ಗುರುವಾರ , ಡಿಸೆಂಬರ್ 2, 2021
19 °C
ದಿನೇಶ್‌ ಗೂಳಿಗೌಡರಿಂದ ಸ್ವಾಮೀಜಿ ಭೇಟಿ ಇಂದು, ಗ್ರಾ.ಪಂ ಮಟ್ಟದ ಮುಖಂಡರ ಸಭೆಗೆ ಆದ್ಯತೆ

ಮಂಡ್ಯ | ವಿಧಾನ ಪರಿಷತ್ ಚುನಾವಣೆ: ಶ್ರೀಗಳ ಆಶೀರ್ವಾದ ಬೇಡುತ್ತಿರುವ ಅಭ್ಯರ್ಥಿಗಳು

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮಂಡ್ಯ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದು ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಅಭ್ಯರ್ಥಿಗಳು ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ.

ನಾಮಪತ್ರ ಸಲ್ಲಿಸಿದ ನಂತರ ಎಲ್ಲಾ ಅಭ್ಯರ್ಥಿಗಳು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆಯಲು ನಾಮುಂದು ತಾಮುಂದು ಎನ್ನುತ್ತಾ ತೆರಳುತ್ತಿದ್ದಾರೆ. ಸ್ವಾಮೀಜಿ ಆಶೀರ್ವಾದಕ್ಕಾಗಿ ಎಲ್ಲರೂ ಸಮಯ ಕೇಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಅವರು ಮೊದಲ ಬಾರಿಗೆ ಬುಧವಾರ ಆದಿಚುಂಚನಗರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಅವರ ನಂತರ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಗೂಳಿಗೌಡ ಕೂಡ ಕಾಂಗ್ರೆಸ್‌ ಮುಖಂಡರ ಒಡಗೂಡಿ ಶುಕ್ರವಾರ ಸಂಜೆ 6.15ಕ್ಕೆ ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಜೊತೆಗೆ ಜೆಡಿಎಸ್‌ ಅಭ್ಯರ್ಥಿ ಎನ್‌.ಅಪ್ಪಾಜಿಗೌಡ ಕೂಡ ಶ್ರೀಗಳ ಭೇಟಿಗಾಗಿ ಸಮಯ ಕೇಳಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.

ಕಾರ್ಯಕರ್ತರ ಸಭೆ: ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಗೂಳಿಗೌಡ ಅವರು ತಾಲ್ಲೂಕು, ಹೋಬಳಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ಆಯೋಜನೆ ಮಾಡಿ ಮತದಾರರನ್ನು ಸೆಳೆಯುತ್ತಿದ್ದಾರೆ. ಚುನಾವಣೆಗೆ ಕೇವಲ 13 ದಿನ ಮಾತ್ರ ಬಾಕಿ ಉಳಿದಿದ್ದು ಈಗ ಮತದಾರರ ಮನೆಮನೆಗೆ ಭೇಟಿ ನೀಡುವ ಸಾಧ್ಯತೆ ಕಡಿಮೆ. ಹೀಗಾಗಿ ಗ್ರಾಮ ಪಂಚಾಯಿತಿ ಮಟ್ಟದ ಮುಖಂಡರು, ಸದಸ್ಯರನ್ನು ಒಂದೆಡೆ ಸೇರಿಸಿ ಸಭೆ ನಡೆಸುತ್ತಿದ್ದಾರೆ.

ದಿನೇಶ್‌ ಗೂಳಿಗೌಡ ಜೊತೆ ಮುಖಂಡರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಮುಂತಾದವರು ಪ್ರವಾಸ ಮಾಡುತ್ತಿದ್ದು ಮತದಾರರ ಗಮನ ಸೆಳೆಯುತ್ತಿದ್ದಾರೆ. ‘ಕಾಂಗ್ರೆಸ್‌ನಲ್ಲಿ 20 ವರ್ಷ ಕೆಲಸ ಮಾಡಿರುವ ದಿನೇಶ್‌ ಅವರಿಗೆ ಒಂದು ಅವಕಾಶ ಕೊಡಿ’ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

ತಂಡದ ಜೊತೆ ಕೆಲಸ: ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಭಾವವುಳ್ಳ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರುತ್ತಿದ್ದಾರೆ. ಜೊತೆಗೆ ಅವರ ತಂಡದ ಸದಸ್ಯರು ಜಿಲ್ಲೆಯಾದ್ಯಂತ ಕ್ರಿಯಾಶೀಲರಾಗಿದ್ದು ಗ್ರಾಮ ಪಂಚಾಯಿತಿ ಸದಸ್ಯರ ಮನೆಮನೆಗೆ ಭೇಟಿ ಮಾಡಿ ಮನ ಸೆಳೆಯುತ್ತಿದ್ದಾರೆ. ಈಗಾಗಲೇ 2–3 ಬಾರಿ ಸದಸ್ಯರನ್ನು ನೇರವಾಗಿ ಭೇಟಿ ಮಾಡಿದ್ದು ನಿರಂತರ ಪ್ರಚಾರ ನಡೆಸುತ್ತಿದ್ದಾರೆ.

‘ಬೇರೆ ಯಾವ ಅಭ್ಯರ್ಥಿಯೂ ಮತದಾರರನ್ನು ಭೇಟಿ ಮಾಡಿಲ್ಲ. ನಮ್ಮ ಅಭ್ಯರ್ಥಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆ ಸದಸ್ಯರನ್ನು ಮುಖತಃ ಭೇಟಿ ಮಾಡಿ ಪ್ರಚಾರ ಮಾಡಿದ್ದಾರೆ. ಜೊತೆಗೆ ನಮ್ಮ ತಂಡದ ಸದಸ್ಯರು ಮತದಾರರ ಸಂಪರ್ಕದಲ್ಲಿದ್ದಾರೆ, ಅದು ದೊಡ್ಡ ಪರಿಣಾಮ ಬೀರಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ.ವಿಜಯಕುಮಾರ್‌ ಹೇಳಿದರು.

ಜೆಡಿಎಸ್‌: ಇಂದಿನಿಂದ ಪ್ರವಾಸ
ಜೆಡಿಎಸ್‌ನಲ್ಲೂ ಚಟುವಟಿಕೆಗಳು ಬಿರುಸು ಪಡೆದುಕೊಂಡಿದ್ದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಖಂಡರನ್ನು ನೇಮಕ ಮಾಡಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಆಯಾ ಮುಖಂಡರು ಮತದಾರರನ್ನು ಭೇಟಿ ಮಾಡಿ ಮತದಾರರ ಮನ ಸೆಳೆಯಲಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ಎನ್‌.ಅಪ್ಪಾಜಿಗೌಡ ಶುಕ್ರವಾರದಿಂದ ಪ್ರವಾಸ ಕೈಗೊಳ್ಳಲಿದ್ದು ಗ್ರಾಮ ಪಂಚಾಯಿತಿ ಮಟ್ಟದ ನಾಯಕರ ಸಭೆ ನಡೆಸಲಿದ್ದಾರೆ. ‘ಗುರುವಾರ ಆಯಾ ತಾಲ್ಲೂಕುಗಳ ಶಾಸಕರ ನೇತೃತ್ವದಲ್ಲಿ ಗ್ರಾ.ಪಂ.ವಾರು ನಾಯಕರ ನೇಮಕಾತಿ ನಡೆದಿದೆ. ಅಪ್ಪಾಜಿಗೌರು ಶುಕ್ರವಾರ ನಾಗಮಂಗಲ ತಾಲ್ಲೂಕಿನಿಂದ ಪ್ರವಾಸ ಆರಂಭಿಸಲಿದ್ದಾರೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು