ಶನಿವಾರ, ನವೆಂಬರ್ 26, 2022
23 °C
ಪ್ರತಿ ಟನ್‌ ಕಬ್ಬಿಗೆ ₹ 4,500 ಬೆಲೆ ನೀಡಲು ಒತ್ತಾಯ, ಸರ್ಕಾರದ ವಿರುದ್ಧ ಆಕ್ರೋಶ

ರೈತಸಂಘದಿಂದ ‘ಪೇ ಫಾರ್ಮರ್‌’ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಪ್ರತಿ ಟನ್‌ ಕಬ್ಬಿಗೆ ₹ 4,500 ಬೆಲೆ ಸೇರಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ರೈತಸಂಘದ ಸದಸ್ಯರು ಸೋಮವಾರ ಸಂಜಯ್‌ ವೃತ್ತದಲ್ಲಿ  ‘ಫೇ ಫಾರ್ಮರ್‌’ (ರೈತರಿಗೆ ಪಾವತಿಸಿ) ಅಭಿಯಾನ ಆರಂಭಿಸಿದರು.

ಬೆಂಗಳೂರು–ಮೈಸೂರು ನಡುವೆ ಸಂಚಾರ ಮಾಡುವ ಸಾರಿಗೆ ಸಂಸ್ಥೆ ಬಸ್‌ಗಳು ಹಾಗೂ ಇತರ ವಾಹನಗಳಿಗೆ ಪೇ ಫಾರ್ಮರ್‌ ಕ್ಯೂಆರ್‌ ಕೋಡ್‌ ಪತ್ರ ಅಂಟಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿ ದಿಕ್ಕಾರ ಕೂಗಿದರು.

ಕಾಂಗ್ರೆಸ್‌ ಪಕ್ಷ ‘ಪೇ ಸಿ.ಎಂ’ ಅಭಿಯಾನದ ಹೆಸರಿನಲ್ಲಿ ನಾಟಕವಾಡುತ್ತಿದೆ.  ಕಾಂಗ್ರೆಸ್ ಪಕ್ಷ ಕೂಡ ರೈತರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಬಿಜೆಪಿ ಸರ್ಕಾರವೂ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಎರಡೂ ರಾಜಕೀಯ ಪಕ್ಷಗಳಿಂದ ರೈತರಿಗೆ ಯಾವುದೇ ರೀತಿಯಿಂದಲೂ ಅನುಕೂಲವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತಸಂಘ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್‌ ಮಾತನಾಡಿ ‘ಕಾಂಗ್ರೆಸ್‌ನ ಪೇ ಸಿ.ಎಂ, ಬಿಜೆಪಿಯ ಪೇ ಮೇಡಂ ಅಭಿಯಾನಗಳು ದೊಡ್ಡ ನಾಟಕವಾಗಿವೆ. ಮೊದಲು ರೈತರಿಗೆ ನೀಡಬೇಕಾದ ಬಾಕಿ ಹಣ ನೀಡಲಿ, ನ್ಯಾಯಯುತವಾದ ಬೆಲೆ ನಿಗದಿ ಮಾಡಲಿ. ಸ್ವಾಮಿನಾಥನ್‌ ವರದಿ ಅನ್ವಯ ದರ ನಿಗದಿ ಮಾಡಲಿ. ಅದನ್ನು ಬಿಟ್ಟು ರಾಜಕಾರಣದಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳು ರೈತರಿಗೆ ಮಂಕುಬೂದಿ ಎರಚುತ್ತಿವೆ’ ಎಂದರು.

‘ರಾಜಕೀಯ ಪಕ್ಷಗಳಿಗೆ ವೋಟು ಹಾಕಿಸಿಕೊಳ್ಳಲು ರೈತ ಬೇಕು. ಹಸಿರು ಟವೆಲ್‌ ಧರಿಸಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ರೈತ ಬೇಕು. ಆದರೆ ರೈತರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಅನ್ಯಾಯ ಸದಾ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಐದು ವರ್ಷಕ್ಕೆ ಒಮ್ಮೆ ಮಾತ್ರ ರೈತರು ನೆನಪಿಗೆ ಬರುತ್ತಾರೆ. ಸದನದಲ್ಲೂ ರಾಜಕಾರಣಿಗಳಿಗೆ ರೈತರು ನೆನಪಿಗೆ ಬರುವುದಿಲ್ಲ’ ಎಂದರು.

‘ಪ್ರತಿ ಟನ್‌ ಕಬ್ಬಿಗೆ ₹ 4,500 ದರ ನೀಡಬೇಕು ಎಂದು ಹಲವು ವರ್ಷಗಳಿಂದಲೂ ಒತ್ತಾಯಿಸುತ್ತಿದ್ದೇವೆ. ಆದರೆ ₹ 2,750 ಮಾತ್ರ ನೀಡುತ್ತಿದ್ದಾರೆ. ಅದರಲ್ಲಿ ₹ 1 ಸಾವಿರ ಕಟಾವು, ಸಾಗಾಣಿಕೆಗೆ ಕೊಡಬೇಕಾಗಿದೆ. ಉಳಿದ ಹಣದಲ್ಲಿ ಗೊಬ್ಬರ, ನೀರು, ಕ್ರಿಮಿನಾಶಕ ಸೇರಿಸಿದರೆ ರೈತರಿಗೆ ಏನೂ ಸಿಗುವುದಿಲ್ಲ. ರಾಜಕೀಯಕ್ಕಾಗಿ ಅಭಿಯಾನ ಮಾಡುವುದನ್ನು ಬಿಟ್ಟು ರೈತರ ಬೆಳೆಗಳಿಗೆ ಬೆಲೆ ನೀಡಬೇಕು’ ಎಂದು ಒತ್ತಾಯಿಸಿದರು.

‘ರಾಜಕೀಯ ಪಕ್ಷಗಳು ನಡೆಸುತ್ತಿರುವ ಅಭಿಯಾನದಿಂದ ರೈತರಿಗೆ, ಸಾರ್ವಜನಿಕರಿಗೆ ಏನು ಅನುಕೂಲ, ಇದರಿಂದ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆಯೇ? ಪೇ ಫಾರ್ಮರ್‌ ಅಭಿಯಾನವನ್ನು ರಾಜ್ಯದಾದ್ಯಂತ ನಡೆಸಲಾಗುವುದು. ಈ ಕುರಿತು ಚಿತ್ರದುರ್ಗದಲ್ಲಿ ನಡೆಯುವ ರೈತಸಂಘ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ, ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ, ಪ್ರಸನ್ನ ಎನ್‌ ಗೌಡ, ಚಿಕ್ಕಾಡೆ ಹರೀಶ್‌, ಶಿವಳ್ಳಿ ಚಂದ್ರು, ತಗ್ಗಹಳ್ಳಿ ಪ್ರಸನ್ನ, ಲಿಂಗಪ್ಪಾಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು