ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ, ಚಾಮರಾಜನಗರ: ಹಾಸ್ಟೆಲ್‌ ಸೀಟುಗಳಿವೆ, ಭರ್ತಿಯಾಗುತ್ತಿಲ್ಲ!

Published 24 ನವೆಂಬರ್ 2023, 13:19 IST
Last Updated 24 ನವೆಂಬರ್ 2023, 13:19 IST
ಅಕ್ಷರ ಗಾತ್ರ

ಮೈಸೂರು: ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳಲ್ಲಿ ಸೀಟುಗಳು ಭರ್ತಿಯಾಗದೇ ಇರುವುದಕ್ಕೆ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತೀವ್ರ ಅಚ್ಚರಿ ಹಾಗೂ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಕಿ- ಅಂಶ ಗಮನಿಸಿದ ಅವರು, ‘ನಾವು ಎಲ್ಲರಿಗೂ ಹಾಸ್ಟೆಲ್‌ ಎಂಬ ಧ್ಯೇಯವಾಕ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಬಹುತೇಕ ಜಿಲ್ಲೆಗಳಲ್ಲಿ ಮಂಜೂರಾದ ಸೀಟುಗಳಿಗಿಂತಲೂ ಹೆಚ್ಚು ಅರ್ಜಿಗಳು ಬರುತ್ತಿವೆ. ಹೆಚ್ಚುವರಿ ಕೊಠಡಿಗಳು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಮಂಡ್ಯ ಹಾಗೂ ಚಾಮರಾಜನಗರದಲ್ಲಿ ಖಾಲಿ ಸೀಟುಗಳು ಉಳಿದಿರುವುದೇಕೆ?’ ಎಂದು ಕೇಳಿದರು.

‘ಚಾಮರಾಜನಗರದಲ್ಲಿ ಪರಿಶಿಷ್ಟ ಜಾತಿಯವರು ಜಾಸ್ತಿ ಇದ್ದಾರೆ. ಆದರೂ ಪ್ರವೇಶವಾಗಿಲ್ಲವೇಕೆ? 2,315 ಮಂಜೂರಾಗಿದ್ದು 1,803 ಮಕ್ಕಳಷ್ಟೆ ಪ್ರವೇಶ ಪಡೆದಿದ್ದಾರೆ. ಅನುದಾನ ನೀಡಿದ್ದರೂ ಬಳಕೆಯಾಗುತ್ತಿಲ್ಲವೇಕೆ’ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಚಾಮರಾಜನಗರ ಜಿಲ್ಲಾ ಉಪ ನಿರ್ದೇಶಕ ಮಲ್ಲಿಕಾರ್ಜುನ್, ‘ಹೋದ ವರ್ಷಕ್ಕೆ ಹೋಲಿಸಿದರೆ ಪ್ರವೇಶಾತಿ ಪ್ರಮಾಣ ವೃದ್ಧಿಸಿದೆ. ನಮ್ಮಲ್ಲಿ ವಸತಿ ಶಾಲೆಗಳಿಗೆ ಬಹಳ ಬೇಡಿಕೆ ಇದೆ. ಆದ್ದರಿಂದ ನಮ್ಮ ಹಾಸ್ಟೆಲ್‌ಗೆ ಬೇಡಿಕೆ ಕಡಿಮೆ ಇದೆ’ ಎಂದು ತಿಳಿಸಿದರು.

ವಿಶೇಷ ಅಭಿಯಾನ ನಡೆಸಿ: ‘ಅಲ್ಲಿ ಹೆಚ್ಚಿನ ಶ್ರಮ ಹಾಕಬೇಕಲ್ಲವೇ, ಅದು ಬಹಳ ಹಿಂದುಳಿದ ಜಿಲ್ಲೆಯಲ್ಲವೇ? ಅಧಿಕಾರಿಗಳು ಮಕ್ಕಳಿಗೆ ಉತ್ತೇಜನ ಕೊಡಬೇಕು. ಆ ಜಿಲ್ಲೆಯೂ ಮುಂದೆ ಬರಬೇಕು. ವಿಶೇಷ ಅಭಿಯಾನ ನಡೆಸಿ, ಸೀಟುಗಳನ್ನು ಭರ್ತಿ ಮಾಡಬೇಕು’ ಎಂದು ಸೂಚಿಸಿದರು.

‘ನಮ್ಮ ಹಾಸ್ಟೆಲ್‌ಗಳ ಮಕ್ಕಳಿಗೆ ಊಟದ ವೆಚ್ಚವಾಗಿ ತಲಾ ₹ 1,650 ವ್ಯಯಿಸಲಾಗುತ್ತಿದೆ. ಜೊತೆಗೆ, ಶುಚಿ ಸಂಭ್ರಮ ಕಿಟ್, ಸಮವಸ್ತ್ರ ಹಾಗೂ ಶೂಗಳನ್ನು ಕೊಡುತ್ತೇವೆ. ಇಷ್ಟೆಲ್ಲ ಉತ್ತಮ ಸೌಲಭ್ಯಗಳಿದ್ದು ಬಳಸಿಕೊಳ್ಳುವಂತೆ ಮಾಡಬೇಕು’ ಎಂದು ಇಲಾಖೆಯ ಆಯುಕ್ತ ರಾಕೇಶ್‌ಕುಮಾರ್‌ ಕೆ. ಸೂಚಿಸಿದರು.

‘ಚಾಮರಾಜನಗರದ ಹಾಸ್ಟೆಲ್‌ಗಳಲ್ಲಿನ ಮಕ್ಕಳ ಕಲಿಕಾ ಮಟ್ಟ ಕಡಿಮೆ ಇದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವರದಿ ನೀಡಿದ್ದಾರೆ. ಈ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.

‘ಕಲಿಕಾ ಮಟ್ಟ ಗುರುತಿಸಿ, ಹಿಂದುಳಿದವರಿಗೆ ಹೆಚ್ಚುವರಿ ತರಗತಿಗಳನ್ನು ನಡೆಸಬೇಕು. ವಿಶೇಷವಾಗಿ ಪಿಯುಸಿಯಲ್ಲಿ ಈ ಕ್ರಮ ಕೈಗೊಳ್ಳಬೇಕು. ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ರಾಕೇಶ್ ಕುಮಾರ್ ಕೋರಿದರು.

‘ಹಾಸ್ಟೆಲ್‌ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಕೊಡುತ್ತಿದ್ದೇವೆ. ಸಿಎಫ್‌ಟಿಆರ್‌ಐನಿಂದಲೂ ವರದಿ ಪಡೆದಿದ್ದೇವೆ’ ಎಂದರು.

‘ಕೆಲವು ಕಡೆ ಉತ್ತಮ ಆಹಾರ ಕೊಡುತ್ತಾರೆ. ಕೆಲವೆಡೆ ಕೊಡುವುದಿಲ್ಲ. ನಾನು ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನೀಡಲಾಗುವ ಅನುದಾನ ಏಕರೂಪದ್ದಾಗಿದೆ. ಆದರೆ, ಎಲ್ಲ ಕಡೆಯೂ ಗುಣಮಟ್ಟದ ಆಹಾರ ಕೊಡುತ್ತಿಲ್ಲವೇಕೆ? ಜಿಲ್ಲಾ ಮಟ್ಟದ ಅಧಿಕಾರಿಗಳು ವಿಚಕ್ಷಣೆ ವಹಿಸಬೇಕು’ ಎಂದು ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಸೂಚಿಸಿದರು.

ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಹಾಸನ ಹಾಗೂ ಮಂಡ್ಯದಲ್ಲಿ ಜಾಸ್ತಿ ಇರುವುದಕ್ಕೆ, ಹಾಸನದಲ್ಲಿ ಶಿಕ್ಷೆಯ ಪ್ರಮಾಣ ಶೂನ್ಯ ಇರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

‘ಅಂತರ್ಜಾತಿ ವಿವಾಹವಾದ ಪ್ರಕರಣದಲ್ಲಿ ಮೂವರು ಮಹಿಳೆಯರನ್ನು ಗಂಡಂದಿರೇ ಕೊಲೆ ಮಾಡಿರುವುದು ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಆದ್ದರಿಂದ ಆ ಪ್ರಕರಣದಲ್ಲಿ ಪರಿಹಾರ ನೀಡಲಾಗಿಲ್ಲ. ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹದ 154 ಪ್ರಕರಣಗಳಲ್ಲಿ ಪ್ರೋತ್ಸಾಹಧನ ಬಿಡುಗಡೆ ಬಾಕಿ ಇದೆ’ ಎಂದು ಜಂಟಿ ನಿರ್ದೇಶಕ ಬಿ. ರಂಗೇಗೌಡ ತಿಳಿಸಿದರು.

‘ಈ ರೀತಿಯ ಕೊಲೆಗಳು ಏಕೆ ಆಗುತ್ತಿವೆ. ಸಾಮಾಜಿಕ ಕಾರಣವೇನಾದರೂ ಇದೆಯೇ ಎಂಬುದನ್ನು ವಿಶ್ಲೇಷಿಸಬೇಕು’ ಎಂದು ಸಲಹೆಗಾರ ಇ.ವೆಂಕಟಯ್ಯ ಸೂಚಿಸಿದರು.

ಮೈಸೂರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳು ಜಾಸ್ತಿಯಾಗಿರುವ ಅಂಶವೂ ಪ್ರಸ್ತಾಪವಾಯಿತು. ‘ಪರಿವಾರ, ನಾಯಕ ಸಮಸ್ಯೆ ಬಗೆಹರಿದರೆ ಶೇ 90ರಷ್ಟು ಪ್ರಕರಣ ವಿಲೇವಾರಿ ಆಗಲಿವೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT