ಶುಕ್ರವಾರ, ಡಿಸೆಂಬರ್ 3, 2021
20 °C
ಖಾಸಗೀಕರಣ ನಿರ್ಣಯದಿಂದ ಹಿಂದೆ ಸರಿದ ಸರ್ಕಾರ, ಸಕ್ಕರೆ ಜಿಲ್ಲೆಯ ಪಾಲಿಗಿದು ಶುಭ ಸೋಮವಾರ

6 ತಿಂಗಳಲ್ಲಿ ‘ಮೈಷುಗರ್‘ ಕಾರ್ಯಾರಂಭ: ಖಾಸಗೀಕರಣ ನಿರ್ಣಯದಿಂದ ಹಿಂದೆ ಸರಿದ ಸರ್ಕಾರ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಪುನಾರಂಭ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿರುವುದು ಜಿಲ್ಲೆಯ ರೈತರ ಪಾಲಿಗೆ ಅ.18 ಶುಭ ಸೋಮವಾರವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು 6 ತಿಂಗಳಲ್ಲಿ ಮೈಷುಗರ್‌ ಚಕ್ರಗಳು ತಿರುಗಲಿವೆ, ಚಿಮಣಿಯ ಹೊಗೆ ಆಗಸಕ್ಕೆ ಚಾಚಲಿದೆ.

ಕಳೆದ ವಾರವಷ್ಟೇ ಧರಣಿಯ ಸ್ಥಳಕ್ಕೆ ಬಂದಿದ್ದ ಮುಖ್ಯಮಂತ್ರಿಗಳು ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳನ್ನು ಸಭೆಗೆ ಆಹ್ವಾನ ನೀಡಿ ಹೋಗಿದ್ದರು, ಸಿಹಿ ಸುದ್ದಿ ನೀಡುವ ಭರವಸೆಯನ್ನೂ ಕೊಟ್ಟಿದ್ದರು. ಅದರಂತೆ ಸೋಮವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಿಹಿ ಸುದ್ದಿಯನ್ನೇ ಹಂಚಿದ್ದಾರೆ. ಅಧಿಕಾರಿಗಳ ಅಭಿಪ್ರಾಯ ಕೇಳದೆ, ಸಮಿತಿಗಳ ವರದಿಗೆ ಕಾಯದೆ ರೈತರ ಒತ್ತಾಯಕ್ಕೆ ಮನ್ನಣೆ ನೀಡಿದ್ದಾರೆ. ಸಮಯವನ್ನೂ ತೆಗೆದುಕೊಳ್ಳದೇ ಸ್ಥಳದಲ್ಲೇ ನಿರ್ಣಯ ಪ್ರಕಟಿಸಿ ರೈತ ಮುಖಂಡರ ಮೊಗದಲ್ಲಿ ಹರ್ಷ ಮೂಡಿಸಿದ್ದಾರೆ.

ಕಾರ್ಖಾನೆಯನ್ನು ಖಾಸಗೀಕರಣ ಮಾಡುವ, ಒ ಅಂಡ್‌ ಎಂ ಮಾದರಿಯಲ್ಲಿ ಆರಂಭಿಸುವ ಸರ್ಕಾರದ ಮೊದಲ ನಿರ್ಣಯವನ್ನು ಹಿಂದೆ ಪಡೆದಿರುವ ಮುಖ್ಯಮಂತ್ರಿಗಳು 2 ವರ್ಷಗಳ ಕಾಲ ಪ್ರಾಯೋಗಿಕವಾಗಿ ಸರ್ಕಾರವೇ ಮುನ್ನಡೆಸಲಿದೆ ಎಂದು ತಿಳಿಸಿದ್ದಾರೆ. ಕಾರ್ಖಾನೆಯನ್ನು 40 ವರ್ಷಗಳ ವರೆಗೆ ಖಾಸಗಿ ಗುತ್ತಿಗೆ ನೀಡುವ ಕುರಿತು ಮೇ ತಿಂಗಳಲ್ಲಿ ಸರ್ಕಾರ ನಿರ್ಣಯ ಕೈಗೊಂಡು ಟೆಂಡರ್‌ ಪ್ರಕ್ರಿಯೆಯನ್ನೂ ಆರಂಭಿಸಿತ್ತು. ಆದರೆ ರೈತರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಹಿಂದಿನ ನಿರ್ಣಯದಿಂದ ಹಿಂದೆ ಸರಿದಿದೆ.

36 ದಿನಗಳ ಹೋರಾಟ: ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭವಾಗಬೇಕು ಎಂಬ ಒತ್ತಾಯದೊಂದಿಗೆ ವಿವಿಧ ಸಂಘಟನೆಗಳ ಸದಸ್ಯರು ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ಹೋರಾಟಕ್ಕೆ ಜಿಲ್ಲೆಯ ಜನರು ಹಾಗೂ ಜನಪ್ರತಿನಿಧಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಜೊತೆಗೆ ರಾಜ್ಯದ ವಿವಿಧ ಸಂಘಟನೆಗಳು, ರೈತ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟ ಬೆಂಬಲಿಸಿದ್ದರು.

ಹೋರಾಟದ ಧ್ವನಿ ವಿಧಾನಮಂಡಲ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ರೈತರ ಒಗ್ಗಟ್ಟಿನ ಹೋರಾಟಕ್ಕೆ ಮಣಿದಿರುವ ಸರ್ಕಾರ ಖಾಸಗೀಕರಣ, ಒ ಅಂಡ್‌ ಎಂ ನಿರ್ಧಾರ ಕೈಬಿಟ್ಟು ಸರ್ಕಾರವೇ ಮುನ್ನಡೆಸುವ ನಿರ್ಧಾರ ಕೈಗೊಂಡಿದೆ. ಆ ಮೂಲಕ ಜಿಲ್ಲೆಯ ರೈತರು ರಾಜ್ಯದ ಏಕೈಕ ಸರ್ಕಾರಿ ಕಾರ್ಖಾನೆಗೆ ಉಳಿವಿಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ.

ಸತತ ಮೂರು ಗಂಟೆ ನಡೆಸ ಸಭೆಯಲ್ಲಿ ರೈತ ಮುಖಂಡರು, ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಅರ್ಧ ಗಂಟೆ ವಿಚಾರ ಮಂಡಿಸಿದರು. ಎಲ್ಲಾ ವಿಚಾರ ಸಾವಧಾನದಿಂದ ಆಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳದಲ್ಲೇ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಿಸಲಾಗುವುದು ಎಂಬ ನಿರ್ಣಯ ಪ್ರಕಟಿಸಿದರು.

ಆಕ್ಷೇಪ: ಸಂಸದೆ ಸುಮಲತಾ ಮಾತನಾಡುವಾಗ ‘ಯಾವುದೇ ನಿರ್ಣಯ ಕೈಗೊಳ್ಳುವುದಕ್ಕೆ ಮೊದಲು ರೈತರ ಅಭಿಪ್ರಾಯ ಪಡೆಯಬೇಕು’ ಎಂದರು. ಸಂದರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಮುಖಂಡರು, ಸಭೆಯಲ್ಲಿರುವ ಮುಖಂಡರೆಲ್ಲರೂ ರೈತರೇ ಆಗಿದ್ದು ರೈತ ಪ್ರತಿನಿಧಿಗಳಾಗಿ ಭಾಗವಹಿಸಿದ್ದೇವೆ. ಮತ್ತೊಮ್ಮೆ ರೈತರ ಅಭಿಪ್ರಾಯ ಪಡೆಯುವ ನೆಪದಲ್ಲಿ ಸರ್ಕಾರ ನಿರ್ಧಾರ ಕೈಳ್ಳುವುದರಿಂದ ಹಿಂದೆ ಸರಿಯಬಾರದು ಎಂದು ಹೇಳಿದರು.

‘250 ಹೆಚ್ಚು ಹಳ್ಳಿಗಳ ಸಾವಿರಾರು ರೈತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆ ಕುರಿತ ದಾಖಲಾತಿ, ಅಭಿಪ್ರಾಯಗಳು ಜೊತೆಯಲ್ಲೇ ಇವೆ. ಸಭೆಯನ್ನು ತಪ್ಪು ದಾರಿಗೆ ಎಳೆಯಬಾರದು’ ಎಂದು ಸುನಂದಾ ಜಯರಾಂ ಹೇಳಿದರು. ಮುಖ್ಯಮಂತ್ರಿಗಳು ನಿರ್ಣಯ ಕೈಗೊಂಡ ಬಳಿಕ ಸಂಸದೆ ಸುಮಲತಾ ಕೂಡ ಸಹಮತ ವ್ಯಕ್ತಪಡಿಸಿದರು.

******

2 ವರ್ಷಗಳ ನಂತರ ಮುಂದೇನು?

‘ಕಾರ್ಖಾನೆ ಆರಂಭಿಸಲು 3 ತಿಂಗಳ ಕಾಲ ಸಿದ್ಧತೆ ಮಾಡಿಕೊಳ್ಳಲಾಗುವುದು, ದಕ್ಷ ಅಧಿಕಾರಿ ನೇಮಕ ಮಾಡಲಾಗುವುದು. 2 ವರ್ಷ ಕಾರ್ಖಾನೆಯನ್ನು ಸರ್ಕಾದಿಂದಲೇ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ನಿರ್ಧಾರ ಪ್ರಕಟಿಸಿದರು. ‘2 ವರ್ಷಗಳ ನಂತರ ಮುಂದೇನು’ ಎಂಬ ಪ್ರಶ್ನೆ ರೈತ ಮುಖಂಡರನ್ನು ಕಾಡಿತು.

‘ಸರ್ಕಾರ 2 ವರ್ಷ ಕಾರ್ಖಾನೆ ನಡೆಸಿದ ನಂತರ ಮತ್ತೆ ಹಿಂದೆ ಸರಿಯುವ ಪ್ರಶ್ನೆಯೇ ಬರುವುದಿಲ್ಲ. ದಕ್ಷ ಅಧಿಕಾರಿಗಳನ್ನು ನೇಮಿಸಿ ಮತ್ತೆಂದೂ ಸ್ಥಗಿತಗೊಳ್ಳದಂತೆ ಭದ್ರ ಅಡಿಪಾಯ ಹಾಕಬೇಕಾಗಿದೆ. ಮುಖ್ಯಮಂತ್ರಿಗಳ ನಿರ್ಧಾರ ದಕ್ಷತೆಯಿಂದ ಕೂಡಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

*****

ದಕ್ಷ ಅಧ್ಯಕ್ಷರನ್ನೂ ನೇಮಿಸಿ: ಒತ್ತಾಯ

‘ದಕ್ಷ ಅಧಿಕಾರಿಗಳು ನೇಮಕಗೊಳ್ಳಬೇಕು, ಜೊತೆಗೆ ಅಧ್ಯಕ್ಷರ ಬದಲಾವಣೆಯೂ ಆಗಬೇಕು. ಕಾರ್ಖಾನೆ ಮತ್ತೆ ರೋಗಗ್ರಸ್ಥಗೊಳ್ಳದಂತೆ ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಅಧ್ಯಕ್ಷರು ಬರಬೇಕು. ರಾಜಕೀಯ ಒತ್ತಡದಿಂದ ನೇಮಕವಾಗಿರುವ ಅಧ್ಯಕ್ಷರ ಬದಲಾವಣೆಯಾಗಬೇಕು’ ಎಂದು ರೈತ ಮುಖಂಡರು ಆಗ್ರಹಿಸಿದರು.

‘ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ನೇಮಕಗೊಂಡ ಅಧ್ಯಕ್ಷರು ಸಕ್ಕರೆ ಚೀಲದಿಂದಲೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಹಳೆಯ ಯಂತ್ರಗಳಿಗೆ ಬಣ್ಣ ಬಳಿಸಿ ನೂರಾರು ಕೋಟಿ ಬಿಲ್‌ ಮಾಡಿಸಿಕೊಂಡಿದ್ದಾರೆ. ಈಗ ಕಾರ್ಖಾನೆಗೆ ಮರುಜೀವ ನೀಡಬಲ್ಲ ಸಮರ್ಥ ಅಧ್ಯಕ್ಷರು ನೇಮಕಗೊಳ್ಳಬೇಕು’ ಎಂದು ಒತ್ತಾಯಿಸಿದರು.

******

ಒಗ್ಗಟ್ಟಿಗೆ ಪ್ರಜಾವಾಣಿ ವರದಿ ಪ್ರೇರಣೆ

ರೈತರ ವಿರೋಧದ ನಡುವೆಯೂ ಮೇ ತಿಂಗಳಲ್ಲಿ, ಕೋವಿಡ್‌ ಪರಿಸ್ಥಿತಿಯ ನಡುವೆ ಸರ್ಕಾರ ಅನುಮಾನಾಸ್ಪದವಾಗಿ ಮೈಷುಗರ್‌ ಖಾಸಗಿ ಗುತ್ತಿಗೆ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಕುರಿತಂತೆ ಪ್ರಜಾವಾಣಿ ಜೂನ್‌ 21ರಂದು ವರದಿ ಪ್ರಕಟಿಸಿತ್ತು. ಆ ವರದಿ ರೈತರನ್ನು ಸರ್ಕಾರದ ವಿರುದ್ಧ ಕೆರಳಿಸಿತ್ತು, ಭಿನ್ನಾಭಿಪ್ರಾಯ ಹೊಂದಿದ್ದ ರೈತ ಮುಖಂಡರಲ್ಲಿ ಒಗ್ಗಟ್ಟು ಮೂಡಿಸಿತ್ತು, ಹೋರಾಟಕ್ಕೆ ಪ್ರೇರಣೆ ನೀಡಿತ್ತು.

‘ಖಾಸಗೀಕರಣ, ಒ ಅಂಡ್‌ ಎಂ ಆದರೂ ಪರವಾಗಿಲ್ಲ ಕಾರ್ಖಾನೆ ಆರಂಭವಾಗಲಿ’ ಎಂದು ಕೆಲವರು ಅಭಿಪ್ರಾಯ ಹೊಂದಿದ್ದರು. ಆದರೆ 40 ವರ್ಷಗಳವರೆಗೆ ಗುತ್ತಿಗೆ ನೀಡುತ್ತಿರುವ ಸುದ್ದಿ ತಿಳಿದ ಅವರು ತಮ್ಮ ಅಭಿಪ್ರಾಯದಿಂದ ಹೊರಬಂದು ಸರ್ಕಾರಿ ಸ್ವಾಮ್ಯದಲ್ಲೇ ಆರಂಭವಾಗಬೇಕು ಎಂದು ಒತ್ತಾಯಿಸಿ ಧರಣಿಗೆ ಬೆಂಬಲ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು