ಶುಕ್ರವಾರ, ಜನವರಿ 24, 2020
22 °C
ಕಳಪೆ ಬಿತ್ತನೆ ಬೀಜದಿಂದ ಕಾಳು ಕಟ್ಟದ ಭತ್ತ, ಸಾವಿರಾರು ರೂಪಾಯಿ ನಷ್ಟ, ಸಂಕಷ್ಟದಲ್ಲಿ ಅನ್ನದಾತರು

ಮಂಡ್ಯ: ರೈತರಿಗೆ ಸುಗ್ಗಿ ಸಂಭ್ರಮವಿಲ್ಲ, ಪರಿಹಾರಕ್ಕೆ ಅಲೆದಾಟ

ಶರತ್‌.ಎಂ.ಆರ್‌. Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಇನ್ನೇನು ಸುಗ್ಗಿ ಹಬ್ಬ–ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದು, ಬೆಳೆದ ಬೆಳೆ ಕಟಾವು ಆಗಿ ರೈತರ ಮೊಗದಲ್ಲಿ ಸಂತಸ ಮನೆ ಮಾಡಬೇಕಿತ್ತು. ಆದರೆ, ಕಳಪೆ ಹಾಗೂ ಪ್ರದೇಶಕ್ಕೆ ಸೂಕ್ತವಲ್ಲದ ಭತ್ತದ ಬಿತ್ತನೆ ಬೀಜದಿಂದ ತಾಲ್ಲೂಕಿನ ಮೊತ್ತಹಳ್ಳಿ, ಯತ್ತಗದಹಳ್ಳಿ ಸೇರಿದಂತೆ ಹಲವೆಡೆ ರೈತರ ಭತ್ತದ ಬೆಳೆಗಳು ಜಳ್ಳಾಗಿವೆ. ಹಾಕಿದ ಶ್ರಮ, ಸಾವಿರಾರು ರೂಪಾಯಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಮಂಡ್ಯ ತಾಲ್ಲೂಕಿನ ಮೊತ್ತಹಳ್ಳಿಯ ಎಂ.ಸಿದ್ದೇಗೌಡ (70 ಗುಂಟೆ), ನಿಂಗೇಗೌಡ (20 ಗುಂಟೆ), ಪುಟ್ಟಸ್ವಾಮಿ (1 ಎಕರೆ), ಯತ್ತಗದ ಹಳ್ಳಿಯ ಯೋಗೇಶ್‌ (20 ಗುಂಟೆ), ಮದ್ದೂರು ತಾಲ್ಲೂಕಿನ ಮಾಲಗಾರನಹಳ್ಳಿಯ ರಾಮಕೃಷ್ಣ (1 ಎಕರೆ) ಹಾಗೂ ಚಿಕ್ಕಣ್ಣ ಎಂಬುವರು ಎಂಆರ್‌ 8666 ತಳಿಯ ಭತ್ತದ ಬೀಜವನ್ನು ಬಿತ್ತನೆ ಮಾಡಿದ್ದು, ವಿರಳವಾಗಿ ಕಾಳು ಕಟ್ಟಿದೆ. ಪೂರ್ಣ ಪ್ರಮಾಣದಲ್ಲಿ ಜಳ್ಳಾಗಿದೆ.

ಮಂಡ್ಯದ ಮಂಜುನಾಥ್‌ ಆಗ್ರೋ ಟ್ರೇಡರ್‌ನಲ್ಲಿ ಟಾಟಾ ಪ್ರಾಡಕ್ಟ್‌ನ ಧಾನ್ಯ ಸೀಡ್ಸ್‌ ಎಂಆರ್‌ 8666 ಬಿತ್ತನೆ ಬೀಜ ಖರೀದಿಸಿದ್ದರು. ಜುಲೈನಲ್ಲಿ ಬಿತ್ತನೆ ಮಾಡಿದ್ದು, ಆಗಸ್ಟ್‌ 25ರಂದು ನಾಟಿ  ಮಾಡಿದ್ದರು. ಇದು 135 ದಿನಗಳ ಬೆಳೆಯಾಗಿದ್ದು, ಡಿಸೆಂಬರ್‌ ಮೊದಲ ವಾರದಲ್ಲಿ ಕಟಾವು ಆಗಬೇಕಿತ್ತು. ಆದರೆ, ಕಾಳು ಕಟ್ಟದೆ ಸಂಪೂರ್ಣ ಜಳ್ಳಾಗಿದ್ದು, ರೈತರಿಗೆ ದಿಕ್ಕೇ ತೋಚದಂತಾಗಿದೆ. 

ಭತ್ತ ಜಳ್ಳಾಗಿರುವುದನ್ನು ಅಂಗಡಿ ಯವರ ಗಮನಕ್ಕೆ ಸಾಕಷ್ಟು ಬಾರಿ ತರಲಾಗಿದೆ. ಕಂಪನಿಯವರಿಗೆ ತಿಳಿಸಿ ಪರಿಹಾರ ಕೊಡಿಸುವ ಭರವಸೆ ನೀಡುತ್ತಾರೆ. ಆದರೆ, ಪರಿಹಾರ ಮಾತ್ರ ಸಿಕ್ಕಿಲ್ಲ. ಕಳಪೆ ಬಿತ್ತನೆ ಬೀಜದಿಂದ ರೈತರು ನಷ್ಟ ಅನುಭವಿಸಿದ್ದು, ಮುಂದಿನ ಬೆಳೆಗೆ ಸಿದ್ಧತೆ ನಡೆಸದೆ ಹಾಗೇ ಬಿಟ್ಟಿದ್ದಾರೆ.

ಡಿ.10ರಂದು ವಿ.ಸಿ.ಫಾರಂ ವಿಜ್ಞಾನಿಗಳು, ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಬೆಳೆ ವರದಿ ನೀಡಿದ್ದಾರೆ. ಇತರ ಕಡೆಯಲ್ಲೂ ಈ ತಳಿಯ ಬಿತ್ತನೆ ಬೀಜದಿಂದ ಇದೇ ರೀತಿ ಬೆಳೆಯಾಗಿದೆ ಎಂದು ವರದಿ ನೀಡಲಾಗಿದೆ.‌

ನಾಟಿಯಿಂದ ಹಿಡಿದು, ತೆನೆ ಕಚ್ಚುವವರೆಗೆ 70 ಗುಂಟೆಗೆ ₹30 ಸಾವಿರ ಖರ್ಚು ಮಾಡಿದ್ದೇನೆ. ಜಳ್ಳಾಗಿರುವ ಭತ್ತವನ್ನು ಕಟಾವು ಮಾಡಲು ಇನ್ನೂ ₹20 ಸಾವಿರ ಬೇಕಾಗಿದೆ. ಬಿತ್ತನೆ ಬೀಜ ನೀಡಿದ ಅಂಗಡಿಯವರಿಗೆ ಸಾಕಷ್ಟು ಬಾರಿ ಮೌಖಿಕ ಹಾಗೂ ಪತ್ರ ವ್ಯವಹಾರ ನಡೆಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ಪ್ಯಾಕೆಟ್‌ಗೆ ₹825ರಂತೆ ಒಟ್ಟು 6 ಪ್ಯಾಕೆಟ್‌ಗಳಿಗೆ ₹4,950 ಹಣ ವ್ಯಯಿಸಿ ನಾಟಿ ಮಾಡಲಾಗಿತ್ತು. ಒಂದು ಗುಂಟೆಗೆ 1 ಕ್ವಿಂಟಲ್‌ ಇಳುವರಿ ಬರುತ್ತದೆ ಎಂದು ಅಂಗಡಿಯವರು ಹೇಳಿದ್ದರು. ಖರ್ಚು ಮಾಡಿರುವ ಹಣದ ಕಾಲು ಭಾಗವೂ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಎಂ.ಸಿದ್ದೇಗೌಡ ಅಳಲು ತೋಡಿಕೊಂಡರು.

ಟಾಟಾ ಪ್ರಾಡಕ್ಟ್‌ನ ಧಾನ್ಯ ಸೀಡ್ಸ್‌ನ ಎಂಸಿ 13 ಭತ್ತವನ್ನು 1 ಎಕರೆ 2 ಗುಂಟೆಯಲ್ಲಿ ಬೆಳೆಯಲಾಗಿದ್ದು, ಅದು ಅರ್ಧಕ್ಕರ್ಧ ಜಳ್ಳಾಗಿದೆ. ಹಾಕಿರುವ ಶ್ರಮಕ್ಕೆ ಹಣ ಬರುತ್ತಾದರೂ ಲಾಭವಿಲ್ಲದಂತಾಗಿದೆ. ಈ ತಳಿಯ ಭತ್ತ ಕರ್ನಾಟಕಕ್ಕೆ ಸೂಕ್ತ ಎಂದು ಬರೆದಿದ್ದರೂ ಯಾವ ಕಾರಣದಿಂದ ಜಳ್ಳಾಗಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಅಂಗಡಿಯವರು ಬಿಲ್‌ನಲ್ಲಿ ನಮೂದಿಸಿರುವ ತಳಿಯ ಹೆಸರೇ ಬೇರೆ, ಕೊಟ್ಟಿರುವುದೇ ಬೇರೆ. ಬಿಲ್‌ನಲ್ಲಿ ಎಂಆರ್‌ಎಚ್‌ 8666 ಎಂದಿದ್ದು, ರೈತರಿಗೆ ಎಂಆರ್‌ 8666 ಎಂಬ ಬಿತ್ತನೆ ಬೀಜದ ಪ್ಯಾಕೆಟ್‌ ನೀಡಲಾಗಿದೆ ಎಂದು ರೈತ ಪುಟ್ಟಸ್ವಾಮಿ ದೂರಿದರು.

ರಾಜ್ಯಕ್ಕೆ ಸೂಕ್ತವಲ್ಲದ ಬಿತ್ತನೆ ಬೀಜ

ಟಾಟಾ ಪ್ರಾಡಕ್ಟ್‌ನ ಧಾನ್ಯ ಸೀಡ್ಸ್‌ ಎಂಆರ್‌ 8666 ಸೀಡ್‌ ಜುಲೈ– ನವೆಂಬರ್‌ ಅವಧಿಯ ಬೆಳೆಯಾಗಿದ್ದು, ಪಂಜಾಬ್‌, ಹಿಮಾಚಲಪ್ರದೇಶ, ಜಮ್ಮುಕಾಶ್ಮೀರ, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಛತ್ತೀಸಗಢ, ಅಸ್ಸಾಂ, ಒಡಿಶಾ, ಮಧ್ಯಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಹವಾಗುಣ, ಭೂಮಿಗೆ ಸೂಕ್ತವಾಗಿದೆ.

ಕರ್ನಾಟಕ ಹೆಸರು ಇಲ್ಲದಿದ್ದರೂ ಅದನ್ನು ಹೇಗೆ ಮಾರಾಟ ಮಾಡಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರದೇಶಕ್ಕೆ ಸೂಕ್ತವಲ್ಲದ ಬಿತ್ತನೆ ಬೀಜ ವಿತರಣೆ ಮಾಡಲು ಅನುಮತಿ ನೀಡಿದ್ದಾರೂ ಯಾರು? ಹೆಚ್ಚು ಇಳುವರಿ ಕಾರಣದಿಂದ ರೈತರು ಆಸೆ ಬಿದ್ದು ಖರೀದಿಸಿದರೆ ಅಷ್ಟು ಇಳುವರಿ ಬರುವುದೇ ಇಲ್ಲ. ರೈತರಿಗೆ ಆಸೆ ತೋರಿಸಿ ಲಾಭ ಮಾಡಿಕೊಳ್ಳುತ್ತಿದ್ದು, ಇಂತಹವರ ವಿರುದ್ಧ ಕೃಷಿ ಇಲಾಖೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡು ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

‘ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಿ’

ಖಾಸಗಿ ಮಳಿಗೆಗಳು ಇಂತಹ ಬಿತ್ತನೆ ಬೀಜವನ್ನೇ ಮಾರಬೇಕು ಎಂಬ ನಿರ್ಬಂಧವನ್ನು 3 ವರ್ಷಗಳ ಹಿಂದೆಯೇ ತೆಗೆದು ಹಾಕಲಾಗಿದೆ. ರೈತರು ಖಾಸಗಿ ಕಂಪನಿಗಳ ಬಿತ್ತನೆ ಬೀಜ ಖರೀದಿಸುವುದಕ್ಕೂ ಮುನ್ನ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅದು ಈ ಪ್ರದೇಶಕ್ಕೆ ಸೂಕ್ತವೇ ಎಂಬ ಮಾಹಿತಿ ಪಡೆದುಕೊಂಡು ಎಚ್ಚರವಹಿಸಬೇಕು. ಬಿತ್ತನೆ ಬೀಜದಿಂದ ಬೆಳೆ ನಾಶವಾದಲ್ಲಿ ರಶೀದಿ, ಬಿತ್ತನೆ ಭತ್ತದ ಕವರ್‌ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್‌. ಚಂದ್ರಶೇಖರ್‌ ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು