ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬಾಚಹಳ್ಳಿ ಹೋಬಳಿ: ನೀರಿಲ್ಲದೆ ತತ್ತರಿಸಿದ ಜನ, ಜಾನುವಾರು

ಹೋಬಳಿಯಲ್ಲಿ ಖಾಸಗಿ ಕೊಳವೆಬಾವಿಗಳೇ ಕುಡಿಯುವ ನೀರಿಗೆ ಆಸರೆ
Last Updated 30 ಏಪ್ರಿಲ್ 2019, 10:13 IST
ಅಕ್ಷರ ಗಾತ್ರ

ಸಂತೇಬಾಚಹಳ್ಳಿ: ಹೋಬಳಿಯಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಖಾಸಗಿ ಕೊಳವೆಬಾವಿಗಳಿಂದ ನೀರು ಹರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಬರದ ಛಾಯೆ ಆವರಿಸಿದೆ. ಈ ವರ್ಷದ ಬಿಸಿಲ ತಾಪ ಹೆಚ್ಚಾಗಿದ್ದು, ಕುಡಿಯುವ ನೀರಿನ ಕೊರತೆಯಿಂದ ಜನ, ಜಾನುವಾರುಗಳು ತತ್ತರಿಸುತ್ತಿವೆ. ಸಂತೇಬಾಚಹಳ್ಳಿ ಹೋಬಳಿಯ ಸುತ್ತಲಿನ ಗ್ರಾಮಗಳು ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿವೆ. ಸಮೃದ್ಧವಾಗಿ ಮಳೆಯಾದರೆ ಮಾತ್ರ ಇಲ್ಲಿನ ಕೆರೆ ಕಟ್ಟೆಗಳು ತುಂಬುತ್ತವೆ. ಇಲ್ಲವಾದರೆ ಬರದ ಛಾಯೆಯಲ್ಲಿ ಕಷ್ಟದ ಬದುಕು ನಡೆಸಬೇಕಾಗುತ್ತದೆ.

ಬೇಸಿಗೆ ಆರಂಭದಲ್ಲಿಯೇ ಬಹುತೇಕ ಕೆರೆ ಕಟ್ಟೆಗಳು ಒಣಗಿದ್ದು, ನೀರಿನ ಸಮಸ್ಯೆ ತೀವ್ರವಾಗಿದೆ. ಬಹುತೇಕ ಗ್ರಾಮಗಳ ಜನರು ಕುಡಿಯಲು ನೀರಿಲ್ಲದೇ ಕಂಗಾಲಾಗಿದ್ದಾರೆ. ಮಳೆ ಕೊರತೆಯಿಂದ ಕೆರೆ ಕಟ್ಟೆಗಳು ಬರಿದಾಗಿವೆ. ಜಾನುವಾರುಗಳಿಗೆ ನೀರು, ಮೇವು ಇಲ್ಲದೆ ರೈತರು ಕಡಿಮೆ ಬೆಲೆಗೆ ತಮ್ಮ ರಾಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಗದ್ದಲದಲ್ಲಿ ಮರೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆ ಈಗ ಮುನ್ನೆಲೆಗೆ ಬರುತ್ತಿದೆ. ಕುಡಿಯುವ ನೀರು ಪೂರೈಸುವಂತೆ ಜನರು ಬೀದಿಗಿಳಿದಿದ್ದಾರೆ. ಜಾನುವಾರುಗಳ ಮೇವಿಗೂ ಬೇಡಿಕೆ ಹೆಚ್ಚುತ್ತಿದೆ.

ಹೊಸಹಳ್ಳಿ ಗ್ರಾಮದಲ್ಲಿ ಕೊರೆಸಲಾದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ಪಂಚಾಯಿತಿ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾ ಗುತ್ತಿದೆ. ಪ್ರತಿಯೊಂದು ಗ್ರಾಮದಲ್ಲಿ ಕಿರು ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದು, ಈ ಘಟಕಗಳು ನೀರಿಲ್ಲದೆ ಒಣಗಿವೆ. ರೈತರು ಜಮೀನಿನಲ್ಲಿ ಕೊರೆಸಿರುವ ಕೊಳವೆಬಾವಿಗಳು ಗ್ರಾಮದ ಜನರು ಹಾಗೂ ಜಾನುವಾರುಗಳ ದಾಹವನ್ನು ತಣಿಸುತ್ತಿವೆ.

ಕೊಳವೆ ಬಾವಿಗಳು ಬತ್ತಿರುವು ದರಿಂದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರಿಲ್ಲದೆ ಸ್ಥಗಿತಗೊಂಡಿವೆ ಎಂದು ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಅಂತರ್ಜಲ ಮಟ್ಟ ಕುಸಿತ: ಸಂತೇಬಾಚಹಳ್ಳಿಯ ಹೋಬಳಿಯ ಶೇ 80 ರಷ್ಟು ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಆಶ್ರಯಿಸಿದ್ದಾರೆ. ಶೇ 20ರಷ್ಟು ಜನರು ಕೆರೆ ನೀರನ್ನು ಅವಲಂಬಿಸಿದ್ದಾರೆ. ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಕೆರೆಗಳು ಕೂಡ ಖಾಲಿಯಾಗುತ್ತಿದ್ದು, ಅಂತರ್ಜಲ ಮಟ್ಟ ಕೂಡ ಕುಸಿಯುತ್ತಿದೆ. 400 ಅಡಿಗಳಿಗೆ ಸಿಗುತ್ತಿದ್ದ ನೀರು ಈಗ 650 ಕೊರೆಸಿದರೂ ಸಿಗುತ್ತಿಲ್ಲ. ಹೀಗಾಗಿ, ಕೊಳವೆಬಾವಿಗಳನ್ನೇ ಅವಲಂಬಿಸಿರುವ ಗ್ರಾಮಗಳ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜಿಗೆ ಸೂಚನೆ

ಸಂತೇಬಾಚಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು, ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಹೊಂದಿರುವವರಿಗೆ ಮಾಸಿಕ ₹18 ಸಾವಿರ ಬಾಡಿಗೆ ನೀಡಿ ನೀರು ಸರಬರಾಜು ಮಾಡುವಂತೆ ಸೂಚಿಸಲಾಗಿದೆ. ಜನರಿಗೆ ಕುಡಿಯುವ ನೀರು ಮತ್ತು ರಾಸುಗಳಿಗೆ ನೀರು ಹಾಗೂ ಮೇವು ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ ಎಂದು ತಹಶೀಲ್ದಾರ್ ಶಿವಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT