ಶುಕ್ರವಾರ, ಡಿಸೆಂಬರ್ 4, 2020
24 °C

ಮಂಡ್ಯ ಜಿ.ಪಂನಲ್ಲಿ ಅಧಿಕಾರದ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಮೊದಲು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್‌ ಶನಿವಾರ ನೂತನ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ.

ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆಯ ತಿದ್ದುಪಡಿ ಅನ್ವಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಮೀಸಲಾತಿ ಅವಧಿಯನ್ನು 5 ವರ್ಷದಿಂದ 30 ತಿಂಗಳ ಅವಧಿಗೆ ಇಳಿಸಿ ಅಧಿಸೂಚನೆ ಹೊರಡಿಸಲಾಗಿದೆ. 30 ತಿಂಗಳ ನಂತರ ಹೊಸ ಮೀಸಲಾತಿ ಪ್ರಕಟಗೊಂಡು, ಚುನಾವಣೆ ನಡೆಯುವವರೆಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಅದರಂತೆ ಸಿ.ಅಶೋಕ್‌ ಅಧಿಕಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಸರ್ಕಾರದ ಸ್ಪಷ್ಟನೆ: ಈ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದು ಕಾಯ್ದೆಯ ತಿದ್ದುಪಡಿಗೂ ಮೊದಲು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಅವಧಿ 5 ವರ್ಷಗಳವರೆಗೆ ನಿಗದಿ ಪಡಿಸಿರುವ ಕಾರಣ ಮೀಸಲಾತಿಯನ್ನು 30 ತಿಂಗಳಿಗೆ ಹೊಸದಾಗಿ ಬದಲಾಯಿಸುವವರೆಗೂ ಕಾಯ್ದೆ ತಿದ್ದುಪಡಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಎಸ್‌ಪಿಗೆ ದೂರು: ಮೀಸಲಾತಿ ಕುರಿತಂತೆ ಸರ್ಕಾರ ಸ್ಪಷ್ಟನೆ ನೀಡಿದ್ದರೂ ಸಿ.ಅಶೋಕ್‌, ಅಧ್ಯಕ್ಷರ ಕೊಠಡಿಗೆ ಅತಿಕ್ರಮ ಪ್ರವೇಶ ಮಾಡಿ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ಆರೋಪಿಸಿ ನಾಗರತ್ನಾ ಸ್ವಾಮಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಅವರಿಗೆ ದೂರು ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್‌ ಅಧಿಕಾರದಲ್ಲಿದ್ದು ಮೇ 1ಕ್ಕೆ ಅವಧಿ ಕೊನೆಗೊಳ್ಳಲಿದೆ. ನಾಗರತ್ನಾ ಪತಿ ಸ್ವಾಮಿ ಬಿಜೆಪಿಗೆ ಸೇರ್ಪಡೆಯಾಗಿರುವ ಕಾರಣ ಜೆಡಿಎಸ್ ಮುಖಂಡರು ಕಳೆದ 2 ವರ್ಷಗಳಿಂದಲೂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಆದರೆ ನಾಗರತ್ನಾರಾಜೀನಾಮೆ ಒತ್ತಡವನ್ನು ತಳ್ಳಿಹಾಕುತ್ತಲೇ ಬಂದಿದ್ದಾರೆ. ಜೆಡಿಎಸ್‌ನಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಅವಿಶ್ವಾಸ ಮಂಡನೆಯೂ ಸಾಧ್ಯವಾಗಿಲ್ಲ.

ಕಳೆದ 2 ವರ್ಷಗಳಿಂದ ಕೋರಂ ಕೊರತೆಯ ಕಾರಣಕ್ಕೆ 6 ಸಾಮಾನ್ಯ ಸಭೆಗಳನ್ನು ಮುಂದೂಡಲಾಗಿದೆ. ಇಲ್ಲಿಯವರೆಗೂ 2020–21ನೇ ಸಾಲಿನ ಬಜೆಟ್‌ ಮಂಡನೆಯಾಗಿಲ್ಲ, ಇದರಿಂದ ಸರ್ಕಾರದ ಅನುದಾನ ವಾಪಸ್‌ ಹೋಗುವ ಅಪಾಯ ಎದುರಾಗಿದೆ.

ಕಾಯ್ದೆ ತಿದ್ದುಪಡಿ ಅವಕಾಶವನ್ನು ಬಳಸಿಕೊಂಡು ಅಧ್ಯಕ್ಷೆಯನ್ನು ಕಳೆಗಿಳಿಸಲು ಜೆಡಿಎಸ್‌ ಮುಖಂಡರು ಯತ್ನಿಸಿದ್ದಾರೆ. ಆದರೆ ಸರ್ಕಾರ ನೀಡಿರುವ ಸ್ಪಷ್ಟನೆ ನಾಗರತ್ನಾ ಅವರಿಗೆ ವರವಾಗಿದೆ.

‘ಕಾಯ್ದೆಯ ತಿದ್ದುಪಡಿಯು ಹಿಂದೆ ನಿಗದಿಯಾಗಿರುವ ಮೀಸಲಾತಿಗೆ ಅನ್ವಯವಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಸಿ.ಅಶೋಕ್‌ ಅಧಿಕಾರ ಸ್ವೀಕಾರ ಮಾಡಿರುವುದು ಅನೂರ್ಜಿತವಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು