಯಲ್ಲಿ ಮಾತ್ರ ಪಾಠ ನಡೆಯುತ್ತಿದೆ. ಆ ಕೊಠಡಿಯು ಗೋಡೆಯೂ ಬಿರುಕು ಬಿಟ್ಟಿದ್ದು ಶಿಕ್ಷಕರು, ಮಕ್ಕಳು ಜೀವ ಕೈಯಲ್ಲಿಡಿದು ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.‌ ಮುಖ್ಯಕಟ್ಟಡದ ಹೆಂಚು ಹಾರಿ ಹೋಗಿದ್ದು ಅಲ್ಲಿ ಮುಖ್ಯಶಿಕ್ಷಕರ ಕಚೇರಿ ಇದೆ. ಕಟ್ಟಡದ ಹಿಂಭಾಗದಲ್ಲಿ ಕೊಳಚೆ ನೀರು ನಿಂತಿದ್ದು ಸೊಳ್ಳೆಗಳ ಆವಾಸಸ್ಥಾನವಾಗಿದೆ.


ಪ್ರಾಥಮಿಕ ಶಾಲೆಯ ದಾಖಲಾತಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಹೆಸರು (ಕ್ರಮ ಸಂಖ್ಯೆ; 125)

ಮಾದರಿ ಶಾಲೆಯತ್ತ ಮುನ್ಸಿಪಲ್‌ ಹೈಸ್ಕೂಲ್‌

ಮುನ್ಸಿಪಲ್‌ ಶಾಲೆಯನ್ನು ಜಿಲ್ಲೆಯ ಮಾದರಿ ಶಾಲೆಯನ್ನಾಗಿ ರೂಪಿಸಲು ಜಿಲ್ಲಾಡಳಿತ ₹ 4 ಕೋಟಿ ವೆಚ್ಚ ಮಾಡಲು ಮುಂದಾಗಿದೆ. ಶಾಲಾ ಕಟ್ಟಡ ಕೆಳ ಅಂತಸ್ತು ದುರಸ್ತಿ, ಮೇಲಂತಸ್ತು ನಿರ್ಮಾಣ, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ ನಿರ್ಮಿಸಲು ₹ 3 ಕೋಟಿ ಹಣ ವೆಚ್ಚ ಮಾಡಲು ನಿರ್ಧರಿಸಿದೆ.

ಗ್ರಂಥಾಲಯದಲ್ಲಿ ಪುಸ್ತಕ ಹಾಗೂ ಪೀಠೋಪಕರಣಗಳ ಖರೀದಿಗೆ ₹ 20 ಲಕ್ಷ ವೆಚ್ಚ ಮಾಡಲಾಗುತ್ತಿದೆ. ₹ 30 ಲಕ್ಷ ಹಣದಲ್ಲಿ ವಿಜ್ಞಾನ ಪ್ರಯೋಗಾಲಯಕ್ಕೆ ಸಲಕರಣೆಗಳನ್ನು ಖರೀದಿ ಮಾಡಲಾಗುತ್ತಿದೆ. ಸಭಾಂಗಣಕ್ಕೆ ₹ 35 ಲಕ್ಷ, ಶಾಲಾ ಕೊಠಡಿ, ಸಭಾಂಗಣದ ಪೀಠೋಪಕರಣಕ್ಕೆ ₹ 15 ಲಕ್ಷ ವೆಚ್ಚ ಮಾಡಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿಗಳು ಓದಿರುವ ಪೇಟೆಬೀದಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅದನ್ನೂ ಮಾದರಿ ಶಾಲೆಯನ್ನಾಗಿ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು