ಗುರುವಾರ , ಮಾರ್ಚ್ 23, 2023
29 °C
ಕೆ.ಆರ್‌.ಪೇಟೆ ತಾಲ್ಲೂಕಿನ ಜಾಗಿನಕೆರೆಯಲ್ಲಿ ದನ- ಕುರಿಗಳಿಗೆ ಆಸರೆಯಾದ ಶಾಸನದ ಕಲ್ಲು

ಶಾಸನಗಳಿಗೆ ರಕ್ಷಣೆ ಇಲ್ಲ; ನಿಲಗಲ್ಲು ಅನಾಥ

ಬಲ್ಲೇನಹಳ್ಳಿ ಮಂಜುನಾಥ್ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಐತಿಹಾಸಿಕ ಮಹತ್ವದ ದಾಖಲೆ ಇರುವ ಶಾಸನಗಳು, ಸ್ಮಾರಕಗಳು ಸದ್ದಿಲ್ಲದೆ ನಾಶವಾಗುತ್ತಿವೆ.

ಶಾಸನ ಮತ್ತು ಸ್ಮಾರಕಗಳನ್ನು ಕಾಪಾಡಬೇಕಾದ ಇಲಾಖೆಗಳೂ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಅವುಗಳು ನಾಶವಾಗುತ್ತಿವೆ. ತಾಲ್ಲೂ ಕಿನ ಸಂತೇಬಾಚಹಳ್ಳಿ ಸಮೀಪ ಇರುವ ಮಾಳಗೂರು, ಜಾಗಿನ ಕೆರೆ, ಸಂತೇಬಾಚಹಳ್ಳಿ ಸೇರಿದಂತೆ ವಿವಿಧೆಡೆ ಇರುವ ಶಾಸನ, ಸ್ಮಾರಕಗಳಿಗೆ ಬಿಸಿಲು, ಮಳೆಯಿಂದ ರಕ್ಷಣೆಯೇ ಇಲ್ಲ.

ದನ- ಕುರಿ ಕಟ್ಟಲು ಮಾಳಗೂರು ಶಾಸನ ಬಳಕೆ: ತಾಲ್ಲೂಕಿನ ಮಾಳಗೂರು ಗ್ರಾಮವು ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟದರಸಿ, ನಾಟ್ಯಸರಸ್ವತಿ ಶಾಂತಲೆಯ ತವರೂರು ಎಂದು ಪ್ರತೀತಿ. ಇದಕ್ಕೆ ಪೂರಕವೆ ಎನ್ನುವಂತೆ ಮಾಳಗೂರಿನ ಕೆರೆಯ ಬಳಿ ಇರುವ ಈಶ್ವರ ದೇವಾಲಯದ ದಕ್ಷಿಣ ಬದಿಯಲ್ಲಿ ಶಾಂತಲಾದೇವಿಯ ಮೈದುನ ಬಲ್ಲೆಯನಾಯಕನ ದಾನ ಶಾಸನವೊಂದು ಅನಾಥವಾಗಿದೆ. ಕ್ರಿ.ಶ 1117ರ ಕಾಲಘಟ್ಟಕ್ಕೆ ಸೇರಿದ ಈ ದಾನ ಶಾಸನ ವಿಷ್ಣುವರ್ಧನನ ಪ್ರಶಸ್ತಿ ಮತ್ತು ಆಳ್ವಿಕೆಯನ್ನು ಸೂಚಿಸುತ್ತಿದೆ. ಅದರ ಸುತ್ತ ಗಿಡಗಂಟಿ ಬೆಳೆದಿವೆ.

ಗ್ರಾಮದ ಹೆಬ್ಬಾಗಿಲ ಮುಂದೆ ಶ್ರೀರಂಗಪಟ್ಟಣದ ದೇವರಾಜ ಮಹೀಪಾಲನ (1663ರ ಜೂನ್ 6ರ) ಶಾಸನ ಇದೆ. ಮೈಸೂರು ಒಡೆಯರ ಮನೆತನಕ್ಕೆ ಸೇರಿದ ಅರಸು ಚಾಮರಾಜ ಒಡೆಯರ ಮೊಮ್ಮಗ ದೇವರಾಜ ಒಡೆಯರ ಪುತ್ರ ದೇವರಾಜ ಮಹಿಪಾಲನು ಮಾಳಗೂರಿಗೆ ದೇವರಾಜಪುರವೆಂದು ಅಭಿದಾನ ಮಾಡಿ ಸುತ್ತಲಿನ ಹಲವು ಗ್ರಾಮಗಳನ್ನು ಬ್ರಾಹ್ಮಣರಿಗೆ ದಾನ ನೀಡಿದ ವಿವರ ಈ ಶಾಸನದಲ್ಲಿದೆ. ಗ್ರಾಮದೊಳಗಿನ ಹೆಬ್ಬಾಗಿಲ ಮುಂದಿರುವ ಈ ಶಾಸನದ ಮುಂದೆ ಎಮ್ಮೆ ದನಗಳನ್ನು ಕಟ್ಟುತ್ತಿದ್ದು, ಗಂಜಲ ಮತ್ತು ಸೆಗಣಿಯಿಂದ ಆವರಿಸಿಕೊಂಡಿದೆ.

ವಿಗ್ರಹ ಸಂರಕ್ಷಿಸುವವರೇ ಇಲ್ಲ: ತಾಲ್ಲೂಕಿನ ಜಾಗಿನಕೆರೆಯಲ್ಲಿ ರೈತ ಬೆಟ್ಟೇಗೌಡರು ತಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಜಿನ ವಿಗ್ರಹವೊಂದು ದೊರೆತಿದ್ದು, 23ನೇ ಜೈನ ತೀರ್ಥಂಕರ ಪಾರ್ಶ್ವನಾಥರದ್ದು ಎನ್ನಲಾಗಿದೆ. ಸುಮಾರು 5.5 ಅಡಿ ಎತ್ತರ ಇರುವ ಈ ವಿಗ್ರಹ ಶಿಥಿಲವಾಗಿದೆ. ವಿಗ್ರಹದ ಸನಿಹದಲ್ಲೇ ಕೆಲವು ವಿಶಿಷ್ಟ ಆಕಾರದ ಕಲ್ಲುಗಳು ಸಿಕ್ಕಿವೆ. ಜಾಗಿನಕೆರೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಇದುವರೆಗೆ ಜಿನಾಲಯದ ಕುರುಹುಗಳು ಅಥವಾ ಶಾಸನಗಳು ಇದುವರೆಗೆ ಪತ್ತೆಯಾಗಿರಲಿಲ್ಲ.

ಆಳೆತ್ತರದ ಶಾಸನ: ತಾಲ್ಲೂಕಿನ ಸಂತೇಬಾಚಹಳ್ಳಿಯ ದಕ್ಷಿಣದಲ್ಲಿ ಹಲ ವಾರು ವೀರಗಲ್ಲು, ಸತಿ ಸಹಗಮನದ ಕಲ್ಲು, ಅನುಗಮನದ ಕಲ್ಲಿನ ಶಾಸನಗಳು ಇದ್ದು, ನಿರ್ಲಕ್ಷ್ಯಕ್ಕೊಳಗಾಗಿದೆ. ಕೆಲವು ಕೆರೆಯ ನೀರೊಳಗೆ ಚದುರಿಹೋಗಿವೆ. ಚಿಕ್ಕಕೆರೆಯ ಆಸುಪಾಸಿನಲ್ಲಿಲ್ಲೇ ಸುಮಾರು 16.5 ಅಡಿ ಎತ್ತರದ ನಿಲುವುಗಲ್ಲುಗಳಿವೆ. ಇವು ಜಿಲ್ಲೆಯಲ್ಲೇ ಎತ್ತರದ ನಿಲುವುಗಲ್ಲುಗಳಾಗಿವೆ.‌

ಹವ್ಯಾಸಿ ಸಂಶೋಧಕ, ಶಿಕ್ಷಕ ಸಂತೇಬಾಚಹಳ್ಳಿ ರಂಗಸ್ವಾಮಿ ಈ ಬಗ್ಗೆ ಅಧ್ಯಯನ ನಡೆಸಿ ಸಂಬಂಧಿಸಿದ ಇಲಾಖೆ, ಸಂಶೋಧಕರಿಗೆ, ಇತಿಹಾ ಸಕಾರರ ಗಮನಕ್ಕೆ ತಂದಿದ್ದಾರೆ. ಆದರೂ ಸ್ಪಂದಿಸಿಲ್ಲ. ಕತ್ತರಘಟ್ಟ ಗ್ರಾಮದ ತ್ರಿಕೂಟಾಚಲ ಜಿನಾಲಯದಂತೆ ಜಾಗಿನಕೆರೆಯ ಜಿನಾಲಯವೂ ನೆಲದಾಳದಲ್ಲೂ ಅಡಗಿರಬಹುದು. ಈ ಸಂಬಂಧ ಉತ್ಖನನ ನಡೆಸಬೇಕು. ಶಾಸನ, ಸ್ಮಾರಕಗಳಿರುವ ಸ್ಥಳಗಳಲ್ಲಿ ಸುತ್ತ ಕಾಂಕ್ರೀಟ್ ಹಾಕಿಸಿ ಸ್ಥಳೀಯ ಗ್ರಾಮ ಪಂಚಾಯತಿ ಸಂರಕ್ಷಿಸಬೇಕು. ಸ್ಥಳದ ಮಹತ್ವದ ಬಗ್ಗೆ ಫಲಕ ಹಾಕಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು