ಭಾನುವಾರ, ನವೆಂಬರ್ 27, 2022
21 °C

ಹುಟ್ಟಿದ ಊರನ್ನು ಮರೆಯಲು ಸಾಧ್ಯವಿಲ್ಲ: ಬಿ.ಎಸ್.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ‘ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಜನ್ಮ ಕೊಟ್ಟ ಊರನ್ನು ಮರೆಯಲು ಸಾಧ್ಯವಿಲ್ಲ’ ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ತಮ್ಮ ಸ್ವಗ್ರಾಮ ಬೂಕನಕೆರೆಗೆ ಬುಧವಾರ ಸಂಜೆ ಭೇಟಿ ನೀಡಿ ತಮ್ಮ ಮನೆದೇವರಾದ ಅಕ್ಕಯ್ಯಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

‘ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನನ್ನ ಕುಟುಂಬದ ಹಿರಿಯರಿಗೆ ನಮಿಸುವ, ಮನೆ ದೇವತೆಯಾದ ಅಕ್ಕಯ್ಯಮ್ಮನಿಗೆ ಪೂಜೆ ಸಲ್ಲಿಸುವ ಕಾರ್ಯ ಹಿಂದಿನಿಂದ ನಡೆದುಕೊಂಡು ಬಂದಿದೆ. ಈ ಬಾರಿ ಗ್ರಾಮಸ್ಥರು ಬರಲೇ ಬೇಕೆಂದು ಒತ್ತಾಯ ಮಾಡಿದ ಹಿನ್ನೆಲೆ ಯಲ್ಲಿ ಬರಲೇಬೇಕಾಯಿತು’ ಎಂದರು.

‘ಸ್ವರ್ಗಸ್ಥರಾಗಿರುವ ತಂದೆಯವರು ನನ್ನನ್ನು ತೋಟಕ್ಕೆ ಕರೆದೊಯ್ಯುವಾಗ, ಮನೆ ದೇವರಾದ ಗವಿಮಠ ಸಿದ್ದಲಿಂಗೇಶ್ವರರ ದೇವಸ್ಥಾನಕ್ಕೆ ಕರೆದೊಯ್ಯುವಾಗ, ತೆಂಡೇಕೆರೆಯ ಸಂತೆಗೆ ಗಾಡಿಯಲ್ಲಿ ಹೋಗುವಾಗಲೆಲ್ಲಾ ನಿನಗೆ ಯೋಗವಿದೆ. ಇಲ್ಲಿಯ ಆಲೋಚನೆ ಬೇಡ. ದೈವತ್ವ ನಿನ್ನನ್ನು ಕರೆದೊಯ್ದಂತೆ ಹೋಗು ಎಂದಿದ್ದರು’ ಎಂದು ನೆನಪು ಮಾಡಿಕೊಂಡರು.

‘ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಜೀವನ ನಡೆಯಿತು. ನನ್ನ ಕರ್ಮ ಭೂಮಿ ಶಿಕಾರಿಪುರದಲ್ಲಿ ಏಳು ಬಾರಿ ನನ್ನನ್ನು ಗೆಲ್ಲಿಸಿದರು. ನಾಲ್ಕು ಬಾರಿ ಮುಖ್ಯಮಂತ್ರಿ ಯಾದೆ. ಬೂಕನಕೆರೆ ಹಾಗೂ ಶಿಕಾರಿಪುರ ಎರಡೂ ಊರುಗಳು ನನ್ನ ಎರಡು ಕಣ್ಣುಗಳಿದ್ದಂತೆ’ ಎಂದರು.

‘ಕೆ.ಆರ್.ಪೇಟೆಯಲ್ಲಿ ನಾನು ಕಟ್ಟಿ ಬೆಳೆಸಿದ ಪಕ್ಷ ಖಾತೆ ತೆರೆಯಲಿಲ್ಲವಲ್ಲ ಎಂಬ ಕೊರಗು ನನಗಿತ್ತು. ಕಳೆದ ಚುನಾವಣೆಯಲ್ಲಿ ನನ್ನ ಕೈಹಿಡಿದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ನನ್ನನ್ನು ಸಿಎಂ ಸ್ಥಾನದಲ್ಲಿ ಉಳಿಯಲು ತಾಲ್ಲೂಕಿನ ಮತದಾರರು ಸಹಾಯ ಮಾಡಿದರು’ ಎಂದು ಹೇಳಿದರು.

ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ ಅರವಿಂದ್, ಗ್ರಾ.ಪಂ ಅಧ್ಯಕ್ಷೆ ಸುನಂದಾ, ಮುಖಂಡರಾದ ಬೂಕನಕೆರೆ ಮಧುಸೂದನ್, ಚೋಕನಹಳ್ಳಿ ಪ್ರಕಾಶ್, ಮೀನಾಕ್ಷಮ್ಮ ಪುಟ್ಟರಾಜು, ಶ್ಯಾಮಸುಂದರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು