ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

Published 9 ಜುಲೈ 2024, 13:51 IST
Last Updated 9 ಜುಲೈ 2024, 13:51 IST
ಅಕ್ಷರ ಗಾತ್ರ

ಮೇಲುಕೋಟೆ (ಮಂಡ್ಯ ಜಿಲ್ಲೆ): ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಕ್ರೀಡೆ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ಅರೆನಗ್ನ ಚಿತ್ರಗಳನ್ನು ತೆಗೆದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿ ಯೋಗೇಶ್‌ನನ್ನು ಮೇಲುಕೋಟೆ ಪೊಲೀಸರು ಬಂಧಿಸಿದ್ದಾರೆ.

ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಯಾದ ಈತ ಸ್ವಯಂಸೇವಕನಾಗಿ ಅದೇ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಚಿತ್ರಕಲೆಗಳನ್ನು ಹೇಳಿಕೊಡುತ್ತಿದ್ದ. ವಿದ್ಯಾರ್ಥಿನಿಯರಿಗೆ ಬೆದರಿಕೆಯೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆರೋಪಿಯ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕಿರುಕುಳದ ಬಗ್ಗೆ ಎಳೆ ಎಳೆಯಾಗಿ ವಿವರಿಸಿ ಪತ್ರ ಬರೆದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಎಸ್.ಎಂ. ಶೈಲಜಾ ಅವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದೂರಿನ ಸಾರಾಂಶ:

‘ನಮಗೆ ಕ್ರೀಡೆಯಲ್ಲಿ ಆಸಕ್ತಿ ಇರುವ ಕಾರಣ ಆರೋಪಿಯನ್ನು ಅಣ್ಣನೆಂದು ಭಾವಿಸಿ ಕಲಿಯುತ್ತಿದ್ದೆವು. ಆದರೆ ಆತ ನಮಗೆ ಮೋಸ ಮಾಡಿದ. ಕ್ರೀಡಾ ಕೊಠಡಿಯಲ್ಲಿ ರಾತ್ರಿಯವರೆಗೂ ಇರುತ್ತಿದ್ದ. ನಾವು ಬಟ್ಟೆ ಬದಲಾಯಿಸುವ ಸಂದರ್ಭ ನಮ್ಮ ಅರೆನಗ್ನ ಫೋಟೋಗಳನ್ನು ಕ್ಲಿಕ್ಕಿಸಿ ಅದನ್ನೇ ಮುಂದಿಟ್ಟುಕೊಂಡು ಬೆದರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದಕ್ಕೆ ಒಪ್ಪದಿದ್ದರೆ ನಮ್ಮ ಪಾಲಕರ ವ್ಯಾಟ್ಸ್ ಆ್ಯಪ್‌ ಗ್ರೂಪ್‌ಗಳಿಗೆ ಫೋಟೋಗಳನ್ನು ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದ. ಇದರಿಂದ ನಾವು ಮಾನಸಿಕವಾಗಿ ಅನುಭವಿಸಿದ ನೋವು ಹೇಳತೀರದು. ಕೆಲವೊಮ್ಮೆ ಆತ್ಮಹತ್ಯೆ ನಿರ್ಧಾರಕ್ಕೂ ಯೋಚಿಸಿದ್ದೇವೆ’ ಎಂದು ನೊಂದ ನಾಲ್ವರು ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಫೌಂಡೇಷನ್ ಒಂದರ ಹೆಸರಿನಲ್ಲಿ ಚಿತ್ರಕಲೆ ಕಲಿಸುತ್ತಿದ್ದ ಆರೋಪಿ ರಾತ್ರಿ ವೇಳೆ ಚಿತ್ರಕಲೆ ಕಲಿಯಲು ಹೋದಾಗ ನಮ್ಮೆಲ್ಲರ ಜತೆ ಕೆಟ್ಟದಾಗಿ ವರ್ತಿಸುತ್ತಿದ್ದ’ ಎಂದು ದೂರಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

‘ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಯಾವ ಆಧಾರದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕನಾಗಿ ನೇಮಕ ಮಾಡಿದ್ದರು. ರಾತ್ರಿ ವೇಳೆ ಅವರು ಅಲ್ಲೇ ವಾಸ್ತವ್ಯ ಹೂಡಿದರೂ ಯಾಕೆ ಕ್ರಮ ಕೈಗೊಂಡಿದಲ್ಲ. ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದ ಕಾರಣ ಈ ಘಟನೆಗಳು ನಡೆದಿವೆ. ಶಾಲೆ ಶಿಕ್ಷಕರನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT