ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಮುಂಗಾರು ಮಳೆಯ ಸಿಂಚನಕ್ಕೆ ಗರಿಗೆದರಿದ ಕೃಷಿ

ಜಿಲ್ಲೆಯಲ್ಲಿ 1.92 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ: 84,041 ಮೆ.ಟನ್‌ ರಸಗೊಬ್ಬರಕ್ಕೆ ಬೇಡಿಕೆ
Published 2 ಜುಲೈ 2024, 4:51 IST
Last Updated 2 ಜುಲೈ 2024, 4:51 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಈ ಬಾರಿ ಹೆಚ್ಚುವರಿ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಳೆದ ಬಾರಿ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರು ಈ ವರ್ಷ ಉತ್ತಮ ಇಳುವರಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. 

ಮೇ ತಿಂಗಳಲ್ಲಿ 99 ಮಿ.ಮೀ. ವಾಡಿಕೆ ಮಳೆಗೆ, 197 ಮಿ.ಮೀ. ಮಳೆಯಾಗಿದೆ. ಅಂದರೆ ಜಿಲ್ಲೆಯಲ್ಲಿ ಸರಾಸರಿ 97 ಮಿ.ಮೀ.ನಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್‌ ತಿಂಗಳಲ್ಲಿ 55 ಮಿ.ಮೀ. ವಾಡಿಕೆ ಮಳೆಗೆ, 90ರಷ್ಟು ಮಳೆಯಾಗಿದ್ದು, ಸರಾಸರಿ 62 ಮಿ.ಮೀ.ನಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿಅಂಶ ತಿಳಿಸುತ್ತದೆ. 

2024–25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 1.92 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ 23,734 ಹೆಕ್ಟೇರ್‌ನಲ್ಲಿ (ಶೇ 12.3) ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 10.7ರಷ್ಟು ಬಿತ್ತನೆಯಾಗಿತ್ತು. ರೈತರು ತೊಗರಿ, ಉದ್ದು, ಹೆಸರು, ಅಲಸಂದೆ ಮುಂತಾದ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದಾರೆ. ರಾಗಿ ಮತ್ತು ಭತ್ತದ ಬಿತ್ತನೆ ಕಾರ್ಯಕ್ಕಾಗಿ ರೈತರು ಹೊಲಗಳನ್ನು ಉಳುಮೆ ಮಾಡಿಕೊಳ್ಳುತ್ತಿದ್ದಾರೆ.  

ನಾಲೆಗೆ ನೀರು ಹರಿಸಿ:

ಮುಂಗಾರು ಹಂಗಾಮು ಕೃಷಿ ಚಟುವಟಿಕೆ ಆರಂಭಿಸಲು ಕೆ.ಆರ್‌. ಎಸ್‌ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು. ನಾಲೆಗಳ ಆಧುನೀಕರಣ ಕಾಮಗಾರಿ ನಡೆಯುತ್ತಿರುವ ನೆಪದಿಂದ ನೀರು ಬಿಡುಗಡೆ ತಡವಾದರೆ ಬೆಳೆಗಳು ಒಣಗಿ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಕೆ.ಆರ್‌. ಎಸ್‌ ಅಣೆಕಟ್ಟೆಯಲ್ಲಿ 94 ಅಡಿಗಳಷ್ಟು ನೀರಿನ ಸಂಗ್ರಹ ಇದೆ. ಆದರೂ ರಾಜ್ಯ ಸರ್ಕಾರ ಮುಂಗಾರು ಬೆಳೆಗೆ ಭತ್ತದ ಒಟ್ಲು ಪಾತಿ ಸಿದ್ಧಪಡಿಸಿಕೊಳ್ಳಲು ನೀರು ಕೊಡುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ. 

ಭತ್ತದ ಬಿತ್ತನೆ ಬೀಜ ವಿತರಿಸಿ:

‘ಭತ್ತದ ಬಿತ್ತನೆ ಕಾರ್ಯ ಕೈಗೊಳ್ಳಲು ಇದು ಸಕಾಲ. ಬಿತ್ತನೆ ಮಾಡುವುದು ತಡವಾದರೆ ನಿರೀಕ್ಷಿತ ಇಳುವರಿ ಬರುವುದಿಲ್ಲ. ಹಾಗಾಗಿ ರೈತರಿಗೆ ಗುಣಮಟ್ಟದ ಭತ್ತದ ಬಿತ್ತನೆ ಬೀಜಗಳನ್ನು ವಿತರಿಸಲು ಕೃಷಿ ಇಲಾಖೆ ತುರ್ತಾಗಿ ಕ್ರಮ ವಹಿಸಬೇಕು’ ಎಂದು ಪಿ.ಎಸ್‌.ಎಸ್‌.ಕೆ ಮಾಜಿ ನಿರ್ದೇಶಕ ಪಾಂಡು ಒತ್ತಾಯಿಸಿದ್ದಾರೆ. 

ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 2024ನೇ ಸಾಲಿನ ಮುಂಗಾರು ಹಂಗಾಮು ಬೆಳೆಗಾಗಿ ತಾಲ್ಲೂಕಿನ 4 ಹೋಬಳಿಗಳಿಗೆ ಒಟ್ಟು 1420 ಕ್ವಿಂಟಲ್‌ ಭತ್ತದ ಬಿತ್ತನೆ ಬೀಜ ಸರಬರಾಜು ಮಾಡುವಂತೆ ಕೃಷಿ ಇಲಾಖೆ ಬೇಡಿಕೆ ಸಲ್ಲಿಸಿದೆ. ಈ ಪೈಕಿ ಎಂಟಿಯು–1001 ತಳಿಯ 1150 ಕ್ವಿಂಟಲ್‌, ಜ್ಯೋತಿ ತಳಿಯ 210 ಕ್ವಿಂಟಲ್‌ ಮತ್ತು ಐಆರ್‌–64 ತಳಿಯ 60 ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಇಲಾಖೆಯಿಂದ ಸೂಚನೆ ಬಂದಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ತಿಳಿಸಿದ್ದಾರೆ.

‘ಪ್ರಸಕ್ತ ಹಂಗಾಮಿನಲ್ಲಿ ತಾಲ್ಲೂಕಿಗೆ 4 ಕ್ವಿಂಟಲ್‌ ರಾಗಿ ಬಿತ್ತನೆ ಬೀಜ ಬಂದಿದೆ. ಅರಕೆರೆ ಹೋಬಳಿಗೆ ಎರಡು ಮತ್ತು ಕಸಬಾ ಹಾಗೂ ಕೆ. ಶೆಟ್ಟಹಳ್ಳಿ ಹೋಬಳಿಗಳಿಗೆ ತಲಾ ಒಂದೊಂದು ಕ್ವಿಂಟಲ್‌ ರಾಗಿ ಬಿತ್ತನೆ ಬೀಜವನ್ನು ಸರಬರಾಜು ಮಾಡಿದ್ದು, ವಿತರಣೆ ಕಾರ್ಯ ನಡೆಯುತ್ತಿದೆ’ ಎಂದು ಪ್ರಿಯದರ್ಶಿನಿ ಹೇಳಿದ್ದಾರೆ.

ನಿರೀಕ್ಷಿತ ಬಿತ್ತನೆಯಾಗಿಲ್ಲ:

ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಮಳೆ ಎರಡು ವಾರ ತಡವಾಗಿ ತಾಲ್ಲೂಕಿಗೆ ಬಂದಿದ್ದರಿಂದ ನಿರೀಕ್ಷಿಸಿದ ಪ್ರಮಾಣದಲ್ಲಿ ಅಲಸಂದೆ ಬೆಳೆಯನ್ನು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ತಾಲ್ಲೂಕಿಗೆ ಅಲಸಂದೆ ಬಿತ್ತನೆ ಬೀಜವನ್ನು 55 ಕ್ವಿಂಟಲ್ ತರಲಾಗಿತ್ತು. ಇನ್ನು 18 ಕ್ವಿಂಟಲ್ ಉಳಿದಿದೆ. ಆದರೆ ಉದ್ದು ಬಿತ್ತನೆ ಬೀಜ ಹೆಚ್ಚು ಮಾರಾಟವಾಗಿಲ್ಲ. ತಾಲ್ಲೂಕಿನಲ್ಲಿ ಉದ್ದು, ಹೆಸರು, ಎಳ್ಳು, ಹುರುಳಿ, ನೆಲಗಡಲೆ, ಸೂರ್ಯಕಾಂತಿ, ಹುಚ್ಚಳ್ಳು, ಜೋಳ, ರಾಗಿಯನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. 

ಪಾಂಡವಪುರ ತಾಲ್ಲೂಕಿನಲ್ಲಿ ಮುಂಗಾರು ಮಳೆಯಾಗುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವ ಬಗ್ಗೆ ಚರ್ಚಿಸಲಾಗಿದ್ದು, ನೀರು ಹರಿಸಲು ವಿಶ್ವೇಶ್ವರಯ್ಯ ನಾಲೆ ಹಾಗೂ ಚಿಕ್ಕದೇವರಾಯ ನಾಲೆ ನಾಲೆಗಳಿಗೆ ಸಿದ್ಧತೆ ನಡೆಸಲಾಗಿದೆ. ಹೀಗಾಗಿ ನೀರಾವರಿ ಭಾಗದ ರೈತರು ಜಮೀನು ಉಳುಮೆ ಮಾಡಿ ಭತ್ತದ ಬೀತ್ತನೆ ಮಾಡಲು ಸಿದ್ಧರಾಗಿದ್ದಾರೆ.

‘ಸದ್ಯ 30 ಕ್ವಿಂಟಲ್ ರಾಗಿ ದಾಸ್ತಾನು ಇದೆ. ಭತ್ತ ಕೆ.ಜಿ.ಗೆ ಸಾಮಾನ್ಯ ವರ್ಗಕ್ಕೆ ₹8 ಮತ್ತು ಎಸ್‌ಸಿ.,ಎಸ್‌ಟಿ ವರ್ಗಕ್ಕೆ ₹12ಗಳು ರಿಯಾಯತಿ ದೊರೆಯಲಿದೆ. ಅಂತೆಯೇ ರಾಗಿಗೆ ಸಾಮಾನ್ಯರಿಗೆ ₹18 ಮತ್ತು ಎಸ್‌ಸಿ.ಎಸ್‌ಟಿ ವರ್ಗಕ್ಕೆ ₹27 ರಿಯಾಯಿತಿ ದರದಲ್ಲಿ ದೊರೆಯಲಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಟಿ.ಎಸ್. ಮಂಜುನಾಥ್ ತಿಳಿಸಿದ್ದಾರೆ.

1,619 ಹೆಕ್ಟೇರ್‌ನಲ್ಲಿ ಬಿತ್ತನೆ:

ಮಳವಳ್ಳಿ ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ ಈಗಾಗಲೇ ಎಳ್ಳು, ಹೆಸರು, ಉದ್ದು, ಅಲಸಂದೆ ಮತ್ತು ನೆಲಗಡಲೆ ಬೆಳೆಗಳನ್ನು 1,619 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಿರುಗಾವಲು, ಕಸಬಾ, ಬೊಪ್ಪೇಗೌಡನಪುರ(ಬಿಜಿಪುರ) ಹೋಬಳಿಯ ಬಹುತೇಕ ರೈತರು ಭತ್ತ ನಾಟಿ ಮಾಡುವ ಪ್ರದೇಶಕ್ಕೆ ಹಸಿರೆಲೆ ಗೊಬ್ಬರದ ಬೆಳೆಯಾದ ಡಯಾಂಚ (ಚೆಂಬೆ) ಬಿತ್ತನೆ ಮಾಡಿದ್ದಾರೆ. ನಂತರ ಅದನ್ನು ಉಳುಮೆ ಮಾಡಿ ಭೂಮಿ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದಾರೆ. 

‘ಮುಸುಕಿನ ಜೋಳದ ವಿವಿಧ ತಳಿಗಳ ಬಿತ್ತನೆ ಬೀಜಗಳನ್ನು ಸುಮಾರು 150 ಕ್ವಿಂಟಲ್‌ನಷ್ಟು ಹೋಬಳಿಯ ಕೇಂದ್ರಗಳಲ್ಲಿ ದಾಸ್ತಾನನ್ನು ಮಾಡಲಾಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳು ರೈತರಿಗೆ ಯಾವುದೇ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು’ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೀಪಕ್ ತಿಳಿಸಿದ್ದಾರೆ.

ಶೇ 91ರಷ್ಟು ಅಲಸಂದೆ ಬಿತ್ತನೆ

ನಾಗಮಂಗಲ ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ ಏಪ್ರಿಲ್- ಮೇ ತಿಂಗಳಿನಲ್ಲಿ ಎಳ್ಳು, ಅಲಸಂದೆ ಬಿತ್ತನೆ ಮಾಡುವುದರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಇರುತ್ತದೆ. ಜೊತೆಗೆ ತಾಲ್ಲೂಕಿನಲ್ಲಿ ಒಣ ಬೇಸಾಯ ಹೆಚ್ಚಾಗಿರುವುದರಿಂದ ಎಳ್ಳು, ಅಲಸಂದೆ ಬಿತ್ತನೆ ಬೀಜಗಳ ಬೇಡಿಕೆ ಪ್ರತಿ ಬಾರಿಯೂ ಹೆಚ್ಚಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಇಲಾಖೆಯು 3,980 ಹೆಕ್ಟೇರ್ ಅಲಸಂದೆ ಬಿತ್ತನೆಯ ಗುರಿಯನ್ನು ಹೊಂದಿದ್ದು, ಈಗಾಗಲೇ 3,605 ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ 91ರಷ್ಟು ಬಿತ್ತನೆಯಾಗಿದೆ. ಇಲಾಖೆಯಿಂದ ಸಬ್ಸಿಡಿ ದರದಲ್ಲಿ 37 ಕ್ವಿಂಟಲ್ ದಾಸ್ತಾನಿದ್ದು, ಈಗಾಗಲೇ 30 ಕ್ವಿಂಟಲ್ ವಿತರಣೆ ಮಾಡಲಾಗಿದೆ.

ಅಲ್ಲದೇ ಇಲಾಖೆಯು 2155 ಎಕ್ಟೇರ್ ಎಳ್ಳು ಬಿತ್ತನೆಯ ಗುರಿಯನ್ನು ಹೊಂದಿದ್ದು, 855 ಎಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯ ಕ್ಷೇತ್ರ ಕಡಿಮೆಯಾಗಲು ಮಳೆಯ ಕೊರತೆ ಪ್ರಮುಖವಾಗಿದೆ.

ವರದಿ: ಸಿದ್ದು ಆರ್‌.ಜಿ.ಹಳ್ಳಿ

ಪೂರಕ ಮಾಹಿತಿ: ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್‌, ಹಾರೋಹಳ್ಳಿ ಪ್ರಕಾಶ್‌, ಯು.ವಿ.ಉಲ್ಲಾಸ್‌, ಎಂ.ಆರ್‌.ಅಶೋಕ್‌, ಟಿ.ಕೆ.ಲಿಂಗರಾಜು

ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ರಾಗಿ ಬಿತ್ತನೆ ಬೀಜ ವಿತರಿಸಲಾಯಿತು 
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ರಾಗಿ ಬಿತ್ತನೆ ಬೀಜ ವಿತರಿಸಲಾಯಿತು 
ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದ ಸಮೀಪ ಟ್ರ್ಯಾಕ್ಟರ್‌ ಮೂಲಕ ಹೊಲವನ್ನು ಬಿತ್ತನೆಗೆ ಸಿದ್ಧಗೊಳಿಸುತ್ತಿರುವ ರೈತ 
ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದ ಸಮೀಪ ಟ್ರ್ಯಾಕ್ಟರ್‌ ಮೂಲಕ ಹೊಲವನ್ನು ಬಿತ್ತನೆಗೆ ಸಿದ್ಧಗೊಳಿಸುತ್ತಿರುವ ರೈತ 

ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗೆ ಯಾವುದೇ ಕೊರತೆಯಿಲ್ಲ. ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಇದೆ. ರೈತರು ಅಗತ್ಯ ಬಿತ್ತನೆ ಬೀಜ ಖರೀದಿಸಬಹುದು

– ಸಂತೋಷ್ ಕುಮಾರ್ ಸಹಾಯಕ ಕೃಷಿ ನಿರ್ದೇಶಕ ಕೆ.ಆರ್. ಪೇಟೆ

ಮದ್ದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಸಾಗಿದ್ದು ಇಲಾಖೆಯಿಂದ ಅಗತ್ಯ ಬಿತ್ತನೆ ಬೀಜಗಳ ದಾಸ್ತಾನು ಇದ್ದು ರೈತರಿಗೆ ಕೊರತೆಯಾಗದಂತೆ ಕ್ರಮವಹಿಸಲಾಗಿದೆ

- ಪರಮೇಶ್ ಸಹಾಯಕ ಕೃಷಿ ನಿರ್ದೇಶಕ ಮದ್ದೂರು

ಹಸಿರೆಲೆ ಗೊಬ್ಬರ ಬಳಸಿ ಮಳೆ ಆಶ್ರಿತ ರೈತರು

ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಮಾಡಿಕೊಂಡು ಹೊಲದಲ್ಲಿ ಬಿದ್ದ ನೀರನ್ನು ಇಂಗಿಸಬೇಕು. ನೀರಾವರಿ ಆಶ್ರಯದಲ್ಲಿ ಭತ್ತ ಬೆಳೆಯುವ ರೈತರಿಗೆ ಜುಲೈ 15ರವರೆಗೆ ಕಾಲಾವಕಾಶವಿದೆ. ಹಸಿರೆಲೆ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತಾಗುತ್ತದೆ. ಜಿಲ್ಲೆಗೆ ಅಗತ್ಯವಾದ ರಸಗೊಬ್ಬರ ಮತ್ತು ಬಿತ್ತನೆಬೀಜವನ್ನು ದಾಸ್ತಾನು ಮಾಡಿಕೊಳ್ಳಲಾಗಿದ್ದು ರೈತರಿಗೆ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ – ವಿ.ಎಸ್‌. ಅಶೋಕ್‌ ಜಂಟಿ ಕೃಷಿ ನಿರ್ದೇಶಕ ಮಂಡ್ಯ ಭತ್ತದ ಬಿತ್ತನೆ ಬೀಜ ವಿತರಿಸಿ ಮುಂಗಾರು ಹಂಗಾಮು ಬೆಳೆಗೆ ಅಗತ್ಯವಾದ ಭತ್ತದ ಬಿತ್ತನೆ ಬೀಜ ವಿತರಣೆಗೆ ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕು. ಬಿತ್ತನೆ ಕಾರ್ಯ ವಿಳಂಬವಾದರೆ ಇಳುವರಿ ಕುಂಠಿತವಾಗಲಿದ್ದು ರೈತರು ನಷ್ಟ ನುಭವಿಸಬೇಕಾಗುತ್ತದೆ –ಬಿ.ಸಿ. ಸಂತೋಷಕುಮಾರ್‌ ರೈತ ಬಲ್ಲೇನಹಳ್ಳಿ ಶ್ರೀರಂಗಪಟ್ಟಣ *** ಕೆರೆಗಳನ್ನು ಶೀಘ್ರ ತುಂಬಿಸಿ ಕಳೆದ ಬಾರಿ ಮಳೆಯ ಕೊರತೆಯಿಂದ ನಷ್ಟ ಅನುಭವಿಸಿದ್ದೇವೆ. ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದೇವೆ. ನಾಲೆಗಳಿಗೆ ಕೂಡಲೇ ನೀರು ಹರಿಸಬೇಕು ಮತ್ತು ಕೆರೆಗಳನ್ನು ತುಂಬಿಸುವ ಕಾರ್ಯ ಕೈಗೊಳ್ಳಬೇಕು. ಕೆರೆಗಳು ತುಂಬಿದರೆ ಅಂತರ್ಜಲ ಮಟ್ಟ ಹೆಚ್ಚಳವಾಗಿ ಕೊಳವೆಬಾವಿಗಳಲ್ಲಿ ನೀರು ವೃದ್ಧಿಯಾಗುತ್ತದೆ. ಬೆಳೆಗಳನ್ನು ಉಳಿಸಿಕೊಳ್ಳಲು ಅನುಕೂಲವಾಗುತ್ತದೆ.  – ಪುಷ್ಪಲತಾ ರೈತ ಮಹಿಳೆ ಚಿಕ್ಕಮಂಡ್ಯ ***

ಭತ್ತ ಬಿತ್ತನೆ ಬೀಜಗಳ ಬೇಡಿಕೆ ಮತ್ತು ದಾಸ್ತಾನು ವಿವರ (ಕ್ವಿಂಟಲ್‌ಗಳಲ್ಲಿ)

ತಳಿ;ಬೇಡಿಕೆ;ದಾಸ್ತಾನು ಎಂ.ಟಿ.ಯು–1001;4500;6500 ಐ.ಆರ್‌–64;3255;1283 ಜ್ಯೋತಿ;635;1000 ತನು;250;237 ಆರ್‌.ಎನ್‌.ಆರ್‌–15048;161;369 ಬಿ.ಆರ್‌.2655;895;75 ಎಂ.ಟಿ.ಯು–1010;300;300 ಒಟ್ಟು;9996;10764

ರಾಗಿ ಬಿತ್ತನೆ ಬೀಜಗಳ ಬೇಡಿಕೆ ಮತ್ತು ದಾಸ್ತಾನು ವಿವರ (ಕ್ವಿಂಟಲ್‌ಗಳಲ್ಲಿ)

ತಳಿ;ಬೇಡಿಕೆ;ದಾಸ್ತಾನು ಜಿ.ಪಿ.ಯು 28;324;488 ಎಂ.ಎಲ್‌.365;190;431 ಎಂ.ಆರ್‌–1;92;100 ಎಂ.ಆರ್‌–6;221;318 ಕೆ.ಎಂ.ಆರ್‌ 301;158;200 ಒಟ್ಟು;985;1538  

ರಸಗೊಬ್ಬರ ಬೇಡಿಕೆ ಹಾಗೂ ವಿತರಣೆ ವಿವರ (ಮೆ.ಟನ್‌ಗಳಲ್ಲಿ) ರಸಗೊಬ್ಬರ;ಬೇಡಿಕೆ;ಸರಬರಾಜು;ವಿತರಣೆ;ದಾಸ್ತಾನು ಯೂರಿಯ;41979;37218;16008;21210 ಡಿ.ಎ.ಪಿ;8500;5316;1795;3520 ಎಂ.ಓ.ಪಿ;2210;1658;516;1142 ಎಸ್‌.ಎಸ್‌.ಪಿ;5041;1270;229;1041 ಕಾಂಪ್ಲೆಕ್ಸ್‌;26311;40598;12505;28093 ಒಟ್ಟು;84041;86060;31053;55006

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT