ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ದೂರು: ಕಾಯಕಲ್ಪಕ್ಕಾಗಿ ಕಾಯುತ್ತಿರುವ ‘ಶಿವಪುರ ಧ್ವಜ ಸತ್ಯಾಗ್ರಹ ಸೌಧ’

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸ್ವಾತಂತ್ರ್ಯ ಸೌಧ
Published 14 ಆಗಸ್ಟ್ 2024, 6:30 IST
Last Updated 14 ಆಗಸ್ಟ್ 2024, 6:30 IST
ಅಕ್ಷರ ಗಾತ್ರ

ಮದ್ದೂರು: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಿಚ್ಚು ಹೊತ್ತಿಸಿದ ಹೋರಾಟಗಾರರ ನೆನಪಿಗಾಗಿ ನಿರ್ಮಿಸಿದ ಶಿವಪುರದ ಧ್ವಜ ಸತ್ಯಾಗ್ರಹ ಸೌಧವು ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಶಿವಪುರದ ಧ್ವಜ ಸತ್ಯಾಗ್ರಹ ಸೌಧವು ಹಲವು ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ, ಇದು ನಮ್ಮ ರಾಜ್ಯದ ಹೆಮ್ಮೆಯಾಗಿರುವ ಸೌಧವನ್ನು ದುರಸ್ತಿಗೊಳಿಸಿ ಕಾಯಕಲ್ಪ ನೀಡಬೇಕು ಎಂಬುದು ಚಳವಳಿಗಾರರ ಒತ್ತಾಸೆಯಾಗಿದೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಈ ಸ್ಮಾರಕವು ಸ್ವಾತಂತ್ರ್ಯ ಹೋರಾಟದ ಹೆಗ್ಗುರುತಾಗಿದೆ. ಇದನ್ನು 1937ರಲ್ಲಿ ಅಂದಿನ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಕೆ.ವೀರಣ್ಣಗೌಡ, ಕೊಪ್ಪದ ಜೋಗಿಗೌಡ, ಸಾಹುಕಾರ ಚೆನ್ನಯ್ಯ ಸೇರಿದಂತೆ ಹಲವು ಮಹನೀಯರ ನೇತೃತ್ವದಲ್ಲಿ ನಡೆದಿದ್ದ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಈ ಸೌಧ ನಿರ್ಮಿಸಿರುವುದು ಇತಿಹಾಸ.

ಸ್ವಾತಂತ್ರ್ಯ ಹೋರಾಟಕ್ಕೆ ಅಂದಿನ ಕಾಲದಲ್ಲಿಯೇ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದಕ್ಕೆ ಶಿವಪುರದ ತಿರುಮಲೆಗೌಡರು ತಮ್ಮ ಜಮೀನನ್ನು ನೀಡಿದ್ದರು. ಇಲ್ಲಿ ಕೋಲಾರದ ಸ್ವಾತಂತ್ರ್ಯ ಹೋರಾಟಗಾರ ಟಿ.ಸಿದ್ದಲಿಂಗಯ್ಯ ಅವರು ಬಾವುಟ ಹಾರಿಸಿದ್ದರು. 1979ರಲ್ಲಿ ನಿರ್ಮಾಣಗೊಂಡ ಈ ಸ್ಮಾರಕಕ್ಕೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ರವರು ಉದ್ಘಾಟಿಸಿದ್ದರು. ಕೆಂಗಲ್ ಹನುಮಂತಯ್ಯ ಅವರ ಅಧ್ಯಕ್ಷತೆ ವಹಿಸಿದ್ದರು. ಇಂತಹ ಇತಿಹಾಸಿಕ ಸ್ಮಾರಕ ಪಾಳು ಬಂಗಲೆ ಯಂತಿರುವುದು ದುರಂತ.

ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸತ್ಯಾಗ್ರಹ ಸೌಧ ಬಳಿ ಗ್ರಂಥಾಲಯಕ್ಕೆಂದು ಆನೆಕ್ಸ್ ಕಟ್ಟಡ ನಿರ್ಮಿಸಿದ್ದು ಬಿಟ್ಟರೆ, ಬೇರೆ ಯಾವ ಸರ್ಕಾರವೂ ಇದರತ್ತ ಕಾಳಜಿ ವಹಿಸಲಿಲ್ಲ. ಹಲವು ವರ್ಷಗಳ ಹಿಂದೆ ಬೇರೆಡೆಗಳಿಂದ ಬರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಪ್ರವಾಸಿಗರು ಬಂದು ಧ್ವಜ ಸತ್ಯಾಗ್ರಹ ಸೌಧವನ್ನು ವೀಕ್ಷಿಸಿ ಸ್ವಾತಂತ್ರ್ಯ ಹೋರಾಟದ ಮಾಹಿತಿ ಪಡೆಯಲು ದಿನನಿತ್ಯ ಬಾಗಿಲು ತೆರೆಯಲಾಗುತ್ತಿತ್ತು.

ಕಟ್ಟಡ ನೋಡಿಕೊಳ್ಳಲು ಹಾಗೂ ಒಳ ಆವರಣ ನಿರ್ವಹಣೆ ಮಾಡಲು ಲೋಕೋಪಯೋಗಿ ಇಲಾಖೆಯಿಂದ ಒಬ್ಬ ಕಾವಲುಗಾರನನ್ನು ನೇಮಿಸಲಾಗಿತ್ತು. ಆದರೆ ಇತ್ತೀಚೆಗೆ ಯಾವೊಬ್ಬ ಕಾವಲುಗಾರ ಇಲ್ಲದೇ ಯಾವಾಗಲೂ ಸೌಧದ ಬಾಗಿಲಿಗೆ ಬೀಗ ಹಾಕಿರುವ ದೃಶ್ಯ ಸಾಮಾನ್ಯವಾಗಿದೆ.

‘ಮೂರು ತಿಂಗಳಿಗೋ ಆರೂ ತಿಂಗಳಿಗೂ ಸೌಧದ ಒಳಗಡೆ ಕಾರ್ಯಕ್ರಮ ನಡೆದಾಗ, ಸ್ವಾತಂತ್ರ್ಯ ದಿನಾಚರಣೆ ಬಂದಾಗ ಮಾತ್ರ ಬಾಗಿಲು ತೆರೆಯಲಾಗುತ್ತದೆ. ಜಿಲ್ಲಾ ಉಸ್ತುವಾರಿಯಾಗಿದ್ದ ಅಶ್ವತ್ಥ್ ನಾರಾಯಣ್ ಅವರು ಸಚಿವರಾಗಿದ್ದ ವೇಳೆ ಸತ್ಯಾಗ್ರಹದ ಅವ್ಯವಸ್ಥೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅಷ್ಟೇ ಅದು ಭರವಸೆಯಾಗಿಯೇ ಉಳಿಯಿತು’ ಎಂದು ಸ್ಥಳೀಯರಾದ ಕುಮಾರ್‌, ಸತೀಶ್‌, ಉಮೇಶ್‌ ಬೇಸರ ವ್ಯಕ್ತಪಡಿಸುತ್ತಾರೆ.

ಸತ್ಯಾಗ್ರಹ ಸೌಧದ ಒಳಗಡೆ ಇರುವ ಚಿತ್ರ ಪಠಗಳು ಹಾಳಾಗಿವೆ. ಇರುವ ಪೀಠೋಪಕರಣಗಳ ಮೇಲೆ ದುಂಬು ಕೂತಿದೆ, ಉದ್ಯಾನವನ ಸಂಪೂರ್ಣವಾಗಿ ಹಾಳಾಗಿವೆ. ಸಂಗೀತ ಕಾರಂಜಿಯ ಉಪಕರಣಗಳು ತುಕ್ಕು ಹಿಡಿದಿವೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸ್ವಾತಂತ್ರ್ಯಹೋರಾಟದ ಪ್ರತೀಕವಾದ ಧ್ವಜ ಸತ್ಯಾಗ್ರಹ ಸೌಧವನ್ನು ಶಾಶ್ವತವಾಗಿ ಉಳಿಯುವಂತೆ ಮಾಡಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿ ಬರುತ್ತಿದೆ.

ಧ್ವಜ ಸತ್ಯಾಗ್ರಹ ಸೌಧಕ್ಕೆ ನಿತ್ಯ ಬೀಗ ಹಾಕಿರುವ ದೃಶ್ಯ
ಧ್ವಜ ಸತ್ಯಾಗ್ರಹ ಸೌಧಕ್ಕೆ ನಿತ್ಯ ಬೀಗ ಹಾಕಿರುವ ದೃಶ್ಯ
ಮದ್ದೂರಿನ ಶಿವಪುರದಲ್ಲಿರುವ ಐತಿಹಾಸಿಕ ಧ್ವಜಸತ್ಯಾಗ್ರಹ ಸೌಧ
ಮದ್ದೂರಿನ ಶಿವಪುರದಲ್ಲಿರುವ ಐತಿಹಾಸಿಕ ಧ್ವಜಸತ್ಯಾಗ್ರಹ ಸೌಧ

ಶಾಲಾ ಮಕ್ಕಳು ಬಂದಾಗ ತೆರೆಯುತ್ತಿದ್ದ ಸೌಧ ರಾಷ್ಟ್ರೀಯ ದಿನಾಚರಣೆ ಸಮಯದಲ್ಲಿ ಸ್ವಚ್ಛಗೊಳಿಸುವ ಕಾಯಕ ಕಳೆದ ಹಲವು ತಿಂಗಲಿಂದ ಬೀಗವನ್ನೇ ತೆರೆದಿಲ್ಲ

ದಿನನಿತ್ಯ ಬಾಗಿಲಿಗೆ ಬೀಗ

ಹಲವು ವರ್ಷಗಳ ಹಿಂದೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಪ್ರವಾಸಿಗರು ಬಂದು ಧ್ವಜ ಸತ್ಯಾಗ್ರಹ ಸೌಧವನ್ನು ವೀಕ್ಷಿಸಿ ಸ್ವಾತಂತ್ರ್ಯ ಹೋರಾಟಗಳ ಮಾಹಿತಿ ಪಡೆಯುತ್ತಿದ್ದರು. ಕಟ್ಟಡ ನಿರ್ವಹಣೆ ಮಾಡಲು ಲೋಕೋಪಯೋಗಿ ಇಲಾಖೆಯಿಂದ ಒಬ್ಬ ಕಾವಲುಗಾರನನ್ನು ನೇಮಿಸಲಾಗಿತ್ತು, ಈಚೆಗೆ ಆ ವ್ಯವಸ್ಥೆಯೂ ಇಲ್ಲದೆ ಸೌಧದ ಬಾಗಿಲಿಗೆ ಬೀಗ ಜಡಿದಂತಿರುತ್ತದೆ.

ಸೌಧದ ಒಳಗಡೆ ಕಾರ್ಯಕ್ರಮ ನಡೆದಾಗ ಮಾತ್ರವೇ ಬಾಗಿಲು ತೆಗೆಯುತ್ತಿದ್ದು. ನಂತರ ಸ್ವಚ್ಛತೆಯನ್ನೂ ಮಾಡದೆ ಬಾಗಿಲು ಹಾಕುತ್ತಾರೆ. ಕಿಟಕಿಯಿಂದ ಇಣುಕಿದರೆ ತ್ಯಾಜ್ಯವಷ್ಟೇ ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT