ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಸ್.ಯಡಿಯೂರಪ್ಪ ಅವರನ್ನು ಯಾರಿಂದಲೂ ಮುಗಿಸಲು ಅಸಾಧ್ಯ; ಬಿ.ವೈ.ವಿಜಯೇಂದ್ರ

Published 22 ಏಪ್ರಿಲ್ 2023, 13:26 IST
Last Updated 22 ಏಪ್ರಿಲ್ 2023, 13:26 IST
ಅಕ್ಷರ ಗಾತ್ರ

ಮಳವಳ್ಳಿ: ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಆ ಪಕ್ಷ ಛಿದ್ರವಾಗಿದ್ದು, ಜಿಲ್ಲೆಯಲ್ಲಿ ಬಿಜೆಪಿ ಪರ ಬರೀ ಅಲೆಯಲ್ಲ ಸುನಾಮಿಯೇ ಎದ್ದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಬಳಿ ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ಪರ ರೋಡ್ ಶೋ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೆ.ಆರ್.ಪೇಟೆಯಲ್ಲಿ ಕೆ.ಸಿ.ನಾರಾಯಣಗೌಡ ಅವರು ಗೆಲುವು ಸಾಧಿಸುವ ಮೂಲಕ ಕಮಲ ಅರಳಿಸಿದ್ದರು. ಆಗ ಅಲ್ಲಿ ಗೆಲುತ್ತೇವೆ ಎಂದು ಅಂದುಕೊಂಡಿರಲಿಲ್ಲ, ಗೆಲುವು ಸಾಧಿಸುವ ಮೂಲಕ ಜೆಡಿಎಸ್ ನ ಭದ್ರಕೋಟೆಯನ್ನು ಛಿದ್ರ ಮಾಡಿದ್ದವು. ಈ ಬಾರಿ ಮಳವಳ್ಳಿಯಲ್ಲಿ ಕಾರ್ಯಕರ್ತರ ಉತ್ಸಾಹ ಗಮನಿಸಿದರೆ ನಮ್ಮ ಅಭ್ಯರ್ಥಿ ಜಿ.ಮುನಿರಾಜು ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿ.ಎಸ್.ಯಡಿಯೂರಪ್ಪ ಅವರು 80ರ ವಯಸ್ಸಿನಲ್ಲೂ ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿ ಗೆದ್ದು ಹೊಸ ಇತಿಹಾಸ ನಿರ್ಮಿಸುತ್ತೇವೆ. ಜಿ.ಮುನಿರಾಜು ಗೆದ್ದರೆ ನಿಮ್ಮ ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ಗೆದ್ದಂತೆ. ಮೇ.13ರಂದು ಮಳವಳ್ಳಿಗೆ ಬರುತ್ತೇನೆ. ಎಲ್ಲರೂ ಸೇರಿ ಪಟಾಕಿ ಹೊಡೆಯೋಣ ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್ನವರು ಖಾಲಿ ಭಾಷಣ ಮಾಡಲು ಬರುತ್ತಾರೆ. ಆದರೆ ನಾವು ಹಾಗೆ ಮಾಡುವುದಿಲ್ಲ. ನಮ್ಮ ಅಭ್ಯರ್ಥಿ ಗೆದ್ದರೆ ವಿರೋಧ ಪಕ್ಷದಲ್ಲಿ ಕೂರುವುದಿಲ್ಲ, ಆಡಳಿತ ಪಕ್ಷದ ಜೊತೆ ಇರುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದೆಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಕಿರುಗಾವಲಿಗೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರನ್ನು ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ, ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಪಟ್ಟಣದಲ್ಲಿ ಬೃಹತ್ ಹೂವಿನ ಹಾರ ಹಾಕಿ ಜೈಕಾರ ಹಾಕಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಯಮದೂರು ಸಿದ್ದರಾಜು, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಮೋಹನ್, ಮುಖಂಡರಾದ ದೋರನಹಳ್ಳಿ ಕುಮಾರಸ್ವಾಮಿ, ಮಧು ಗಂಗಾಧರ್ ಇದ್ದರು.

ಮನವೊಲಿಕೆ: ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಅಸಮಾಧಾನಗೊಂಡಿದ್ದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಯಮದೂರು ಸಿದ್ದರಾಜು ಅವರನ್ನು ಮನವೊಲಿಸುವಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಯಶ್ವಸಿಯಾದರು.

ಪಟ್ಟಣದ ಯಮದೂರು ಸಿದ್ದರಾಜು ನಿವಾಸದಲ್ಲಿ ಅವರನ್ನು ಭೇಟಿ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ನಿಮಗೆ ಸೂಕ್ತ ಸ್ಥಾನಮಾನ ಕೊಡಲಾಗುವುದು ನೀವು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದರು. ಈ ಬಗ್ಗೆ ಸಮ್ಮತಿ ಸೂಚಿಸಿದ ಯಮದೂರು ಸಿದ್ದರಾಜು ಜಿ.ಮುನಿರಾಜು ಅವರ ಜೊತೆ ನಿಲ್ಲುವುದಾಗಿ ಹೇಳಿದರು.

ನಂತರ ಬಿ.ವೈ.ವಿಜಯೇಂದ್ರ ಮಾತನಾಡಿ, ಅಧಿಕಾರ ನೀಡದಿದ್ದರೂ ಯಮದೂರು ಸಿದ್ದರಾಜು ಹಾಗೂ ಕುಮಾರಸ್ವಮಿ ಅವರು ಪಕ್ಷ ಸಂಘಟನೆಗೆ ದುಡಿದಿದ್ದಾರೆ. ಟಿಕೆಟ್ ಸಿಗಲ್ಲಿಲ್ಲವೆಂದು ಅಸಮಾಧಾನ ಮಾಡಿಕೊಂಡಿದ್ದರು. ಮಾತುಕತೆ ನಡೆಸಿದ ಬಳಿಕ ಮುನಿರಾಜು ಅವರ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದರು.

ಬಾಕ್ಸ್: ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಮುಗಿಸಲು ಪ್ಲಾನ್ ನಡೆದಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಸಂಬಂಧ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಓಡಾಡುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಗಿಸಲು ಯಾರರಿಂದಲೂ ಸಾಧ್ಯವಿಲ್ಲ. ಅಂಥ ಕುತಂತ್ರ ಬಿಜೆಪಿಯಲ್ಲಿ ನಡೆಯುತ್ತಿಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಪರ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಮೀಸಲಾತಿ ಬಗ್ಗೆ ಕಣ್ಣೊರಿಸುವ ತಂತ್ರ ಅನುಸರಿಸುತ್ತಿತ್ತು. ಆದರೆ ಬಿಜೆಪಿ ಪಕ್ಷ ಪ್ರಾಮಾಣಿಕವಾಗಿ ಗಟ್ಟಿ ನಿರ್ಧಾರ ಮಾಡಿದೆ ಎಂದು ಹೇಳಿದರು.

ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಬಳಿ ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ಪರ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ರೋಡ್ ಶೋ ನಡೆಸಿದರು.
ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಬಳಿ ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ಪರ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ರೋಡ್ ಶೋ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT