ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ನಿಖಿಲ್‌ ಕುಮಾರಸ್ವಾಮಿ

4ನೇ ದಿನದ ಪಾದಯಾತ್ರೆಯಲ್ಲಿ ಮೈತ್ರಿ ಪಕ್ಷಗಳಿಂದ ಶಕ್ತಿ ಪ್ರದರ್ಶನ
Published 6 ಆಗಸ್ಟ್ 2024, 13:17 IST
Last Updated 6 ಆಗಸ್ಟ್ 2024, 13:17 IST
ಅಕ್ಷರ ಗಾತ್ರ

ಮದ್ದೂರು: ‘ವಾಲ್ಮೀಕಿ ನಿಗಮದಲ್ಲಿ ₹89 ಕೋಟಿ ಹಗರಣವಾಗಿರುವುದು ನಿಜ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಅವರಿಗೆ ನೈತಿಕತೆ ಇದ್ದರೆ, ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಒತ್ತಾಯಿಸಿದರು.

ಮದ್ದೂರು ತಾಲ್ಲೂಕು ಸೋಮನಹಳ್ಳಿಯಲ್ಲಿ ‘ಮೈಸೂರು ಚಲೋ’ 4ನೇ ದಿನದ ಪಾದಯಾತ್ರೆ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಹಗರಣಗಳು ಹಾಗೂ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಸಂಗತಿಗಳನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

‘ಮೈಸೂರು ಮುಡಾದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ನಿಯ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ. ‘ಅಹಿಂದ’ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರ ಪಕ್ಷಕ್ಕೆ ಜನರು 136 ಸ್ಥಾನಗಳನ್ನು ಕೊಟ್ಟಿದ್ದಾರೆ. ಈ ಹಗರಣಗಳಿಂದಾಗಿ ಈಗ ಜನರೇ ಛೀಮಾರಿ ಹಾಕುತ್ತಿದ್ದಾರೆ’ ಎಂದು ಹೇಳಿದರು. 

ತಮಿಳುನಾಡು ತಗಾದೆ ನಿಲ್ಲಿಸಲಿ:

ನಂತರ ಮದ್ದೂರು ಪಟ್ಟಣದಲ್ಲಿ ನಡೆದ ಸಭೆಯಲ್ಲಿ ನಿಖಿಲ್‌ ಮಾತನಾಡಿ, ‘ರಾಜ್ಯ ಸರ್ಕಾರವು ನೆರೆಯ ತಮಿಳುನಾಡು ಸರ್ಕಾರಕ್ಕೆ ಮೇಕೆದಾಟು ಯೋಜನೆ ಬಗ್ಗೆ ಯಾವುದೇ ತಗಾದೆ ತೆಗೆಯದಂತೆ ಪತ್ರ ಬರೆದು ಒಪ್ಪಿಗೆ ಪಡೆದರೆ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರೇ ಮುಂದೆ ಬಂದು 15 ದಿನಗಳಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುತ್ತಾರೆ’ ಎಂದರು.

ಖಜಾನೆ ಲೂಟಿ– ಕಪ್ಪುಚುಕ್ಕೆ:

‘ದೇಶದ ಇತಿಹಾಸದಲ್ಲೇ ಸರ್ಕಾರವೊಂದು ಖಜಾನೆಯನ್ನೂ ಲೂಟಿ ಮಾಡಿ, ಅದನ್ನು ಚುನಾವಣೆಗೆ ಬಳಸಿಕೊಂಡ ಉದಾಹರಣೆಯಿಲ್ಲ. ದೇಶದ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದೊಂದು ಕಪ್ಪು ಚುಕ್ಕೆ. ಮುಂದಿನ ಶತಮಾನದವರೆಗೂ ಈ ಕಳಂಕ ಕಾಂಗ್ರೆಸ್‌ ಸರ್ಕಾರಕ್ಕೆ ಅಂಟಿಕೊಂಡಿರುತ್ತದೆ’ ಎಂದು ಮಾಜಿ ಶಾಸಕ ಪಿ.ರಾಜೀವ್ ದೂರಿದರು. 

ಯತ್ನಾಳ ಹಾಸ್ಯ ಕಲಾವಿದ:

ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗಳ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ, ‘ಎಲ್ಲ ಕಡೆ ಪಾತ್ರಧಾರಿಗಳು, ಹಾಸ್ಯ ಕಲಾವಿದರು ಇರುತ್ತಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು. ಅವರನ್ನೆಲ್ಲಾ ಗಂಭೀರವಾಗಿ ಪರಿಗಣಿಸಬಾರದು’ ಎಂದು ವ್ಯಂಗ್ಯವಾಡಿದರು. 

ಮಂಡ್ಯ ಜಿಲ್ಲೆಯ ಗಡಿಭಾಗವಾದ ನಿಡಘಟ್ಟ ಗೇಟ್‌ನಿಂದ ಮದ್ದೂರು ಪಟ್ಟಣದವರೆಗೆ ಬೆಂಗಳೂರು-ಮೈಸೂರು ಹೆದ್ದಾರಿಯ ಹಳೆಯ ರಸ್ತೆಯಲ್ಲಿ ಮೈತ್ರಿ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಹೆಜ್ಜೆ ಹಾಕಿದರು. ಇದು ಉಭಯ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT