ಮಂಡ್ಯ: ಕಲ್ಲು ಗಣಿಗಾರಿಕೆಗೆ ಪರಿಸರ ಅನುಮೋದನಾ ಪತ್ರ ಪಡೆಯದ ಜಿಲ್ಲೆಯ 11 ಗಣಿಗುತ್ತಿಗೆ ಹಾಗೂ ನಿಯಮ ಉಲ್ಲಂಘಿಸಿದ 33 ಕ್ರಷರ್‌ಗಳ ಪರವಾನಗಿ ರದ್ದುಗೊಳಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಹಾಗೂ ಜಿಲ್ಲಾ ಕಲ್ಲುಪುಡಿ ಘಟಕಗಳ ಅನುಮತಿ ಮತ್ತು ನಿಯಂತ್ರಣ ಪ್ರಾಧಿಕಾರ ಸೋಮವಾರ ಆದೇಶ ಹೊರಡಿಸಿವೆ.
ಜುಲೈ 28ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ನಿರ್ಣಯದಂತೆ ಕೇಂದ್ರ ಪರಿಸರ ಅನುಮೋದನಾ ಸಮಿತಿ (ಇಸಿ)ಯ ಪರಿಸರ ಅನುಮೋದನಾ ಪತ್ರ ಹಾಜರುಪಡಿಸದ 11 ಕಲ್ಲು ಗಣಿಗಳ ಗಣಿ ಗುತ್ತಿಗೆಯನ್ನು ಜುಲೈ 31ರಿಂದ ಅನ್ವಯವಾಗುವಂತೆ ರದ್ದು ಮಾಡಲಾಗಿದೆ.
ಕರ್ನಾಟಕ ಕಲ್ಲು ಕ್ರಷರ್ ಕಾಯ್ದೆಯ ‘ಸುರಕ್ಷತಾ ವಲಯ’ ನಿಯಮ ಉಲ್ಲಂಘಿಸಿ ಜಿಲ್ಲಾ ಮುಖ್ಯರಸ್ತೆಯ 100 ಮೀಟರ್ ವ್ಯಾಪ್ತಿಯಲ್ಲಿದ್ದ 7 ಕಲ್ಲು ಕ್ರಷರ್‌ಗಳ ಪರವಾನಗಿಯನ್ನು ಜಿಲ್ಲಾ ಕಲ್ಲುಪುಡಿ ಘಟಕಗಳ ಅನುಮತಿ ಮತ್ತು ನಿಯಂತ್ರಣ ಪ್ರಾಧಿಕಾರ ರದ್ದುಪಡಿಸಿದೆ.
ಜಿಲ್ಲಾ ಕಲ್ಲುಪುಡಿ ಘಟಕಗಳ ಅನುಮತಿ ಮತ್ತು ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರ ಸಹಿ ಪಡೆಯದೇ ಕೇವಲ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸಹಿಯ ಮೂಲಕ ಚಟುವಟಿಕೆ ನಡೆಸುತ್ತಿದ್ದ 22 ಕಲ್ಲು ಕ್ರಷರ್‌ಗಳ ಅನುಮತಿಯನ್ನು ಪ್ರಾಧಿಕಾರದ ಅಧ್ಯಕ್ಷರು ರದ್ದುಪಡಿಸಿದ್ದಾರೆ.
ಜೊತೆಗೆ ಸುರಕ್ಷತಾ ವಲಯ ನಿಯಮ ಉಲ್ಲಂಘಿಸಿದ ಹಾಗೂ ಭೂವಿಜ್ಞಾನಿ ಸಹಿಯ ಮೂಲಕ ವಿತರಣೆ ಮಾಡಲಾಗಿದ್ದ 4 ಕ್ರಷರ್‌ಗಳ ಪರವಾನಗಿಯನ್ನೂ ಪ್ರಾಧಿಕಾರ ರದ್ದುಗೊಳಿಸಿದೆ.
‘ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ತಾಲ್ಲೂಕುಗಳಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ತಡೆಯಲು ಸಂಚಾರ ದಳ ರಚಿಸಲಾಗಿದೆ. ಅಕ್ರಮ ಕಲ್ಲು ಸಾಗಣೆ ತಡೆಯಲು 11 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಈವರೆಗೆ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸಿದ 11 ಗಣಿ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಏಪ್ರಿಲ್‌ನಿಂದ ₹ 34 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪದ್ಮಜಾ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.