ಮಳವಳ್ಳಿ: ‘ಗ್ರಾಮೀಣ ಪ್ರದೇಶದ ರೈತರು ಮಣ್ಣಿನ ಮಹತ್ವದ ಅರಿತು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಗಮನಿಸಬೇಕು’ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಕುಳ್ಳಚನ್ನಂಕಯ್ಯ ಕರೆ ನೀಡಿದರು.
ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯ ಹಾಗೂ ಮಂಡ್ಯದ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ(ಹಾನರ್ಸ್) 16 ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ತಾಲ್ಲೂಕಿನ ಕಂದೇಗಾಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಹಳ್ಳಿಗಾಡಿನ ಪ್ರದೇಶದಲ್ಲಿ ಸಮಗ್ರ ಕೃಷಿ, ಸುಧಾರಿತ ತಳಿಗಳು ಮತ್ತು ಬಿತ್ತನೆ ಬೀಜಗಳು ಸಂಗ್ರಹಣೆ ಸೇರಿದಂತೆ ಅನೇಕ ರೀತಿಯ ಚಟುವಟಿಕೆಗಳು ನಿಮಗೆ ಒಳ್ಳೆಯ ಅನುಭವ ಕೊಡಲಿವೆ’ ಎಂದು ಹೇಳಿದರು.
ಮಣ್ಣು ಪರೀಕ್ಷೆ ಮಹತ್ವ, ವಿವಿಧ ಬೆಳೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಗುಂಪು ಚರ್ಚೆ, ಬೆಳೆಗಳ ಸಂಗ್ರಹಣೆಯ ಅರಿವು, ರೋಗ ಮತ್ತು ಕೀಟಬಾಧೆಗೆ ಪರಿಹಾರದ ಕ್ರಮ, ನಾನಾ ಬೆಳೆಗಳ ಕೃಷಿ ವಿಧಾನ, ನೀರಿನ ಸಂರಕ್ಷಣೆ ಮತ್ತು ಸಮರ್ಪಕ ಬಳಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ರೈತರೊಂದಿಗೆ ವಿದ್ಯಾರ್ಥಿಗಳು ವಿಚಾರ ವಿನಿಮಯ ಮಾಡಿಕೊಂಡರು.
‘16 ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಗ್ರಾಮದ ರೈತರ ಮನೆಯಲ್ಲೇ ವಿದ್ಯಾರ್ಥಿಗಳು ವಾಸ್ತವ್ಯವಿದ್ದು, ಕೃಷಿಯ ಅನುಭವ ಪಡೆದುಕೊಳ್ಳಲಿದ್ದಾರೆ. ಇಲ್ಲಿನ ರೈತರ ಕೃಷಿ ಚಟುವಟಿಕಗಳು ಹೊಸ ಅನುಭವ ನೀಡಲಿವೆ’ ಎಂದು ಶಿಬಿರದ ಸಂಯೋಜಕ ಶಿವಕುಮಾರ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಜಿ.ಪಿ.ಪ್ರದೀಪ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಮರಿಸ್ವಾಮಿ, ರಾಧಾ ಕುಮಾರ್, ಮುಖಂಡರಾದ ನಾಗರಾಜು, ಶ್ರೀನಿವಾಸ್, ಪಾಪಣ್ಣ, ಮಾದೇಗೌಡ, ಕುಮಾರ್, ರಘು, ನಾಗರಾಜು, ಮರಿಗೌಡ, ಶೋಭಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.