ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿದು ಮಲಗುತ್ತಿರುವ ರೋಗಿಗಳು

ಹುಳಿ ಇಡ್ಲಿ ನಿರಾಕರಿಸಿದ ಕೊರೊನಾ ಸೋಂಕಿತರು, ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 9 ಏಪ್ರಿಲ್ 2021, 2:33 IST
ಅಕ್ಷರ ಗಾತ್ರ

ಮಂಡ್ಯ: ನಗರದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕೋವಿಡ್‌ ಕೇರ್‌ ಕೇಂದ್ರದ ಕೋವಿಡ್‌–19 ರೋಗಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ಕಾರಣ ರೋಗಿಗಳು ಹಸಿದು ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಕ್ಕಲಿಗರ ವಿದ್ಯಾರ್ಥಿನಿಲಯವನ್ನು ಕೋವಿಡ್‌ ಕೇರ್‌ ಕೇಂದ್ರವನ್ನಾಗಿ ರೂಪಿಸಲಾಗಿದೆ. ಕಳೆದ ಬಾರಿ 1ನೇ ಕೋವಿಡ್‌ ಅಲೆಯ ವೇಳೆ 300ಕ್ಕೂ ಹೆಚ್ಚು ರೋಗಿಗಳು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ 2ನೇ ಅಲೆಯಲ್ಲಿ 139 ರೋಗಿಗಳನ್ನು ಅಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳಿಗೆ ಮೂಲ ಅವಶ್ಯಕ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸದ ಕಾರಣ ಅವರು ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ.

ರೆಡ್‌ಕ್ರಾಸ್‌ ಸಂಸ್ಥೆಯು ಕಡಿಮೆ, ಕಳಪೆ ಗುಣಮಟ್ಟದ ಆಹಾರ ಪೂರೈ ಸುತ್ತಿರುವುದಾಗಿ ರೋಗಿಗಳು ಆರೋಪಿಸುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಪೂರೈಸಿದ್ದ ಇಡ್ಲಿ ಸಂಪೂರ್ಣ ಹುಳಿಯಾ ಗಿದ್ದು, ರೋಗಿಗಳು ಅದನ್ನು ತಿನ್ನಲು ನಿರಾಕರಿಸಿದ್ದಾರೆ. ಬೇರೆ ತಿಂಡಿಯನ್ನೂ ತಂದುಕೊಟ್ಟಿಲ್ಲ. ಮಧ್ಯಾಹ್ನ, ರಾತ್ರಿ ಊಟಕ್ಕೆ ಉಪ್ಪು ಸಾರು, ರಾಗಿ ಮುದ್ದೆ, ಅನ್ನ ಪೂರೈಸಲಾಗುತ್ತದೆ. ಆದರೆ ಊಟ ರೋಗಿಗಳಿಗೆ ಕೊರತೆಯಾಗುತ್ತಿದ್ದು, ಹಸಿದು ಮಲಗುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ರೋಗಿಗಳು ಛಾಯಾ ಚಿತ್ರ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿ ಡುತ್ತಿದ್ದಾರೆ. ಕಳೆದ ಬಾರಿ 1ನೇ ಕೋವಿಡ್‌ ಅಲೆಯ ವೇಳೆ ಎಲ್ಲವೂ ಚೆನ್ನಾಗಿತ್ತು ಎಂಬ ಅಭಿಪ್ರಾಯವಿತ್ತು. ಆದರೆ ಈಗ ಸಿಬ್ಬಂದಿಯ ನಿರ್ಲಕ್ಷ್ಯ ದಿಂದಾಗಿ ರೋಗಿಗಳಿಗೆ ಗುಣಮಟ್ಟದ, ಪೌಷ್ಟಿ ಕಾಂಶದ ಊಟ ಮರೀಚಿ ಕೆಯಾಗಿದೆ ಎಂದು ರೋಗಿಗಳು ತಿಳಿಸಿದರು.

‘ಬುಧವಾರ ರಾತ್ರಿ ಕೊಟ್ಟಿದ್ದ ಊಟ ಎಲ್ಲರಿಗೂ ಸಾಕಾಗಲಿಲ್ಲ, ಹಲವರು ಹಸಿದು ಮಲಗಿದರು. ಊಟ–ತಿಂಡಿ ಪೂರೈ ಸಲು ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಾರೆ. ಪೌಷ್ಟಿಕ ಆಹಾರ ಪೂರೈಸುವು ದಾಗಿ ತಿಳಿಸಿದ್ದಾರೆ. ಆದರೆ ವಾಸ್ತವವಾಗಿ ಕಳಪೆ, ಕೊರತೆಯ ಊಟ ಪೂರೈಸು ತ್ತಿದ್ದಾರೆ. ಊಟ ಪೂರೈಕೆ ಯಲ್ಲೂ ಅವ್ಯವಹಾರ ಮಾಡಲಾ ಗುತ್ತಿದೆ’ ಎಂದು ರೋಗಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಮ್ಮಿನಿಂದ ನರಳುತ್ತಿರುವ ರೋಗಿ ಗಳಿಗೆ ಅಲಸಂದೆ ಸಾರು ಕೊಡುತ್ತಿದ್ದಾರೆ. ಇದರಿಂದ ಕೆಮ್ಮು ಇನ್ನೂ ಜಾಸ್ತಿಯಾಗುತ್ತಿದೆ’ ಎಂದು ರೋಗಿ ಯೊಬ್ಬರು ನೋವು ವ್ಯಕ್ತಪಡಿಸಿದರು.

ಕುಡಿಯುವ ನೀರಿಲ್ಲ: ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳು ಕಡ್ಡಾಯ ವಾಗಿ ಬಿಸಿನೀರು ಕುಡಿಯಬೇಕು ಎಂದು ವೈದ್ಯರು ತಿಳಿಸುತ್ತಾರೆ. ಆದರೆ, ನಗರದ ಕೋವಿಡ್‌ ಕೇರ್‌ ಕೇಂದ್ರದ ರೋಗಿಗಳು ಶುದ್ಧ ನೀರು ಪಡೆಯಲು ಪರದಾಡುತ್ತಿದ್ದಾರೆ. ತಣ್ಣೀರು ಕೂಡ ಸಿಗುತ್ತಿಲ್ಲ ಎಂದು ರೋಗಿಗಳು ಆರೋಪಿಸುತ್ತಾರೆ.

ನೀರಿನ ಕ್ಯಾನ್‌ಗಳನ್ನು ಕೇಂದ್ರಕ್ಕೆ ಪೂರೈಸಲಾಗುತ್ತಿದೆ. ದಿನಕ್ಕೆ 20 ಕ್ಯಾನ್‌ ಸರಬರಾಜು ಮಾಡಲಾಗುತ್ತಿದೆ. ವಿಪರೀತ ಬಿಸಿಲು ಇರುವ ಕಾರಣ ರೋಗಿಗಳು ಹೆಚ್ಚು ನೀರು ಕುಡಿಯುತ್ತಿದ್ದು ಎಲ್ಲರಿಗೂ ಸಾಕಾಗುತ್ತಿಲ್ಲ. ಒಮ್ಮೆ ಕ್ಯಾನ್‌ ಪೂರೈಸಿದ ನಂತರ ಮತ್ತೊಮ್ಮೆ ನೀರು ಪೂರೈಸಲು ನಿರಾಕರಿಸುತ್ತಿದ್ದಾರೆ ಎಂದು ರೋಗಿಗಳು ಆರೋಪಿಸುತ್ತಾರೆ.

ಸ್ವಚ್ಛತೆ ಮರೀಚಿಕೆ: ಕೇಂದ್ರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ರೋಗಿಗಳು ಪರದಾಡುವಂತಾಗಿದೆ. ತಟ್ಟೆ, ಕೈತೊಳೆ ಯುವ ಸಿಂಕ್‌ಗಳು ಕಟ್ಟಿಕೊಂಡಿದ್ದರೂ ಅದನ್ನು ಸರಿಪಡಿಸಿಲ್ಲ. ಈ ಕುರಿತು ವಿಡಿಯೊ ವೈರಲ್‌ ಆಗಿದ್ದು ಅನೈರ್ಮಲ್ಯದ ವಾತಾವರಣ ದುರ್ವಾಸನೆ ಮೂಡಿಸುವಂತಿದೆ.

‘80 ವರ್ಷ ತುಂಬಿದ ವೃದ್ಧರನ್ನು 2ನೇ ಅಂತಸ್ತಿನಲ್ಲಿ ಇರಿಸಿದ್ದಾರೆ. ಪರೀಕ್ಷೆಗೆ ತೆರಳಲು ಇಳಿದು
ಹತ್ತಲು ಸಾಧ್ಯವಾಗುತ್ತಿಲ್ಲ. ಯಾರಿಗೆ ಹೇಳಿದರೂ ಗಮನಹರಿಸುತ್ತಿಲ್ಲ’ ಎಂದು ವೃದ್ಧರೊ ಬ್ಬರು ನೋವು ವ್ಯಕ್ತಪಡಿಸಿದರು.

ಗ್ಯಾಸ್ಟ್ರಿಕ್‌ ಮಾತ್ರೆಗಾಗಿ ಪರದಾಟ

ಕೋವಿಡ್‌ ರೋಗಿಗಳು ಜ್ವರ, ಕೆಮ್ಮಿನಿಂದ ನರಳುತ್ತಿದ್ದು ರೋಗ ನಿರೋಧಕ (ಆ್ಯಂಟಿ ಬಯೋಟಿಕ್‌) ಮಾತ್ರೆ ನೀಡಲಾಗಿದೆ. ಆ್ಯಂಟಿ ಬಯೋಟಿಕ್‌ ತೆಗೆದುಕೊಳ್ಳುವವರು ಕಡ್ಡಾಯವಾಗಿ ಗ್ಯಾಸ್ಟ್ರಿಕ್‌ ಮಾತ್ರೆ ಸೇವಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಗ್ಯಾಸ್ಟ್ರಿಕ್‌ ಮಾತ್ರೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ.

‘ಗ್ಯಾಸ್ಟ್ರಿಕ್‌ ಮಾತ್ರೆ ಕೊಡುವಂತೆ ನರ್ಸ್‌ಗೆ ನೂರು ಬಾರಿ ಹೇಳಿದ್ದೇನೆ. ಮಾತ್ರೆ ಪೂರೈಕೆ ಇಲ್ಲ ಎನ್ನುತ್ತಿದ್ದಾರೆ’ ಎಂದು ರೋಗಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT