ಮಂಗಳವಾರ, ಜೂನ್ 15, 2021
25 °C
ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಶೈಕ್ಷಣಿಕ ಚಟುವಟಿಕೆ

ಕೊರೊನಾ ನಡುವೆ ಪರೀಕ್ಷೆಗೆ ಸಜ್ಜು: ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ತಯಾರಿ

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಕೊರೊನಾ ಸೋಂಕಿನ ಮಧ್ಯೆಯೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಜೂನ್‌ 21ರಿಂದ ಆರಂಭವಾಗಲಿರುವ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ನಿಗದಿತ ಸಿಲಬಸ್‌ ಪೂರ್ಣಗೊಳಿಸಲು ತಾಲ್ಲೂಕಿನ ಎಲ್ಲ ಶಾಲೆಗಳ ಶಿಕ್ಷಕರಿಗೆ ಸೂಚಿಸಿದ್ದು, ಮೊಬೈಲ್‌ ಮೂಲಕ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ, ಅದಕ್ಕೆ ಉತ್ತರಿಸುವ ವಿಧಾನ ಕುರಿತು ವಿವರಗಳನ್ನು ಒದಗಿಸುತ್ತಿದ್ದಾರೆ.

ಪ್ರತಿ ಶಾಲೆಗಳಲ್ಲಿ ಶಿಕ್ಷಕರು ವಿಷಯವಾರು ವಿದ್ಯಾರ್ಥಿಗಳ ಗುಂಪು ರಚಿಸಿದ್ದಾರೆ. ಕನ್ನಡ, ಇಂಗ್ಲಿಷ್‌, ವಿಜ್ಞಾನ–ಹೀಗೆ ಆಯಾ ವಿಷಯ ಬೋಧಿಸುವ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್‌ ಗುಂಪು ರಚಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಕಳುಹಿಸುವುದು, ಉತ್ತರ ಪಡೆಯುವುದು, ತಪ್ಪುಗಳನ್ನು ತಿದ್ದುತ್ತಿದ್ದಾರೆ. ವಿದ್ಯಾರ್ಥಿಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲೂ ಅವಕಾಶ ಮಾಡಿ ಕೊಡ ಲಾಗಿದೆ.

‘ತರಗತಿ ನಡೆಯದಿದ್ದರೂ ಮನೆಯಲ್ಲೇ ಪರೀ ಕ್ಷೆಗೆ ಓದುತ್ತಿದ್ದೇನೆ. ಬಹುಪಾಲು ಪಾಠ ಮುಗಿದಿದ್ದು, ಮೊಬೈಲ್‌ ಮೂಲಕ ಪ್ರಶ್ನೆ ಪತ್ರಿಕೆ ಮತ್ತು ಅವುಗಳಿಗೆ ಉತ್ತರಿಸುವ ವಿಧಾನವನ್ನು ಶಿಕ್ಷಕರಿಂದ ಪಡೆಯುತ್ತಿದ್ದೇನೆ. ಪ್ರತಿ ದಿನ ನಮ್ಮ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಪರೀಕ್ಷೆಯ ಪೂರಕ ವಿಷಯಗಳು ಬರುತ್ತಿವೆ. ಜೂನ್‌ 21ರಿಂದ ಪರೀಕ್ಷೆ ನಡೆದರೂ ಚೆನ್ನಾಗಿ ಬರೆಯಬಲ್ಲೆ’ ಎಂದು ತಾಲ್ಲೂಕಿನ ಬೆಳವಾಡಿ ಗ್ರಾಮದ 10ನೇ ತರಗತಿ ವಿದ್ಯಾರ್ಥಿನಿ ಕೀರ್ತನಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ನಮ್ಮ ಶಾಲೆಯ ವಿದ್ಯಾರ್ಥಿಗಳು ‍ಮನೆಯಲ್ಲಿಯೇ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಆಂಡ್ರಾಯ್ಡ್‌ ಮೊಬೈಲ್‌ ಇಲ್ಲದ ವಿದ್ಯಾರ್ಥಿಗಳನ್ನು ಸಮೀಪದ ಮನೆಯ ವಿದ್ಯಾರ್ಥಿ ಜತೆ ಟ್ಯಾಗ್‌ ಮಾಡಿ ಸಂಭಾವ್ಯ ಪ್ರಶ್ನೆಗಳನ್ನು ಕೊಟ್ಟು ಉತ್ತರ ಪಡೆಯಲಾಗುತ್ತಿದೆ. ಕೆಲವರು ನಮಗೇ ಪ್ರಶ್ನೆ ಹಾಕಿ ಉತ್ತರ ಪಡೆಯುತ್ತಿದ್ದಾರೆ. ವಾರ್ಷಿಕ ಪರೀಕ್ಷೆಗೆ ಸಿದ್ಧತೆಯಂತೂ ನಡೆಯುತ್ತಿದೆ’ ಎಂದು ನಗುವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಮಂಜುನಾಥ್‌ ಹೇಳಿದ್ದಾರೆ.

‘ಕೋವಿಡ್‌ ಕಾರಣಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಶೇ 30ರಷ್ಟು ಸಿಲಬಸ್‌ ಕಡಿತ ಮಾಡಲಾಗಿದೆ. ‘ಪಾಸಿಂಗ್‌ ಪ್ಯಾಕೇಜ್‌’ ಕ್ರಮ ಅನುಸರಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ. ಈ ಸಂಬಂಧ ಎಲ್ಲ ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ಜೂಮ್‌ ಮೀಟಿಂಗ್‌ ಮೂಲಕ ಸೂಚನೆ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ 927 ಬಾಲಕಿಯರು ಸೇರಿ 2031 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು, ಜೂನ್ 21ರಿಂದ ಆರಂಭವಾಗುವ ಮುಖ್ಯ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌.ಅನಂತರಾಜು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು