ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌ ಕಾರ್ಖಾನೆ ಶೀಘ್ರ ಆರಂಭಿಸಲು, ಕಬ್ಬಿನ ದರ ಹೆಚ್ಚಿಸಲು ಒತ್ತಾಯ

ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ
Last Updated 20 ಸೆಪ್ಟೆಂಬರ್ 2021, 12:55 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಿದರು, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಮೊದಲಿಗೆ ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಕಾರ್ಯಕರ್ತರು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ ರ್‍ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿವರೆಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದು ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿಯೊಳಗೆ ತೆರಳಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ರೈತರ ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡಲು ಕೂಡಲೇ ರೈತರ ಜೀವನಾಡಿ ಆಗಿರುವ ಮೈಷುಗರ್ ಕಾರ್ಖಾನೆಯನ್ನು ಪ್ರಾರಂಭಿಸಬೇಕು. ಕೇಂದ್ರ ಸರ್ಕಾರವು ಪ್ರಸ್ತುತ 10.25 ಇಳುವರಿಗೆ ₹ 2,900 ರೂಪಾಯಿ ಎಫ್‌ಆರ್‌ಪಿ ನಿಗದಿ ಮಾಡಿರುವುದು ಖಂಡನೀಯ. ಕನಿಷ್ಠ ಒಂದು ಟನ್‌ ಕಬ್ಬಿಗೆ ₹4,000 ನೀಡಬೇಕು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೂಡಲೇ ರೈತರ ಬೇಡಿಕೆ ಈಡೇರಿಸಬೇಕು, ಇಲ್ಲದಿದ್ದರೆ ಮೈಸೂರು ದಸರಾ ಹಬ್ಬದ ದಿನ ಮೈಸೂರು ನಗರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಮನ್‌ಮುಲ್‌ನ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿಲ್ಲ, ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದೆ. ಇದರ ನಡುವೆ ಒಕ್ಕೂಟವು 191 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ದೇಶನ ನೀಡಿರುವುದು ಖಂಡನೀಯವಾಗಿದ್ದು, ಸರ್ಕಾರ ಕೂಡಲೇ ನೇಮಕಾತಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಆರ್‌ಎಸ್‌ ಜಲಾಶಯದ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸಿ ಅಣೆಕಟ್ಟೆಯನ್ನು ರಕ್ಷಿಸಬೇಕು. ರೈತ ವಿರೋಧಿ 3 ಕೃಷಿ ಕಾಯಿದೆ ಮತ್ತು ವಿದ್ಯುತ್‌ ತಿದ್ದುಪಡಿ ವಾಪಸ್‌ ಪಡೆಯಬೇಕು. ಸಂಯುಕ್ತ ಕಿಸಾನ್‌ ಮೋರ್ಚಾ ಸೆ.27 ರಂದು ಕರೆ ನೀಡಿರುವ ಭಾರತ್‌ ಬಂದ್‌ಗೆ ಸಂಪೂರ್ಣ ಬೆಂಬಲವಿದೆ. ಹಿಂದಿ ದಿವಸ್‌ ಆಚರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಧೋರಣೆ ಸರಿಯಿಲ್ಲ ಎಂದು ಖಂಡಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷರಾದ ಪುಟ್ಟಸ್ವಾಮಯ್ಯ, ಕೆ.ಎಸ್‌.ಬಾಲಚಂದ್ರು, ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌.ಕೆಂಪೂಗೌಡ, ಉಪಾಧ್ಯಕ್ಷರಾದ ಜಿ.ಎ.ಶಂಕರ, ವಿಜಯಕುಮಾರ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಪ್ಪಾಜಿ, ಖಜಾಂಚಿ ಎಸ್.ಕೆ.ರವಿಕುಮಾರ್, ಹಾಲು ಉತ್ಪಾದಕರ ಹೋರಾಟ ಸಮಿತಿಯ ಅಧ್ಯಕ್ಷ ಎಸ್‌.ಸಿ.ಮಧುಚಂದನ್‌ ಇದ್ದರು.

ಕಬ್ಬುಬೆಳೆಗಾರರ ಒಕ್ಕೂಟ ಪ್ರತಿಭಟನೆ: ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮೈಷುಗರ್‌ ಕಬ್ಬು ಬೆಳೆಗಾರರ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮೈಷುಗರ್ ಕಾರ್ಖಾನೆಯನ್ನು ತಕ್ಷಣ ಸರ್ಕಾರಿ ಸ್ವಾಮದ್ಯದಲ್ಲಿಯೇ ಆರಂಭಿಸಬೇಕು. ಈ ಬಗ್ಗೆ ನಮ್ಮ ಒಕ್ಕೂಟದಿಂದ ಬೆಂಗಳೂರಿನಲ್ಲಿ ಧರಣಿ ನಡೆಸಿ ಮನವಿ ನೀಡಲಾಗಿತ್ತು, ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹಕರಿಸುವುದಾಗಿ ಹೇಳಿದ್ದರು, ಆದರೆ, ಇಲ್ಲಿಯವರೆಗೂ ಮುಖ್ಯಮಂತ್ರಿ ಬದಲಾಗಿದ್ದಾರೆಯೇ ಹೊರತು ಖಾರ್ಖಾನೆ ಉಳಿವಿಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಒಕ್ಕೂಟದ ಜಿಲ್ಲಾ ಘಟಕ ಅಧ್ಯಕ್ಷ ಸಾತನೂರು ಎಸ್‌.ಎಂ.ವೇಣುಗೋಪಾಲ್‌ , ಉಪಾಧ್ಯಕ್ಷ ಶಿವಶಂಕರ್, ಕಾರ್ಯದರ್ಶಿ ಎಂ.ನಾಗರಾಜು, ಖಜಾಂಚಿ ಎಂ.ಈ.ಚಂದ್ರಶೇಖರ್, ಭೂತನಹೊಸೂರು ಮಂಜುನಾಥ್‌ ಭಾಗವಹಿಸಿದ್ದರು.

*****


8ನೇ ದಿನಕ್ಕೆ ತಲುಪಿದ ಧರಣಿ

ಮಂಡ್ಯ: ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಬೇಕು ಎಂದು ರೈತಹಿತರಕ್ಷಣಾ ಸಮಿತಿ ಹಾಗೂ ಇತರ ಸಂಘಟನೆಗಳು ನಡೆಸುತ್ತಿರುವ ಹೋರಾಟ ಸೋಮವಾರ 8ನೇ ದಿನಕ್ಕೆ ತಲುಪಿತು.

ಕಬ್ಬು ಬೆಳೆಗಾರರ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿವೆ. ಮೈಷುಗರ್‌ ಕಾರ್ಖಾನೆ ಆರಂಭಿಸಿದೇ ರೈತರಿಗೆ ತೊಂದರೆ ಕೊಡುತ್ತಿರುವ ಸರ್ಕಾರದ ನಡೆ ಖಂಡನೀಯ. ನಮ್ಮ ಜನಪ್ರತಿನಿಧಿಗಳು ಸಹ ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಕರ್ನಾಟಕ ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಮೈಷುಗರ್‌ ಉಳಿವಿಗೆ ದನಿ ಎತ್ತಬೇಕು ’ ಕರ್ನಾಟಕ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷ ಗೋವಿಂದೇಗೌಡ ಒತ್ತಾಯಿಸಿದರು.

ರೈತ ಮುಖಂಡ ಯೋಗಾರಮೇಶ್, ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ರಾಜ್ಯ ರೈತ ಸಂಘ(ಮೂಲಸಂಘಟನೆ)ದ ಸಂಚಾಲಕ ಇಂಡುವಾಳು ಚಂದ್ರಶೇಖರ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಜನವಾದಿ ಮಹಿಳಾ ಸಂಘಟನೆಯ ಮಹದೇವಮ್ಮ, ಸಾಹಿತಿ ಜಿ.ಟಿ.ವೀರಪ್ಪ, ಕೀಲಾರ ಸೋಮಶೇಖರ್, ಎಂ.ಬಿ.ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಅಂಬುಜಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT