ಶನಿವಾರ, ನವೆಂಬರ್ 28, 2020
25 °C
ಬುಧವಾರ 14.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲು, ನಡುಗಿದ ಜನರು, ಹೊರಬರಲು ಹಿಂದೇಟು

ಮಂಡ್ಯ: ಮೈಕೊರೆಯುವ ಚಳಿ; ಗಡಗಡ ನಡುಗಿದ ಜನರು

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

ಮಂಡ್ಯ: ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಮೈಕೊರೆಯುವ ಚಳಿ ಜನರಿಗೆ ಕಚಗುಳಿ ಇಡುತ್ತಿದೆ. ಬೆಳಿಗ್ಗೆ ಎಂಟು ಗಂಟೆಯಾದರೂ ಹಾಸಿಗೆಯಿಂದ ಮೇಲೇಳದ ಜನರು ಸ್ವೆಟರ್‌, ಮಫ್ಲರ್‌ಗಳ ಮೊರೆ ಹೋಗುತ್ತಿದ್ದಾರೆ.

ಹವಾಮಾನ ಇಲಾಖೆಯ ಮಾಹಿತಿ ಅನ್ವಯ ಮಂಗಳವಾರ (ನ.10) ಬೆಳಿಗ್ಗೆ 7.30ರಿಂದ ಬುಧವಾರ (ನ.11) ಬೆಳಿಗ್ಗೆ 7.30ರವರೆಗೆ ಕನಿಷ್ಠ ಉಷ್ಣಾಂಶ 15.6 ಡಿಗ್ರಿ ಸೆಲ್ಸಿಯಸ್‌ ಮುನ್ಸೂಚನೆ ನೀಡಲಾಗಿತ್ತು. ಆದರೆ ವಾಸ್ತವವಾಗಿ ದಾಖಲಾದ ಕನಿಷ್ಠ ಉಷ್ಣಾಂಶ 14.6 ಕುಸಿದಿರುವುದು ಕೊರೆಯುವ ಚಳಿ ಹೆಚ್ಚಾಗಲು ಕಾರಣವಾಗಿದೆ.

ಕೋವಿಡ್‌ ನಡುವೆಯೂ ಜನರು ಉದ್ಯಾನ, ಕ್ರೀಡಾಂಗಣಗಳಲ್ಲಿ ವಿಹಾರ ಮಾಡುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ನಗರದ ಪಿಇಟಿ ಕ್ರೀಡಾ ಸಮುಚ್ಛಯ, ಸರ್‌ ಎಂ.ವಿ. ಕ್ರೀಡಾಂಗಣ, ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನ, ಸರ್ಕಾರಿ ಮಹಾವಿದ್ಯಾಲಯದ ಮೈದಾನದಲ್ಲಿ  ಮಹಿಳೆಯರು, ಹಿರಿಯ ನಾಗರಿಕರು ವಿಹಾರ ಮಾಡುತ್ತಿದ್ದರು. ಆದರೆ ಈಗ ಮೈಕೊರೆಯುವ ಚಳಿ ಜನರನ್ನು ಗಡಗಡ ನಡುಗಿಸುತ್ತಿದ್ದು ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ನಗರದ ಸುತ್ತಲೂ ನಾಲೆಗಳಲ್ಲಿ ನೀರು ಹರಿಯುತ್ತಿರುವ ಕಾರಣ ಚಳಿಯ ಪ್ರಭಾವ ತೀವ್ರಗೊಂಡಿದೆ. ಜೊತೆಗೆ ಸುತ್ತಮುತ್ತಲಿನ ಕೆರೆಗಳು ತುಂಬಿ ಹರಿಯುತ್ತಿದ್ದು ತಣ್ಣನೆಯ ವಾತಾವರಣವಿದೆ. ಹೀಗಾಗಿ ಮನೆಯಲ್ಲಿ ಮಡಿಸಿ ಇಟ್ಟಿದ್ದ ರಗ್ಗು, ಮಂಕಿ ಟೋಪಿ, ಜರ್ಕಿನ್‌ಗಳನ್ನು ತೆರೆಯುತ್ತಿರುವ ಜನರು ಮುಂಬರುವ ಚಳಿಗಾಲವನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ಎಲ್ಲೆಡೆ ಕೋವಿಡ್‌ ಭಯವೂ ಇರುವ ಕಾರಣ ಇಂತಹ ಸಂದರ್ಭದಲ್ಲಿ ಚಳಿಗಾಲವನ್ನು ಎದುರಿಸುವುದು ಹೇಗೆ ಎಂಬ ಚರ್ಚೆಗಳು ಗರಿಗೆದರಿವೆ.

‘ಈ ವರ್ಷ ಚಳಿ ಹೆಚ್ಚಿಗೆ ಇರಲಿದೆ ಎಂಬು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಆದರೆ ನವೆಂಬರ್‌ ತಿಂಗಳಲ್ಲೇ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ ಎಂಬ ನಿರೀಕ್ಷೆ ಇರಲಿಲ್ಲ. ಬುಧವಾರವಂತೂ ಬೆಳಿಗ್ಗೆ 9 ಗಂಟೆಯಾದರೂ ಮನೆಯಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಮಧ್ಯಾಹ್ನವಾದರೂ ಚಳಿಯ ತೀವ್ರತೆ ಇದ್ದೇ ಇತ್ತು’ ಎಂದು ಅಶೋಕ್‌ನಗರದ ನಾಗರಾಜ್‌ ಹೇಳಿದರು.

ಬುಧವಾರ ಬೆಳಿಗ್ಗೆ ನಗರದ ವಿವಿಧೆಡೆ ನಡೆಯುತ್ತಿದ್ದ ಯೋಗ ತರಬೇತಿ ಶಿಬಿರಗಳಲ್ಲಿ, ವ್ಯಾಯಾಮ ಶಾಲೆಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು. ಬೆಳಿಗ್ಗೆ ಎಂಟು ಗಂಟೆಯಾದರೂ ಮಂಜು ಮುಸುಕಿದ ವಾತಾವರಣ ಇದ್ದೇ ಇತ್ತು. ಮಹಾವೀರ ಸರ್ಕಲ್‌ನಲ್ಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ಚಳಿಯಿಂದ ನಡುಗುತ್ತಿದ್ದರು. ಕಾಗದಗಳನ್ನು ಕೂಡಿಸಿ ಬೆಂಕಿ ಹೊತ್ತಿಸಿಕೊಂಡು ಮೈ ಕಾಯಿಸಿಕೊಳ್ಳುತ್ತಿದ್ದರು. ವಿವಿಧೆಡೆ ಟೀ, ಕಾಫಿ ಕೇಂದ್ರಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು.

‘ಈಗ ಶಾಲೆಗಳು ಇಲ್ಲದ ಕಾರಣ ಮಕ್ಕಳು ಬೆಚ್ಚಗೆ ಮನೆಯಲ್ಲೇ ಉಳಿದಿದ್ದಾರೆ. ಬೇಗ ಎದ್ದು ಮಕ್ಕಳನ್ನು ಶಾಲೆಗೆ ಕಳುಹಿಸುವ ಅನಿವಾರ್ಯತೆ ಇಲ್ಲ. ಮುಂದೆ ಶಾಲೆಗಳು ಆರಂಭವಾದ ನಂತರ ಈ ಚಳಿಯಿಂದ ಮಕ್ಕಳನ್ನು ರಕ್ಷಣೆ ಮಾಡುವುದು ಹೇಗೆ ಎಂಬ ಆತಂಕ ಕಾಡುತ್ತಿದೆ’ ಎಂದು ಪೋಷಕರರಾದ ಶಾರದಮ್ಮ ಹೇಳಿದರು.

ಕನಿಷ್ಠ ಉಷ್ಣಾಂಶ: ಗುರುವಾರದ ನಂತರ ಪರಿಸ್ಥಿತಿ ಕೊಂಚ ಸುಧಾರಿಸಿದ್ದು 15.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದ ಮುನ್ಸೂಚನೆ ಇದೆ. ನ.13ರಂದು ಕನಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆಯಾಗಲಿದ್ದು 19.3 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ. ನಂತರ ನ.14ರಿಂದ ಮತ್ತೆ ಉಷ್ಣಾಂಶ ಕುಸಿತ ಕಾಣಲಿದ್ದು ಜನರು ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರೇಷ್ಮೆ ಹುಳು ಜೋಪಾನ

‘ಚಳಿಗಾಲದಲ್ಲಿ ರೈತರು ಜಾನುವಾರುಗಳನ್ನು ಅತ್ಯಂತ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ರೇಷ್ಮೆ ಬೆಳೆಗಾರರು ರೇಷ್ಮೆ ಹುಳುಗಳನ್ನು ಕಾಪಾಡಿಕೊಳ್ಳಲು ಕನಿಷ್ಠ 23 ಡಿಗ್ರಿ ಉಷ್ಣಾಂಶ ಇರಬೇಕು. ಆದರೆ ಉಷ್ಣಾಂಶ ಅದಕ್ಕಿಂತಲೂ ಕಡಿಮೆ ಇರುವ  ಹಿನ್ನೆಲೆಯಲ್ಲಿ ವಿದ್ಯುತ್‌ ಬಲ್ಬ್‌ಗಳನ್ನು ಉರಿಸುತ್ತಾ ಉಷ್ಣಾಂಶ ಹೆಚ್ಚಿಸಿಕೊಳ್ಳಬೇಕು’ ಎಂದು ವಿ.ಸಿ.ಫಾರಂನಲ್ಲಿ ಇರುವ ಜಿಲ್ಲಾ ಕೃಷಿ ಹವಾಮಾನ ಘಟಕದ (ಡಿಎಎಂಯು) ಹವಾಮಾನ ವಿಜ್ಞಾನ ತಜ್ಞೆ ಎಸ್‌.ಎನ್‌.ಅರ್ಪಿತಾ ಹೇಳಿದರು.

ಮೈಮರೆತರೆ ಕೋವಿಡ್‌ ಹೆಚ್ಚಳ: ಎಚ್ಚರಿಕೆ

’ದೆಹಲಿ, ಮಹಾರಾಷ್ಟ, ಕೇರಳ ರಾಜ್ಯಗಳಲ್ಲಿ ಉಷ್ಣಾಂಶ ಕುಸಿದ ಪರಿಣಾಮ ಕೋವಿಡ್‌ ಪ್ರಕರಣಗಳು ವಿಪರೀತ ಹೆಚ್ಚಾಗಿವೆ. ಕಡಿಮೆ ಉಷ್ಣಾಂಶ ಇದ್ದಾಗ ಕೊರೊನಾ ಸೋಂಕು ಹೆಚ್ಚು ಜಾಗೃತವಾಗಿರುತ್ತದೆ. ಹೀಗಾಗಿ ಜನರು ಮೈಮರೆಯದೆ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಸಲಹೆ ನೀಡಿದರು.

‘ಗುರುವಾರದಿಂದ ಮದ್ದೂರು ತಾಲ್ಲೂಕಿನಿಂದ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಚಳಿಗಾಲದಲ್ಲಿ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆಯ ಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಲಾಗುವುದು. ಹಳ್ಳಿಗಳಲ್ಲಿರುವ ಗ್ರಾಮ ಆರೋಗ್ಯ ಕಾರ್ಯಪಡೆ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ವಿಸ್ತರಣೆ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು