ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಭೂತಗಳಲ್ಲಿ ಲೀನವಾದ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ

ಸರ್ಕಾರಿ ಗೌರವ ಸಲ್ಲಿಕೆ; ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಭಾಗಿ
Last Updated 22 ಮೇ 2021, 12:33 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ನಾಡಿನ ಹಿರಿಯ ರಾಜಕಾರಣಿ, ‘ಮಂಡ್ಯ ಗಾಂಧಿ’ ಎಂದೇ ಮನೆಮಾತಾಗಿದ್ದ ವಿಧಾನಸಭೆಯ ಮಾಜಿ ಸ್ಪೀಕರ್‌ ಕೃಷ್ಣ ಅವರ ಅಂತ್ಯ ಸಂಸ್ಕಾರ ಶನಿವಾರ ಅವರ ಹುಟ್ಟೂರಾದ ಕೊತ್ತ ಮಾರನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಪ್ರದಾಯದಂತೆ ವಿದಿಬದ್ಧವಾಗಿ ನಡೆಯಿತು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ, ಜಿಲ್ಲಾಧಿಕಾರಿ ಡಾ.ಅಶ್ವಥಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಡಾ.ಅಶ್ವಿನಿ ಅವರ ನೇತೃತ್ವದಲ್ಲಿ ರಾಷ್ಟ್ರಧ್ವಜವನ್ನು ಕೃಷ್ಣ ಅವರ ಮೃತ ದೇಹಕ್ಕೆ ಹೊದಿಸಿ ಮೂರು ಸುತ್ತು ಕುಶಾಲ ತೋಪನ್ನು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.

ಅಳಿಯ ಶ್ರೀಧರ್ ಅವರು ಕೃಷ್ಣ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

ಮೈಸೂರಿನಿಂದ ಆಂಬ್ಯುಲೆನ್ಸ್‌ನಲ್ಲಿ ಆಗಮಿಸಿದ ಕೃಷ್ಣ ಅವರ ಪಾರ್ಥಿವ ಶರೀರವನ್ನು ಹೆಮ್ಮನಹಳ್ಳಿ ಗೇಟ್‌ನಲ್ಲಿ ಸರ್ವಾಲಂಕೃತವಾದ ತೆರೆದ ವಾಹನಕ್ಕೆ ಸ್ಥಳಾಂತರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ನೂರಾರು ಜನರು ಸಾಲಿನಲ್ಲಿ ನಿಂತು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ನಂತರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಅವರು ಮೂರು ದಶಕಗಳ ಕಚೇರಿ ಮಾಡಿ ನೆಲೆಸಿದ್ದ ಗ್ರಾಮಭಾರತಿ ಶಾಲೆಯ ’ಒಕ್ಕಲಿಗರ ಹಾಸ್ಟೆಲ್‘ (ಈಗ ಆದಿಚುಂಚನಗಿರಿ ಬಿಜಿಎಸ್ ಶಾಲೆ) ಬಿಲ್ಡಿಂಗ್ ಬಳಿ ನಿಲ್ಲಿಸಲಾಯಿತು. ಅಲ್ಲಿ ತಾಲ್ಲೂಕಿನ ಹಲವು ಗಣ್ಯರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅಂತಿಮ ನಮನ ಸಲ್ಲಿಸಿದರು.

ನಂತರ ಅವರ ಹುಟ್ಟೂರಿಗೆ ಹೋಗುವ ದುರ್ಗಾಭವನ್ ಸರ್ಕಲ್‌ನಲ್ಲಿ ಹಾಕಲಾಗಿದ್ದ ಶಾಮಿಯಾನದಲ್ಲಿ ವಾಹನವನ್ನು ನಿಲ್ಲಿಸಲಾಯಿತು. ಈ ವೇಳೆ ಅಲ್ಲಿ ಕೂಡ ನೂರಾರು ಮಂದಿ ದರ್ಶನ ಪಡೆದರು.

ಅನುವಿನಕಟ್ಟೆ, ಅಗ್ರಹಾರಬಾಚಹಳ್ಳಿ ಗೇಟ್, ವಳಗೆರೆಮೆಣಸ, ಕೈಗೋನಹಳ್ಳಿ ಗೇಟ್, ಕೊಟಗಹಳ್ಳಿ, ರಂಗನಾಥಪುರ ಕ್ರಾಸ್, ಸಂತೇಬಾಚಹಳ್ಳಿ, ಸೋಮೇನಹಳ್ಳಿ ಮೂಲಕ ಕೃಷ್ಣ ಅವರ ಸ್ವಗ್ರಾಮ ಕೊತ್ತಮಾರನಹಳ್ಳಿಗೆ ಪಾರ್ಥೀವ ಶರೀರ ತರಲಾಯಿತು.

ಅವರ ಹುಟ್ಟೂರಿನ ಮನೆಯ ಮುಂಭಾಗ ಪೂಜೆ ಪುರಸ್ಕಾರಗಳು ಹಾಗೂ ವಿಧಿ ವಿಧಾನಗಳನ್ನು ನಡೆಸಿ ಅಂತ್ಯಸಂಸ್ಕಾರ ನಡೆಸಲು ನಿಗದಿಯಾಗಿದ್ದ ಅವರ ತೋಟಕ್ಕೆ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಕೃಷ್ಣ ಅವರ ಮಗಳು ಮಂಜುಳಾ, ಅಳಿಯ ಶ್ರೀಧರ್, ಕೃಷ್ಣ ಅವರ ಪತ್ನಿ ಇಂದ್ರಮ್ಮ ಅಂತಿಮ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT