ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ: ಪ್ರತಿಭಟನಾಕಾರರು

ಯುಪಿ ಸರ್ಕಾರ ವಜಾಕ್ಕೆ ಆಗ್ರಹ: ಪ್ರತಿಭಟನಾಕಾರರ ಆರೋಪ
Last Updated 7 ಅಕ್ಟೋಬರ್ 2020, 3:39 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಉತ್ತರಪ್ರದೇಶದ ಹಾಥರಸ್‌ ಮತ್ತು ಬಲರಾಂಪುರಗಳಲ್ಲಿ ಪರಿಶಿಷ್ಟಜಾತಿಯ ಯುವತಿಯರ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿ ವಿಧಾನಸೌಧ ಎದುರು ದಲಿತ ಸಂಘರ್ಷ ಸಮಿತಿ, ರೈತಸಂಘ, ಕರನಾಡ ಸೇವಕರ ಪಡೆ, ಮಡಿವಾಳರ ಕ್ಷೇಮಾಭಿವೃಧ್ಧಿ ಸಂಘ, ಒಕ್ಕಲಿಗರ ಕೆಂಪೇಗೌಡ ಯುವ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು. ಉತ್ತರಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು ಮಾತನಾಡಿ, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯವರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಶೋಷಿತ ವರ್ಗಗಳ ಜನರು ಆತಂಕದಲ್ಲಿ ಬದುಕುತ್ತಿದ್ದಾರೆ. ಅಧಿಕಾರಸ್ಥರು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು. ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಮಾತನಾಡಿ, ಬಿಜೆಪಿ ಸರ್ಕಾರ ಇರುವ ಕಡೆ ದೌರ್ಜನ್ಯಗಳು ಹೆಚ್ಚು ನಡೆಯುತ್ತಿವೆ. ಜನರು ಜಾಗೃತರಾಗಬೇಕು. ಜನ ವಿರೋಧಿ ಸರ್ಕಾರಗಳನ್ನು ಕೆಳಗಿಳಿಸಬೇಕು ಎಂದರು. ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಸನ್ಯಾಸಿಗೆ ಅಧಿಕಾರ ಕೊಟ್ಟಿರುವ ಬಿಜೆಪಿ ಜನರ ಜೀವನದ ಜತೆ ಹುಡುಗಾಟವಾಡುತ್ತಿದೆ. ಜನ ವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕರುನಾಡ ಸೇವಕರ ಪಡೆ ಅಧ್ಯಕ್ಷೆ ಪ್ರಿಯಾ ರಮೇಶ್‌ ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಗಂಜಾಂ ರವಿಚಂದ್ರ, ಕುಬೇರಪ್ಪ, ರೈತ ಸಂಘದ ಗೌರವಾಧ್ಯಕ್ಷ ಬಿ.ಎಸ್‌. ರಮೇಶ್‌ ಮಾತನಾಡಿದರು. ಕೃಷಿಕ ಸಮಾಜದ ನಿರ್ದೇಶಕ ಕಡತನಾಳು ಬಾಲಕೃಷ್ಣ, ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮರಳಾಗಾಲ ಮಂಜುನಾಥ್‌, ಒಕ್ಕಲಿಗರ ಕೆಂಪೇಗೌಡ ಯುವ ವೇದಿಕೆ ಅಧ್ಯಕ್ಷ ಮಹೇಶ್‌, ಡಾ. ಬಾಬು ಜಗಜೀವನರಾಂ ಜನ ಜಾಗೃತಿ ಸಮಿತಿ ಅಧ್ಯಕ್ಷ ಅರಕೆರೆ ಸಿದ್ದರಾಜು, ಕರವೇ ನಗರ ಘಟಕದ ಅಧ್ಯಕ್ಷ ಹರೀಶ್‌ಗೌಡ, ಕಲಾವತಿ, ಲೋಕೇಶ್‌, ತಮ್ಮಣ್ಣ, ಶ್ರೀಕಂಠು, ಮೋಹನ್‌, ಜಯರಾಮೇಗೌಡ, ಪಾಲಹಳ್ಳಿ ನರಸಿಂಹ, ಸಿದ್ದೇಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT