ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರ್ಥ ಚಿತ್ರಮಂದಿರ ಇನ್ನು ನೆನಪು ಮಾತ್ರ!

ನೆಲಸಮಗೊಳ್ಳುತ್ತಿದೆ ಮಂಡ್ಯ ಜನರಿಗೆ ರಂಜನೆ ನೀಡಿದ್ದ ಟಾಕೀಸ್‌, ತಲೆ ಎತ್ತಲಿದೆ ವಾಣಿಜ್ಯ ಸಂಕೀರ್ಣ
Last Updated 21 ಏಪ್ರಿಲ್ 2021, 13:53 IST
ಅಕ್ಷರ ಗಾತ್ರ

ಮಂಡ್ಯ: ಮೂರು ದಶಕಕ್ಕೂ ಹೆಚ್ಚು ಕಾಲ ಜನರನ್ನು ರಂಜಿಸಿದ್ದ ನಗರದ ಸಿದ್ಧಾರ್ಥ ಚಿತ್ರಮಂದಿರ ನೆನಪಿನಂಗಳಕ್ಕೆ ಸರಿಯುತ್ತಿದೆ. ಪ್ರೇಕ್ಷಕರ ಕೊರತೆಯಿಂದಾಗಿ ಚಿತ್ರಮಂದಿರ ನೆಲಸಮಗೊಳ್ಳುತ್ತಿದ್ದು ಅಲ್ಲಿ ವಾಣಿಜ್ಯ ಸಂಕೀರ್ಣ ತಲೆ ಎತ್ತಲಿದೆ.

1987ರಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರಮಂದಿರವನ್ನು ರೆಬಲ್‌ ಸ್ಟಾರ್‌ ಅಂಬರೀಷ್ ಉದ್ಘಾಟನೆ ಮಾಡಿದ್ದರು. ಉದ್ಘಾಟನೆ ದಿನವೇ ಡಾ.ರಾಜ್‍ಕುಮಾರ್ ಅಭಿನಯದ ಭಕ್ತಿ ಪ್ರಧಾನ ‘ಶ್ರೀನಿವಾಸ ಕಲ್ಯಾಣ’ ಚಿತ್ರ ಮೊದಲ ಪ್ರದರ್ಶನ ಕಂಡಿತ್ತು. ಇತ್ತೀಚೆಗೆ ಬಿಡುಗಡೆಗೊಂಡ ದರ್ಶನ್ ಅಭಿನಯದ ‘ರಾಬರ್ಟ್’ ಕಡೆಯ ಚಿತ್ರ.

ಮಂಡ್ಯ ನಗರ, ಗ್ರಾಮಾಂತರ ಪ್ರದೇಶದ ಸಿನಿ ರಸಿಕರಿಗೆ ಹಲವಾರು ದೊಡ್ಡ ಹಾಗೂ ಹೊಸ ನಟರ ಚಿತ್ರಗಳ ರಸದೌತಣ ನೀಡಿದ್ದ ಸಿದ್ಧಾರ್ಥ ಚಿತ್ರಮಂದಿರ ಪ್ರೇಕ್ಷಕರ ಕೊರತೆಯಿಂದ ಮುಚ್ಚುತ್ತಿದೆ. ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದ್ದು ಈ ಚಿತ್ರಮಂದರ ಜನಮಾನಸದಲ್ಲಿ ನೆಲೆಸಿತ್ತು. ಚಿತ್ರಮಂದಿರ ಇದ್ದ ಜಾಗ ‘ಸಿದ್ಧಾರ್ಥ ಸರ್ಕಲ್‌’ ಎಂದೇ ಪ್ರಸಿದ್ಧಿ ಪಡೆದಿತ್ತು. ಪ್ರೇಕ್ಷಕರ ಕೊರತೆಯಿಂದ ನಷ್ಟದಲ್ಲಿರುವ ಚಿತ್ರಮಂದಿರ ಮಣ್ಣಾಗುತ್ತಿದ್ದು ಆ ಜಾಗ ಮಾಲ್‌ ರೂಪ ಪಡೆಯಲು ಸಜ್ಜಾಗುತ್ತಿದೆ. ನಾಲ್ಕೈದು ದಿನಗಳಿಂದ ನೆಲಸಮ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಮಂಡ್ಯ ಎಂದರೆ ಇಂಡಿಯಾವೇ ತಿರುಗಿ ನೋಡುತ್ತದೆ. ಇಲ್ಲಿ ಚಿತ್ರ ಚೆನ್ನಾಗಿ ಓಡಿದರೆ ಕರ್ನಾಟಕದಲ್ಲೇ ಯಶಸ್ಸುಗಳಿಸುತ್ತದೆ ಎಂಬ ಮಾತು ಸ್ಯಾಂಡಲ್‌ವುಡ್‌ನಲ್ಲಿದೆ. ಅಂತೆಯೇ ನಗರದಲ್ಲಿ 6ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದವು. ಈಗಾಗಲೇ ಗಿರಿಜಾ ಚಿತ್ರಮಂದಿರ ಮುಚ್ಚಿದ್ದು, ನಂದಾ, ಮಹಾವೀರ, ಸಂಜಯ, ಗುರುಶ್ರೀ, ಸಿದ್ದಾರ್ಥ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಡೆಯುತ್ತಿದೆ.

ಮಹಾನಗರಗಳಲ್ಲಿ ಚಿತ್ರ ಬಿಡುಗಡೆಯಾಗದಿದ್ದರೂ ಮಂಡ್ಯದಲ್ಲಿ ಚಲನಚಿತ್ರ ಬಿಡುಗಡೆ ಮಾಡಲೇಬೇಕು ಎಂದು ಕಾತರದಿಂದ ಚಿತ್ರಮಂದಿರ ಸಿಗುವುದನ್ನೇ ಚಿತ್ರತಂಡದ ಸದಸ್ಯರು ಕಾಯುತ್ತಿದ್ದರು. ಆದರೆ ಕಾಲ ಬದಲಾದಂತೆ ಪ್ರೇಕ್ಷಕನೇ ಚಿತ್ರಮಂದಿರದತ್ತ ಬರಲು ಹಿಂದೇಟು ಹಾಕುತ್ತಿದ್ದು, ಆರ್ಥಿಕ ಸಂಕಷ್ಟ ಕಾಡುತ್ತಿದೆ. ಹೀಗಾಗಿ ಚಿತ್ರಮಂದಿರ ಮಾಲೀಕರು ಪರ್ಯಾಯ ಯೋಚನೆಯತ್ತ ವಾಲುತ್ತಿದ್ದಾರೆ.

‘ಸಿದ್ದಾರ್ಥ ಚಿತ್ರಮಂದಿರ ಚಿಕ್ಕದಾಗಿರುವುದರಿಂದ ದೊಡ್ಡ ಬಜೆಟ್‍ನ ಸ್ಟಾರ್ ನಟರ ಸಿನಿಮಾಗಳನ್ನು ಕೊಡಲು ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಹಿಂದೆ ಒಂದು ಸಿನಿಮಾ ನೂರು ದಿನ, 25 ವಾರ, ಒಂದು ವರ್ಷದವರೆಗೂ ಪ್ರದರ್ಶನ ಕಾಣುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಕಳೆದ ವರ್ಷದಿಂದ ಕೊರೊನಾದಿಂದ ಪ್ರೇಕ್ಷಕರ ಕೊರತೆ ಹೆಚ್ಚಾಗಿದೆ. ಹೀಗಾಗಿ ಮುಚ್ಚುವುದು ಅನಿವಾರ್ಯವಾಗಿದೆ’ ಎಂದು ಮಾಲೀಕ ಮಹೇಶ್‌ ಹೇಳುತ್ತಾರೆ.

ಸ್ಟಾರ್ ನಟನ ಚಿತ್ರ ಬಿಡುಗಡೆಯಾದರೆ ನೂರು ದಿನ ಪ್ರದರ್ಶನ ಕಾಣುತ್ತಿತ್ತು. ಆದರೆ ಇಂದು ಬಿಡುಗಡೆಯಾದ ಎರಡೇ ವಾರಕ್ಕೆ ಟಿವಿ, ಒಟಿಟಿ, ಅಮೆಜಾನ್‍ ವೇದಿಕೆಯಲ್ಲಿ ಪ್ರದರ್ಶನ ಕಾಣುತ್ತಿರುವ ಕಾರಣ ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ. ಪ್ರತಿದಿನ 5 ರಿಂದ 10 ಮಂದಿ ಪೇಕ್ಷಕರಿರುತ್ತಾರೆ. ಇದರಿಂದ ಚಿತ್ರಮಂದಿರಗಳು ಖಾಲಿಯಾಗಿರುತ್ತವೆ. ಆರ್ಥಿಕ ಸಂಕಷ್ಟ ಸರಿದೂಗಿಸಲು ಕಷ್ಟವಾಗುತ್ತಿದೆ ಎಂದು ಚಿತ್ರಮಂದಿರಗಳು ಮಾಲೀಕರು ಹೇಳುತ್ತಾರೆ.

ನಟರಾದ ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್, ಶಿವರಾಜ್‌ಕುಮಾರ್, ಪುನೀತ್‌ ರಾಜ್‌ಕುಮಾರ್‌, ಸುದೀಪ್, ದರ್ಶನ್, ಯಶ್ ಮುಂತಾದ ನಾಯಕ ನಟರ ಚಿತ್ರಗಳು ಶತ ದಿನೋತ್ಸವ ಕಂಡು ದಾಖಲೆ ನಿರ್ಮಿಸಿತ್ತು ಸಿದ್ಧಾರ್ಥ ಚಿತ್ರಮಂದಿರ ಎಂಬುದು ಈಗ ನೆನಪಾಗಿ ಉಳಿಯಲಿದೆ.

100 ದಿನ ಓಡಿದ ಚಿತ್ರಗಳಿವು...

ಶ್ರೀನಿವಾಸ ಕಲ್ಯಾಣ, ಇಂದ್ರಜಿತ್, ಒಡಹುಟ್ಟಿದವರು, ಆನಂದ್, ಸುಪ್ರಭಾತ, ರಾಮಾಚಾರಿ, ನಾಗರಹಾವು, ಯಜಮಾನ, ಕೋಟಿಗೊಬ್ಬ, ಗಜ, ಮೈ ಆಟೋಗ್ರಾಫ್, ಮೌರ್ಯ, ರಾಜಾಹುಲಿ, ಕಿರಾತಕ ಮುಂತಾದ ಚಿತ್ರಗಳು ಶತದಿನೋತ್ಸವ ಆಚರಿಸಿವೆ. ತಮಿಳಿನ ರಜನಿಕಾಂತ್ ನಟನೆಯ ಪಡಿಯಪ್ಪ 5 ವಾರ ಪ್ರದರ್ಶನ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT