ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀರಂಗಪಟ್ಟಣದಲ್ಲಿ ನೆಂಟರ ದಸರಾ’: ರವೀಂದ್ರ ಶ್ರೀಕಂಠಯ್ಯ ಆಕ್ರೋಶ

Last Updated 30 ಸೆಪ್ಟೆಂಬರ್ 2019, 13:04 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಈ ಬಾರಿ ಶ್ರೀರಂಗಪಟ್ಟಣಕ್ಕೆ ಹೊರಗಿನಿಂದ ನೆಂಟರು ಬಂದು ದಸರಾ ಆಚರಿಸುತ್ತಿದ್ದಾರೆ’ ಎಂದು ರವೀಂದ್ರ ಶ್ರೀಕಂಠಯ್ಯ ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ತಮ್ಮ ಕುಟೀರದಲ್ಲಿ ಸೋಮವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿ, ‘ಸ್ಥಳೀಯ ಜನಪ್ರತಿನಿಧಿಗಳನ್ನು ಹೊರಗೆ ಇಟ್ಟು ದಸರಾ ಆಚರಿಸಲಾಗುತ್ತಿದೆ. ದಸರಾ ಏನು ನಡೆಯುತ್ತಿದೆ ಎಂಬ ವಿಷಯ ಶಾಸಕನಾದ ನನಗೆ ಗೊತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೂ ಗೊತ್ತಿಲ್ಲ. ಬಿಜೆಪಿಯವರ ಹಿತಕ್ಕಾಗಿ, ಅವರನ್ನು ಖುಷಿಪಡಿಸಲು, ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ದಸರಾ ಆಚರಿಸಲಾಗುತ್ತಿದೆ. ಶ್ರೀರಂಗಪಟ್ಟಣ ಕ್ಷೇತ್ರದ ಜನರು ಮಾಡಬೇಕಾದ ದಸರಾ ಇನ್ಯಾರೋ ಮಾಡುತ್ತಿದ್ದಾರೆ. ಅತಿಥಿಗಳಾಗಿ ಇರಬೇಕಾದವರೇ ಇಲ್ಲಿ ದಸರಾ ಆಚರಿಸಲು ಬಂದಿದ್ದು, ನಮ್ಮನ್ನು ಸುಮ್ಮನೆ ಕೂರುವಂತೆ ಮಾಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನನಗೆ ಅರಿವಿಲ್ಲದೇ, ದಸರಾ ಆಚರಿಸಲಾಗುತ್ತಿದೆ. ಕಾನೂನಾತ್ಮಕವಾಗಿ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದ್ದೇವೆ ಎಂದು ಹೇಳಲಾಗುತ್ತಿದೆ. ಹಾಗೆಂದರೆ ಏನು ಎಂಬುದು ಅರ್ಥವಾಗುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳನ್ನು ಹೊರಗಿಟ್ಟು ಸರ್ಕಾರಿ ದಸರಾ ಆಗುತ್ತಿರುವುದು ದುರದೃಷ್ಟಕರ. ಜನ ಪ್ರತಿನಿಧಿಗಳ ಸಭೆ ನಡೆಸಿದ ಬಳಿಕ ದಸರಾದಲ್ಲಿ ಭಾಗವಹಿಸಬೇಕೋ ಬೇಡವೋ ಎಂದು ತೀರ್ಮಾನಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

‘ಶಾಸಕ ಸಿ.ಎಸ್‌. ಪುಟ್ಟರಾಜು ಅವರು ಭಾನುವಾರ ಕೆಆರ್‌ಎಸ್‌ ಹಿನ್ನೀರಿನಲ್ಲಿ, ದಸರಾ ನಿಮಿತ್ತ ನಡೆದ ಹೆಲಿಕಾಪ್ಟರ್‌ ಜಾಲಿ ರೈಡ್‌ನಲ್ಲಿ ಪಾಲ್ಗೊಂಡಿರುವುದನ್ನು ಗಮನಿಸಿದ್ದೇನೆ. ಈಗ ನಡೆಯುತ್ತಿರುವುದು ಶ್ರೀರಂಗಪಟ್ಟಣ ದಸರಾ. ಅದರಲ್ಲಿ ಪುಟ್ಟರಾಜು ಅವರು ಭಾಗವಹಿಸಿರುವುದು ಗಮನಿಸಲೇಬೇಕಾದ ವಿಚಾರ, ಗಮನಿಸುತ್ತೇನೆ.. ನನ್ನ ಕೆಲಸದ ಶೈಲಿ ಕೆಲವರಿಗೆ ಇಷ್ಟ ಆಗದೇ ಇರಬಹುದು. ಹಾಗಂತ ನಾನು ರಾಜಿ ಮಾಡಿಕೊಳ್ಳುವುದಿಲ್ಲ’ ಎಂದೂ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸವಿತಾ ಲೋಕೇಶ್‌, ಮಾಜಿ ಸದಸ್ಯ ಎ.ಆರ್‌. ಮರೀಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸರಸ್ವತಿ, ಉಮೇಶ್‌, ರಾಮಕೃಷ್ಣ, ಟಿ.ಎಂ. ದೇವೇಗೌಡ, ಭವ್ಯಾ ಹರ್ಷವರ್ಧನ, ಪುರಸಭೆ ಸದಸ್ಯರಾದ ಕೃಷ್ಣಪ್ಪ, ಎಸ್‌. ಪ್ರಕಾಶ್‌, ಜಿ.ಎಸ್‌. ನರಸಿಂಹೇಗೌಡ, ನಿಂಗಪ್ಪ, ಗಂಜಾಂ ಶಿವು, ಶ್ರೀನಿವಾಸ್‌, ಎಸ್‌.ಟಿ. ರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT