ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಸೇವಾ ಮನೋಭಾವದಿಂದ ಹೆಸರುವಾಸಿಯಾದವರು...

Last Updated 1 ಜನವರಿ 2021, 5:51 IST
ಅಕ್ಷರ ಗಾತ್ರ

ಡಾ.ದೇಸು ವೈಷ್ಣವಿಗೆ 2 ಬಾರಿ ಕೋವಿಡ್‌

ಮಂಡ್ಯ: ನಗರದ ಮಿಮ್ಸ್ ಆಸ್ಪತ್ರೆ, ಕೋವಿಡ್‌ ವಾರ್ಡ್‌ನಲ್ಲಿ ಗಂಟಲುದ್ರವ ತೆಗೆಯುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿರುವ ಡಾ.ದೇಸು ವೈಷ್ಣವಿ ಅವರಿಗೆ ಎರಡು ಬಾರಿ ಕೋವಿಡ್‌–19 ತಗುಲಿತು.

ಎರಡೂ ಬಾರಿ ಕೋವಿಡ್‌ ಗೆದ್ದು ಬಂದಿರುವ ವೈಷ್ಣವಿ ಈಗ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. ಇಡೀ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹೆಸರುವಾಸಿಯಾಗಿರುವ ಈ ಯುವವೈದ್ಯೆ ತಮ್ಮ ಸೇವಾ ಮನೋಭಾವದಿಂದ ಹೆಸರುವಾಸಿಯಾಗಿದ್ದಾರೆ.

ತೆಲಂಗಾಣ ರಾಜ್ಯ ಕರೀಂನಗರದ ಡಾ.ದೇಸು ವೈಷ್ಣವಿ ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಪೂರ್ಣಗೊಳಿಸಿದ್ದಾರೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಇಎನ್‌ಟಿ ವಿಭಾಗದಲ್ಲಿ ಎಂ.ಎಸ್‌ ಅಧ್ಯಯನ ಮಾಡುತ್ತಿದ್ದಾರೆ. ಕೋವಿಡ್‌ ಆರಂಭವಾದ ಕಾಲದಿಂದಲೂ ವಾರ್ಡ್‌ನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.

ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸುತ್ತಿದ್ದ ಅವರಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಮೊದಲ ಬಾರಿ ಕೋವಿಡ್‌–19 ತಗುಲಿತು. ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಅವರು ಅಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆದು ಗುಣಮುಖರಾದರು.

15 ದಿನಗಳ ನಂತರ ಮತ್ತೆ ಅವರು ಕೋವಿಡ್‌ ಕರ್ತವ್ಯಕ್ಕೆ ಹಾಜರಾದರು. ಹಲವು ತಿಂಗಳುಗಳಿಂದ ಯಾವುದೇ ರಜೆ ಪಡೆಯದೇ ಕೆಲಸ ಮಾಡುತ್ತಿರುವ ಅವರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಸಾಕಷ್ಟು ಸುರಕ್ಷಾ ಕ್ರಮಗಳ ಕೈಗೊಂಡರೂ ಅವರಿಗೆ ಮತ್ತೆ ನವೆಂಬರ್ ತಿಂಗಳಲ್ಲಿ ಕೊರೊನಾ ಸೋಂಕು ತಗುಲಿತು. ಗುಣಮುಖರಾಗಿದ್ದು ಮತ್ತೆ ಕೋವಿಡ್‌ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೋವಿಡ್‌ ವಾರ್ಡ್‌ನಲ್ಲಿ ಅತೀ ಹೆಚ್ಚು ದಿನ ಕೆಲಸ ಮಾಡಿದ ವೈದ್ಯೆ ಎಂಬ ಕೀರ್ತಿಗೆ ಡಾ.ವೈಷ್ಣವಿ ಪಾತ್ರರಾಗಿದ್ದಾರೆ. ವಾರ್ಡ್‌ನ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುವ ಅವರು ಕೆಲವು ವೇಳೆ ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಾರೆ. ಆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಲು ಸಜ್ಜಾಗುತ್ತಿದ್ದಾರೆ.

***

ರೋಗಿಗಳ ಸೇವಾ ನಿರತ ಕೀರ್ತಿ
ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿರುವ ಕೀರ್ತಿ ಕಳೆದ 6 ತಿಂಗಳಿಂದ ರಜೆಯನ್ನೇ ಪಡೆಯದೇ ಕೋವಿಡ್‌ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ.

ವೈದ್ಯರು ಪ್ರೀತಿಯ ಸಿಬ್ಬಂದಿಯಾಗಿರುವ ಕೀರ್ತಿ ರೋಗಿಗಳನ್ನು ವಾರ್ಡ್‌ಗೆ ಸೇರ್ಪಡೆ ಮಾಡುವುದರಿಂದ ಹಿಡಿದು ಅವರಿಗೆ ಊಟ, ವಸತಿ ಸೌಲಭ್ಯ ನೋಡಿಕೊಳ್ಳುವ ಕೆಲಸವನ್ನೂ ಮಾಡುತ್ತಿದ್ದಾರೆ. ಸದೃಢ ಮನಸ್ಥಿತಿ ಹೊಂದಿರುವ ಅವರು ರೋಗಿಯು ಎಂಥದ್ದೇ ಪರಿಸ್ಥಿತಿಯಲ್ಲಿ ಇದ್ದರೂ ಅವರನ್ನು ಎತ್ತಿ, ಆರೈಕೆ ಮಾಡುತ್ತಾರೆ.

ಕೋವಿಡ್‌ನಿಂದ ಮೃತಪಟ್ಟವರನ್ನು ಶವಾಗಾರಕ್ಕೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಮಿಮ್ಸ್‌ನಲ್ಲಿ ಇಲ್ಲಿಯವರೆಗೆ 147 ಮಂದಿ ಮೃತಪಟ್ಟಿದ್ದು, ಎಲ್ಲರ ಶವಗಳನ್ನು ಸ್ಥಳಾಂತರ ಮಾಡಿದ ಹೆಗ್ಗಳಿಕೆ ಕೀರ್ತಿಯ ಮೇಲಿದೆ. ಕೆಲವು ಸಂದರ್ಭಗಳಲ್ಲಿ ಶವಸಂಸ್ಕಾರ ಸಿಬ್ಬಂದಿಯ ಜೊತೆ ತೆರಳಿ ಅವರಿಗೆ ಸಹಾಯ ಮಾಡುತ್ತಾರೆ.

ಶವಗಳನ್ನು ಮುಟ್ಟಲು ಭಯ ಪಡುವ ಸಂದರ್ಭದಲ್ಲಿ ಎಲ್ಲರಿಗೂ ಧೈರ್ಯ ತುಂಬುತ್ತಾ ಸೇವೆ ಮಾಡುತ್ತಿದ್ದಾರೆ. ಎಷ್ಟೇ ಹೊತ್ತಿನಲ್ಲೂ ಕರೆ ಮಾಡಿದರೂ ಅವರು ಸೇವೆಗೆ ದೊರೆಯುತ್ತಾರೆ.ಇವರ ಸೇವೆಗೆ ಯಾವುದೇ ಪಾಳಿಯ ಬೇಲಿ ಇಲ್ಲ, ಸದಾ ಕಾಲಾ ಮಿಮ್ಸ್‌ ಆಸ್ಪತ್ರೆಯ ಸೇವೆ ಸಿದ್ಧರಿದ್ದಾರೆ.

ಮಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ವೈದ್ಯರು ಮಾತ್ರೆ, ಔಷಧಿಗಳಿಂದ ಚಿಕಿತ್ಸೆ ನೀಡಿದರೆ ಡಿ ದರ್ಜೆ ನೌಕರ ಕೀರ್ತಿ ತನ್ನ ಪ್ರೀತಿ ತುಂಬಿದ ಮಾತುಗಳಿಂದ ಉಪಚಾರ ಮಾಡುತ್ತಾರೆ. ಆಸ್ಪತ್ರೆಗೆ ಬಂದ ಜನರು ಇವರ ಹೆಸರನ್ನು ಸದಾ ಸ್ಮರಿಸುತ್ತಾರೆ. ರೋಗಿಗಳಿಗೆ ಬೇಕಾದ ಸೌಲಭ್ಯ, ರಕ್ತ ಪರೀಕ್ಷೆ, ಸ್ಕ್ಯಾನಿಂಗ್‌ ಮುಂತಾದ ಚಟುವಟಿಕೆಗಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಾರೆ.

ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದ ಇವರು ಮಿಮ್ಸ್‌ ಆಸ್ಪತ್ರೆಯಲ್ಲಿ ‘ಕೋವಿಡ್‌ ಸೇನಾನಿ’ ಎಂದೇ ಗುರುತಿಸಿಕೊಂಡಿದ್ದಾರೆ.

***

ಡೇವಿಡ್‌: ಹಾಡುವ ಹಕ್ಕಿಯ ಸೇವೆ
ಮಂಡ್ಯ: ನಗರದಲ್ಲಿ ‘ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ’ ಸ್ಥಾಪಿಸಿರುವ ಕಲಾವಿದ ಡೇವಿಡ್‌ ಬರೋಬ್ಬರಿ 7 ತಿಂಗಳು ಕೋವಿಡ್‌ನಿಂದ ಸಂಕಷ್ಟ ಅನುಭವಿಸಿದ ಜನರಿಗೆ ಸಹಾಯ ಮಾಡಿದ್ದಾರೆ.

ಲಾಕ್‌ಡೌನ್‌ ಪೂರ್ಣಗೊಂಡ ಬಳಿಕ ಬಹಳಷ್ಟು ಸಂಘ–ಸಂಸ್ಥೆಗಳು ಸೇವಾ ಕಾರ್ಯ ಸ್ಥಗಿತಗೊಳಿಸಿದವು. ಆದರೆ ಡೇವಿಡ್‌ ತಮ್ಮ ಗಾಯಕ ಶಿಷ್ಯರನ್ನು ಕಟ್ಟಿಕೊಂಡು ಬೀದಿ ಬೀದಿ ಸುತ್ತಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಊಟ ವಿತರಣೆ, ಆಹಾರ ಸಾಮಗ್ರಿ, ಮಾಸ್ಕ್‌, ಸೋಪು, ಸ್ಯಾನಿಟೈಸರ್‌, ಬಟ್ಟೆಬರೆ ಮುಂತಾದ ಸಾಮಗ್ರಿಗಳನ್ನು ನೀಡಿದರು.

ವಿವಿಧ ಎಟಿಎಂಗಳಲ್ಲಿ, ಕಟ್ಟಡಗಳಲ್ಲಿ ಕಾವಲುಗಾರರಾಗಿ ದುಡಿಯುವ ಕಾರ್ಮಿಕರಿಗೆ ಊಟ ಹಾಗೂ ಕುಡಿಯುವ ನೀರು ವಿತರಣೆ ಮಾಡಿದ್ದಾರೆ. ಡೇವಿಡ್‌ ಜೊತೆಗಿದ್ದವರೆಲ್ಲರೂ ಸಂಗೀತ ಶಿಷ್ಯರು, ವಾದ್ಯಗಳನ್ನು ನುಡಿಸುವ ಕಲಾವಿದರೇ ಆಗಿದ್ದರು. ಕಲಾವಿದರ ಪಡೆ ಕಟ್ಟಿಕೊಂಡು ಸಂಕಷ್ಟದಲ್ಲಿದ್ದವರಿಗೆ ನೆರವಾದರು.

ಅನಾರೋಗ್ಯದಲ್ಲಿರುವ ಕಲಾವಿದರಿಗೆ, ಕಾರ್ಮಿಕರಿಗೆ ಔಷಧಿಗಳನ್ನು ಮನೆಗೆ ಕೊಂಡೊಯ್ದು ವಿತರಣೆ ಮಾಡಿದ್ದಾರೆ. ನಿತ್ರಾಣ ಸ್ಥಿತಿಯಲ್ಲಿದ್ದ ರೋಗಿಗಳನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಹಾಡುವ ಹಕ್ಕಿಯಾದರೂ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದನೆ ನೀಡಿರುವುದು ಅಪರೂಪವಾದುದು.

ಈಗಲೂ ಸಂಕಷ್ಟದಲ್ಲಿರುವ ಜನರು, ರೋಗಿಗಳು ಡೇವಿಡ್‌ ಅವರಿಗೆ ಕರೆ ಮಾಡುತ್ತಾರೆ, ಸಹಾಯ ಕೋರುತ್ತಾರೆ. ನೋವಿನಲ್ಲಿರುವ ಜನರ ಕರೆಗೆ ಸ್ಪಂದಿಸುವ ಡೇವಿಡ್‌ ತಕ್ಷಣ ಅವರಿಗೆ ಬೇಕಾದ ಸಹಾಯ ನೀಡುತ್ತಾರೆ. ಅಂಗವಿಕಲರಿಗೆ ಟ್ರೈಸಿಕಲ್‌ ವಿತರಣೆ, ಬಡ ಮಕ್ಕಳಿಗೆ ಪಾಠೋಪಕರಣಗಳ ವಿತರಣೆ ಮಾಡಿ ಮಾನವೀಯತೆ ಮೆರೆಯುತ್ತಾರೆ.

ಸಂಗೀತ ಕಲಿಯಲು ಬರುವ ಯುವಜನರಿಗೆ ಸ್ವರ ಹೇಳಿಕೊಡುವ ಜೊತೆಗೆ ಸೇವಾ ಮನೋಭಾವವನ್ನೂ ಮೂಡಿಸುತ್ತಿದ್ದಾರೆ. ಕೋವಿಡ್‌ ಸಂಕಷ್ಟ ಸಮಯದಲ್ಲಿ ಪ್ರತಿಭಾಂಜಲಿ ಸಂಗೀತ ಅಕಾಡೆಮಿಯಿಂದ ಸ್ಮರಣೀಯ ಕೆಲಸಗಳು ಆಗಿರುವುದನ್ನು ನಗರದ ಜನರು ಸದಾ ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT