ಭಾನುವಾರ, ಮೇ 16, 2021
22 °C

ಕಂದಾಯ ಅದಾಲತ್‌: ವೇದಿಕೆಯಲ್ಲೇ ಸಚಿವ ನಾರಾಯಣಗೌಡ- ಶಾಸಕ ರವೀಂದ್ರ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ಸಂಜೆ ನಡೆದ ಕಂದಾಯ ಅದಾಲತ್‌ ಮತ್ತು ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಸಚಿವ ನಾರಾಯಣಗೌಡ ಅವರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು.

‘ಕಂದಾಯ ಅದಾಲತ್‌ ನಡೆಸದಿದ್ದರೂ ಆಹ್ವಾನ ಪತ್ರಿಕೆಯಲ್ಲಿ ಕಂದಾಯ ಅದಾಲತ್‌ ನಡೆಯುತ್ತಿದೆ ಎಂದು ಏಕೆ ಹಾಕಿಸಿದ್ದೀರಿ? ಎಂದು ರವೀಂದ್ರ ಪ್ರಶ್ನಿಸಿದರು. ನಿಮ್ಮದು ಜನ ವಿರೋಧಿ ಸರ್ಕಾರ. ಕೋವಿಡ್‌ ರೋಗಿಗಳಿಗೆ ವೆಂಟಿಲೇಟರ್‌ ಕೊಟ್ಟಿಲ್ಲ. ರೋಗಿಗಳಿಗೆ ಊಟ ಕೊಟ್ಟವರಿಗೆ ಹಣ ನೀಡಿಲ್ಲ, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ನಿರಂತರವಾಗಿ ಲೂಟಿ ನಡೆಯುತ್ತಿದೆ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿ ಇಡಲು ಆಗಿಲ್ಲ. ನೀವೇನು ಮಾಡುತ್ತಿದ್ದೀರಿ? ಎಂದು ರವೀಂದ್ರ ಶ್ರೀಕಂಠಯ್ಯ ಏರು ದನಿಯಲ್ಲಿ ಪ್ರಶ್ನಿಸಿದರು.

ತಹಶೀಲ್ದಾರ್‌ ಎಂ.ವಿ.ರೂಪಾ ಅವರನ್ನೂ ಶಾಸಕ ರವೀಂದ್ರ ಶ್ರೀಕಂಠಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು. ‘ನೀವು ನಡೆದಿದ್ದೇ ದಾರಿಯಾಗಿದೆ. ಸೋಮವಾರ ಸಭೆ ಕರೆದಿದ್ದು, ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ಈ ತಾಲ್ಲೂಕಿನಲ್ಲಿ ನೀನು ಹೇಗೆ ಕೆಲಸ ಮಾಡುತ್ತೀಯೋ ನೋಡುತ್ತೇನೆ’ ಎಂದು ಎರಡು ಹೆಜ್ಜೆ ಮುಂದೆ ವಾಗ್ದಾಳಿ ನಡೆಸಿದರು.

ಶಾಸಕರ ಪ್ರಶ್ನೆಗೆ ಉತ್ತರ ನೀಡಲು ಮುಂದಾದ ತಹಶೀಲ್ದಾರ್‌ ರೂಪಾ ಅವರನ್ನು ‘ಷಟಪ್‌. ಮುಚ್ಚು ಬಾಯ್‌’ ಎಂದು ಗಟ್ಟಿ ದನಿಯಲ್ಲಿ ಗದರಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಚಿವ ನಾರಾಯಣಗೌಡ, ‘ಶಾಸಕರಾದವರಿಗೆ ತಾಳ್ಮೆ ಇರಬೇಕು. ಅಧಿಕಾರಿಗಳನ್ನು ಹೀಗೆ ಹೊಡೆಯಲು ಹೋಗಬಾರದು. ಸಮಸ್ಯೆ ಇದ್ದರೆ ನಾಲ್ಕು ಗೋಡೆ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬೇಕು. ಇದು ನಿಮಗೆ ತರವಲ್ಲ ಎಂದರು.

ಸಚಿವರ ಮಾತಿನಿಂದ ಮತ್ತಷ್ಟು ಸಿಟ್ಟಿಗೆದ್ದ ಶಾಸಕ, ‘ನಿಮ್ಮಿಂದ ನಾನು ಕಲಿಯಬೇಕಾದ್ದು ಏನೂ ಇಲ್ಲ. ನೀವು ಮೊದಲೇ ನಿಷ್ಠೆ ಇಲ್ಲದವರು. ನನಗೆ ಬುದ್ಧಿ ಹೇಳಲು ಬರಬೇಡಿ. ಮುಂದೊಂದು ದಿನ ನಾನೂ ಮಂತ್ರಿಯಾಗುತ್ತೇನೆ. ಆಗ ನಿಮಗೆ ತಕ್ಕ ಉತ್ತರ ಕೊಡುತ್ತೇನೆ. ನಮ್ಮ ಸಹಕಾರದಿಂದ ನಿಮ್ಮ ಸರ್ಕಾರ ನಡೆಯುತ್ತಿದೆ ಎಂಬುದನ್ನು ಮರೆಯಬೇಡಿ’ ಎಂದು ತಿರುಗೇಟು ನೀಡಿದರು.

‘ನಾನು ಮೂರನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಈ ಜಿಲ್ಲೆಯ ಮಂತ್ರಿ. ಸಭೆಯ ಘನತೆ ತಿಳಿದು ಮಾತನಾಡಿ. ಅಧಿಕಾರಿಗಳನ್ನು ಗೌರವದಿಂದ ಮಾತಾಡಿಸಿ. ನಿಮ್ಮ ಮಾತು ಹಿಡಿತ ತಪ್ಪುತ್ತಿದೆ. ನನಗೂ ಮಾತು ಬರುತ್ತದೆ. ಆದರೆ, ನಿಮ್ಮ ಮಟ್ಟಕ್ಕೆ ಇಳಿದು ಮಾತನಾಡಲು ಆಗುವುದಿಲ್ಲ’ ಎಂದು ಸಚಿವ ನಾರಾಯಣಗೌಡ ಪ್ರತ್ಯುತ್ತರ ನೀಡಿದರು.

ಒಂದು ಹಂತದಲ್ಲಿ ಸಚಿವ ಮತ್ತು ಶಾಸಕರ ನಡುವೆ ಏಕ ವಚನ ಪ್ರಯೋಗವೂ ಆಯಿತು.

ಅಸಹಾಯಕ ಪೊಲೀಸರು: ಇಷ್ಟೆಲ್ಲಾ ಬೆಳವಣಿಗೆಗಳನ್ನು ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಹಕ್ಕುಪತ್ರ ಪಡೆಯಲು ಬಂದಿದ್ದ ಜನರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು.

ಅರ್ಧ ಗಂಟೆಗೂ ಹೆಚ್ಚು ಕಾಲ ಸಭೆ ಗೊಂದಲದ ಗೂಡಾಗಿತ್ತು.

ಇದಕ್ಕೂ ಮುನ್ನ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿ ಸಭೆಯಿಂದ ನಿರ್ಗಮಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು