ಸೋಮವಾರ, ಆಗಸ್ಟ್ 2, 2021
25 °C

ಮೈಷುಗರ್‌ ಖಾಸಗೀಕರಣಕ್ಕೆ ಆಸಕ್ತಿಯೇಕೆ?: ಸಂಸದೆ ಸುಮಲತಾಗೆ ಶ್ರೀಕಂಠಯ್ಯ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ‘ಸಂಸದೆ ಸುಮಲತಾ ಅವರು ಮೈಷುಗರ್‌ ಕಾರ್ಖಾನೆಯ ಖಾಸಗೀಕರಣದ ಪರ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇದಕ್ಕೆ ಕಾರಣವೇನೆಂದು ಅವರೇ ಹೇಳಬೇಕು’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕೇಳಿದರು.

ತಾಲ್ಲೂಕಿನ ಕಿರಂಗೂರು ಗ್ರಾಮದಲ್ಲಿ ₹17 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ದರಸಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖಾ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದಕ್ಕೆ ಜಿಲ್ಲೆಯ ಜೆಡಿಎಸ್‌ ಶಾಸಕರ ವಿರೋಧವಿದೆ. ಮೈಷುಗರ್‌ ಕಾರ್ಖಾನೆ ಸರ್ಕಾರದ ಸುಪರ್ದಿಯಲ್ಲೇ ಇರಬೇಕು ಎಂಬುದು ನಮ್ಮ ನಿಲುವು. ಈ ಕುರಿತು ಎಚ್‌.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಚರ್ಚೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಅವಕಾಶ ಇರಕೂಡದು’ ಎಂದರು.

ಸುಮಲತಾ ಅವರನ್ನು ಕೆಲ ಬೆಂಬಲಿಗರು ದಾರಿ ತಪ್ಪಿಸುತ್ತಿದ್ದಾರೆ. ಚುನಾವಣೆ ಸಂದರ್ಭದ ಗುಂಗಿನಿಂದ ಸುಮಲತಾ ಇನ್ನೂ ಹೊರ ಬಂದಿಲ್ಲ. ಚುನಾವಣೆ ಬಳಿಕ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಒಮ್ಮತದಿಂದ ಕೆಲಸ ಮಾಡಬೇಕಿದೆ. ಇಂತಹ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಸರಿಯಲ್ಲ ಎಂದು ಹೇಳಿದರು.

ಸರ್ಕಾರ ದಕ್ಷ ಐಎಎಸ್‌ ಅಧಿಕಾರಿಯನ್ನು ನೇಮಿಸಿ ಕಬ್ಬು ನುರಿಸುವ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.

ದರಸಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಬಾಲ ನಂಜುಂಡಪ್ಪ, ಉಪಾಧ್ಯಕ್ಷ ಆರ್‌.ಪರಮೇಶ್ವರ್‌, ಸಿಇಒ ಬಿ.ಎಸ್‌. ಗುಣಶೇಖರ್‌, ನಿರ್ದೇಶಕರಾದ ಡಿ.ಎಸ್‌.ಕಿರಣ್‌, ಸಿ.ಪರಮೇಶ್ವರ್‌, ಎಸ್‌.ಮನು, ಕೆ.ಲಕ್ಷ್ಮೀನಾರಾಯಣ, ಶ್ರೀನಿವಾಸಯ್ಯ, ದಿನೇಶ್‌, ಎನ್‌.ಎಸ್‌. ಮಹದೇವಸ್ವಾಮಿ, ಕೆ.ಟಿ. ನಿರ್ಮಲಾ ಮಂಜುನಾಥ್‌, ಟಿ.ಶೈಲಜಾ, ತಾ.ಪಂ ಮಾಜಿ ಅಧ್ಯಕ್ಷ ಬಿ.ಎಸ್‌.ಸಂದೇಶ್‌, ಗುಂಡಪ್ಪ, ಕೆ.ಎಸ್‌. ಮಹೇಂದ್ರ, ಗ್ರಾ.ಪಂ. ಉಪಾಧ್ಯಕ್ಷ ಬಿ.ಎಂ. ಶ್ರೀನಿವಾಸ್‌, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಂಜಯ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು