ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಹಾಲು ಖರೀದಿ ದರ ಲೀಟರ್‌ಗೆ ₹1.50 ಇಳಿಕೆ

Published 4 ಡಿಸೆಂಬರ್ 2023, 5:52 IST
Last Updated 4 ಡಿಸೆಂಬರ್ 2023, 5:52 IST
ಅಕ್ಷರ ಗಾತ್ರ

ಮಂಡ್ಯ: ಹಾಲು ಖರೀದಿ ದರವನ್ನು ಲೀಟರ್‌ಗೆ ₹1.50 ಇಳಿಕೆ ಮಾಡುವ ನಿರ್ಧಾರವನ್ನು ‘ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ’ ಕೈಗೊಂಡಿದ್ದು, ರೈತರಿಂದ ಆಕ್ರೋಶ ವ್ಯಕ್ತವಾಗಿದೆ. ಬರದ ನಡುವೆ ಗಾಯ ಮೇಲೆ ಬರೆ ಎಳೆಯುವ ತೀರ್ಮಾನವಿದು ಎಂದು ಹೈನುಗಾರರು ದೂರಿದ್ದಾರೆ.

ಜಿಲ್ಲೆಯಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು,  ಮಂಡ್ಯದ ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿ ಶನಿವಾರ ಹಾಲನ್ನು ನೆಲಕ್ಕೆ ಸುರಿದರಲ್ಲದೇ, ಮನ್‌ಮುಲ್‌ ಅಧ್ಯಕ್ಷ ಬೋರೇಗೌಡ ಅವರ ಪ್ರತಿಕೃತಿ ದಹಿಸಿದ್ದರು. ಹೋಬಳಿ ಮಟ್ಟದಲ್ಲೂ ಪ್ರತಿಭಟನೆಗಳು ನಡೆದಿವೆ.

‘ಈ ಮೊದಲು ₹ 3 ಹೆಚ್ಚಿಸುವ ಮುನ್ನವೂ ₹ 1.50 ಇಳಿಕೆ ಮಾಡಲಾಗಿತ್ತು. ಇದೀಗ ಮತ್ತೆ ₹ 1.50 ಇಳಿಕೆ ಮಾಡಿ, ಮೊದಲಿನ ದರದಲ್ಲೇ ಖರೀದಿ ನಡೆಯುತ್ತಿದೆ. ಈ ಮೋಸವು ಹಾಲು ಉತ್ಪಾದಕರಿಗೆ ಗೊತ್ತಾಗುವುದಿಲ್ಲವೇ’ ಎನ್ನುತ್ತಾರೆ ಬೇವುಕಲ್ಲು ಗ್ರಾಮದ ಶಿವಪ್ರಸಾದ್‌.

‘ಹಾಲು ಖರೀದಿ ದರ ಕಡಿಮೆದ್ದಲ್ಲದೇ ಪಶು ಆಹಾರವನ್ನೂ ಹೆಚ್ಚಿಸಲಾಗಿದೆ. ಕೆಎಂಎಫ್‌ನಿಂದ 50 ಕೆ.ಜಿ ನಂದಿನಿ ಫೀಡ್‌ ಬ್ಯಾಗ್‌ಗೆ ₹1,125ರಿಂದ ₹1,265ಕ್ಕೆ ಹೆಚ್ಚಿಸಲಾಗಿದೆ. ಹೈನುಗಾರರಿಗೆ ಪ್ರೋತ್ಸಾಹ ಧನವನ್ನು ಸರಿಯಾಗಿ ಕೊಡುತ್ತಿಲ್ಲ. ಈ ಬಗ್ಗೆ ರೈತರು ಹಾಗೂ ಸಂಘಟನೆಗಳು ದನಿ ಎತ್ತುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬರ ಬಂದಿರುವುದರಿಂದ ಇಳುವರಿಯೆಲ್ಲ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ರಾಸುಗಳಿಗೆ ಹುಲ್ಲು ಹೊಂದಿಸುವುದು ಕಷ್ಟವಾಗುತ್ತದೆ. ಭತ್ತದ ಹುಲ್ಲಿನ ದರವೂ ಏರಿಕೆಯಾದರೆ ತುಂಬಾ ನಷ್ಟವಾಗಲಿದೆ’ ಎಂದರು.

₹24 ಕೋಟಿ ನಷ್ಟ

‘ರೈತರಿಗೆ ತೊಂದರೆಯಾಗುವ ನಿರ್ಧಾರವೆಂದೂ ಗೊತ್ತಿದೆ. ಆದರೆ, ಮನ್‌ಮುಲ್‌ ₹ 24 ಕೋಟಿ ನಷ್ಟದಲ್ಲಿರುವುದರಿಂದ ಅದನ್ನು ತಪ್ಪಿಸಲು ಖರೀದಿ ದರ ಇಳಿಕೆ ಮಾಡಲಾಗಿದೆ’ ಎಂದು ಮನ್‌ಮುಲ್ ಅಧ್ಯಕ್ಷ ಬಿ.ಬೋರೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮನ್‌ಮುಲ್‌ ಅಷ್ಟೇ ಅಲ್ಲದೇ ರಾಜ್ಯದ ಎಲ್ಲ ಹಾಲು ಒಕ್ಕೂಟಗಳು ದರ ಇಳಿಸಿವೆ. ದರ ಏರಿಕೆ ಹಾಗೂ ಇಳಿಕೆಯನ್ನು ಸಹಜವಾಗಿ ಪ್ರತಿವರ್ಷವೂ ಮಾಡಲಾಗುತ್ತಿದೆ. ಅಂತೆಯೇ ಮಾಡಲಾಗಿದೆ’ ಎಂದರು.

‘ನಷ್ಟ ತಪ್ಪಿಸಲು ತೀರ್ಮಾನ’

‘ಒಕ್ಕೂಟದಲ್ಲಿ ನಿತ್ಯ 9.5 ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಸರ್ಕಾರವು ₹ 3 ಪ್ರೋತ್ಸಾಹ ಹಣ ನೀಡುತ್ತಿರುವುದು 5 ಲಕ್ಷ ಲೀಟರ್‌ಗೆ ಮಾತ್ರ. ಹೀಗಾಗಿ 4.5 ಲಕ್ಷ ಲೀಟರ್‌ ಹಾಲಿಗೆ ಇದು ಬರುವುದಿಲ್ಲ. ನಷ್ಟ ತಪ್ಪಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಇದು ತಾತ್ಕಾಲಿಕ. ಏಪ್ರಿಲ್ ವೇಳೆಗೆ ಮತ್ತೆ ಹೆಚ್ಚಾಗಲಿದೆ’ ಎಂದು ತಿಳಿಸಿದರು. ‘2.5 ಸಾವಿರ ಟನ್ ಹಾಲಿನ ಪುಡಿ ಉತ್ಪಾದನೆಯಾಗಿದ್ದು ಅದೂ ಮಾರಾಟವಾಗಿಲ್ಲ. ಶಾಲಾ ಮಕ್ಕಳಿಗೆ ನೀಡುವ ಪುಡಿ ಪ್ಯಾಕ್‌ಗೆ ₹350 ಆಗುತ್ತದೆ. ನಮಗೆ ₹ 286 ಆಗುತ್ತದೆ. ಇದನ್ನು ಹೆಚ್ಚಿಸುವಂತೆ ಕೆಎಂಎಫ್ ಮೂಲಕ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯ ಅವಶ್ಯಕತೆಗೆ ಮಾತ್ರ ಪೌಡರ್‌ ಉತ್ಪಾದಿಸಲು ನಿರ್ಧಾರ ಮಾಡಲಾಗಿದೆ. ನಷ್ಟವಾಗುವುದನ್ನು ತಪ್ಪಿಸಲಾಗಿದೆ’ ಎಂದರು.

ಮನ್‌ಮುಲ್‌ ₹ 24 ಕೋಟಿ ನಷ್ಟದಲ್ಲಿದೆ. ಹಾಲು ಖರೀದಿ ದರ ಇಳಿಕೆ ತಾತ್ಕಾಲಿಕವಾಗಿದ್ದು ಏಪ್ರಿಲ್ ವೇಳೆಗೆ ದರ ಏರಿಕೆ ಮಾಡಲಾಗುವುದು
ಬಿ.ಬೋರೇಗೌಡ, ಮನ್‌ಮುಲ್‌ ಅಧ್ಯಕ್ಷ
ಮೇವು ದರ ಏರಿಕೆಯಾಗಿದೆ. ಇದೀಗ ಹಾಲು ಖರೀದಿ ದರವನ್ನು ₹ 1.50 ಇಳಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ
ಜಿ.ಎನ್.‌ಮಧುಗೌಡ, ರೈತ ಮುಖಂಡ, ಗರಕಹಳ್ಳಿ ಶ್ರೀರಂಗಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT