ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಶ್ರೀರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ, ಸೂರ್ಯಮಂಡಲೋತ್ಸವ

Last Updated 29 ಜನವರಿ 2023, 6:34 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಶ್ರೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.

ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ, ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ, ಕಾರ್ಯನಿರ್ವಾಹಕ ಅಧಿಕಾರಿ ತಮ್ಮೇಗೌಡ, ಜ್ಯೋತಿಷಿ ಡಾ.ಭಾನುಪ್ರಕಾಶ್‌ ಶರ್ಮಾ ಜತೆಗೂಡಿ ಮಧ್ಯಾಹ್ನ 3.10 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು.

ಸರ್ವಾಲಂಕೃತ ರಥವನ್ನು ಭಕ್ತರು ದೇವಾಲಯದ ಸುತ್ತ ಭಕ್ತಿ, ಭಾವದಿಂದ ಎಳೆದರು. ರಥವನ್ನು ಎಳೆಯುವಾಗ ವಿವಿಧ ಘೋಷಣೆಗಳು ಮೊಳಗಿದವು. ರಥೋತ್ಸವಕ್ಕೆ ಬಂದಿದ್ದವರು ಸುಮಾರು 50 ಅಡಿ ಎತ್ತರದ ಕಾಷ್ಠ ರಥಕ್ಕೆ ಹಣ್ಣು, ದವನ ಎಸೆದರು.

ರಥೋತ್ಸವ ಎರಡು ತಾಸು ತಡವಾಗಿ ಆರಂಭವಾಯಿತು. ಉರಿ ಬಿಸಿಲಿನಲ್ಲೂ ನೂರಾರು ಭಕ್ತರು ರಥದ ಜತೆ ಹೆಜ್ಜೆ ಹಾಕಿದರು. ಸ್ಥಳೀಯರು ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಹರಕೆ ಹೊತ್ತವರು ದೇವಾಲಯದ ಆಸುಪಾಸಿನಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ಮತ್ತು ಬಗೆ ಬಗೆಯ ಹಣ್ಣುಗಳನ್ನು ವಿತರಿಸುತ್ತಿದ್ದ ದೃಶ್ಯ ಕಂಡುಬಂತು. ವಕೀಲ ಶೇಷಾದ್ರಿ ಶರ್ಮಾ ಕುಟುಂಬ ಸೇರಿದಂತೆ ಹಲವರು ಅನ್ನ ದಾನವನ್ನೂ ಏರ್ಪಡಿಸಿದ್ದರು.

ಸೂರ್ಯ ಮಂಡಲೋತ್ಸವ: ರಥ ಸಪ್ತಮಿ ನಿಮಿತ್ತ ಪಟ್ಟಣದಲ್ಲಿ ಶನಿವಾರ ಮುಂಜಾನೆ ಸೂರ್ಯ ಮಂಡಲೋತ್ಸವ ನಡೆಯಿತು. ಮುಂಜಾನೆ 6 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಿಂದ ಸೂರ್ಯ ಮಂಡಲೋತ್ಸವ ಆರಂಭವಾಯಿತು. ಅಂಚೆ ತಿಪ್ಪಯ್ಯ ಬೀದಿ, ಹಳೇ ಅಂಚೆ ಕಚೇರಿ ಬೀದಿ, ಪೇಟೆ ಬೀದಿ, ಮಿನಿ ವಿಧಾನಸೌಧ ರಸ್ತೆ ಮಾರ್ಗವಾಗಿ ಮಂಗಳ ವಾದ್ಯ ಸಹಿತ ಸೂರ್ಯ ಮಂಡಲೋತ್ಸವ ನಡೆಯಿತು.

ಗಜಲಕ್ಷ್ಮಿ ಉತ್ಸವ ಕೂಡ ಜತೆಯಲ್ಲೇ ಸಾಗಿತು. ಭಕ್ತರು ದಾರಿ ಉದ್ದಕ್ಕೂ ಶ್ರೀರಂಗನಾಥಸ್ವಾಮಿಯ ಸೂರ್ಯ ಮಂಡಲ ಮತ್ತು ಗಜ ಲಕ್ಷ್ಮಿ ಉತ್ಸವಕ್ಕೆ ಪೂಜೆ ಸಲ್ಲಿಸಿದರು. ಈಡುಗಾಯಿ, ಕರ್ಪೂರ ಮತ್ತು ದೂಪ, ದೀಪದ ಸೇವೆಗಳು ನಡೆದವು. ಅಲ್ಲಲ್ಲಿ ಪ್ರಸಾದ ವಿತರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT