ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ತೀವ್ರಗೊಂಡ ಕಳ್ಳತನ: ಆತಂಕದಲ್ಲಿ ಜನ!

ಆರು ತಿಂಗಳಲ್ಲಿ 430 ಪ್ರಕರಣ ದಾಖಲು, ಮಂಡ್ಯ ನಗರದಲ್ಲಿ ವಿಪರೀತ, ಹಳ್ಳಿಗಳಲ್ಲೂ ಕಳ್ಳರ ಕಾಟ
Last Updated 20 ಸೆಪ್ಟೆಂಬರ್ 2020, 13:09 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಾದ್ಯಂತ ಕಳ್ಳತನ ಪ್ರಕರಣಗಳು ತೀವ್ರಗೊಳ್ಳುತ್ತಿದ್ದು ಸಾರ್ವಜನಿಕರು ಆತಂಕ ಮನೆ ಮಾಡಿದೆ. ಅದರಲ್ಲೂ ಮಂಡ್ಯ ನಗರದಲ್ಲಿ ಮನೆ, ಅಂಗಡಿ ಕಳ್ಳತನ ವಿಪರೀತವಾಗುತ್ತಿದ್ದು ಜನರು ಭಯದ ನಡುವೆ ಬದುಕುವಂತಾಗಿದೆ.

ಕಳೆದ ಆರು ತಿಂಗಳಿಂದೀಚಿಗೆ ಜಿಲ್ಲೆಯಲ್ಲಿ 431 ಕಳ್ಳತನ ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ. ಲಾಕ್‌ಡೌನ್‌ ಘೋಷಣೆಯಾದ ನಂತರ ಪ್ರಕರಣಗಳ ಸಂಖ್ಯೆ ತೀವ್ರಗೊಳ್ಳುತ್ತಿವೆ. ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ಮಂಡ್ಯದ ಪೇಟೆಬೀದಿ, ಸಿಹಿನೀರಿನ ಕೊಳ, ಶಂಕರಮಠ, ಗುತ್ತಲು, ತಾವರೆಗೆರೆ ಮುಂತಾದೆಡೆ ಅಂಗಡಿ ಕಳ್ಳತನ ಸಾಮಾನ್ಯವಾಗಿವೆ.

ಸಿಹಿನೀರಿನ ಕೊಳ ಬಡಾವಣೆಯಲ್ಲಿ ಸಣ್ಣಪುಟ್ಟ ಚಿಲ್ಲರೆ ಅಂಗಡಿಗಳಲ್ಲೂ ಕಳ್ಳತನವಾಗುತ್ತಿದೆ. ಪ್ರಕರಣ ಸಾಮಾನ್ಯವಾಗುತ್ತಿರುವ ಕಾರಣ ವ್ಯಾಪಾರಿಗಳು ಪೊಲೀಸ್‌ ಠಾಣೆಗೆ ದೂರು ನೀಡಲೂ ಹಿಂದೇಟು ಹಾಕುತ್ತಿದ್ದಾರೆ. ಪ್ರಕರಣ ದಾಖಲಾಗದ ಇಂತಹ ಸಾವಿರಾರು ಪ್ರಕರಣ ಜರುಗಿವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿ ಹೊರವಲಯದ ಬಡಾವಣೆಗಳಲ್ಲೂ ಮನೆ, ಅಂಗಡಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಕಲ್ಲಹಳ್ಳಿ, ಮರೀಗೌಡ ಬಡಾವಣೆ, ಬಿ.ಟಿ.ಲಲಿತಾನಾಯಕ್ ಬಡಾವಣೆ, ವಿವೇಕಾನಂದ ನಗರ ಮುಂತಾದೆಡೆ ಕಳ್ಳತನ ಹೆಚ್ಚುತ್ತಿವೆ. ಮಂಡ್ಯ ತಾಲ್ಲೂಕೊಂದರಲ್ಲೇ ಕಳೆದ 6 ತಿಂಗಳಲ್ಲಿ 115 ಕಳ್ಳತನ ಪ್ರಕರಣಗಳು ನಡೆದಿವೆ.

‘ಗುತ್ತಲು, ತಾವರೆಗೆರೆ ಬಡಾವಣೆಗಳಲ್ಲಿ ಮನೆಗಳ್ಳತನ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ. ಹಗಲು ವೇಳೆಯಲ್ಲೂ ಮನೆ ಬಿಟ್ಟು ಹೋಗಲು ಭಯವಾಗುತ್ತದೆ. ಹೀಗಾಗಿ ಮನೆ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೇವೆ’ ಎಂದು ತಾವರೆಗೆರೆಯ ಶಂಕರ್‌ ಹೇಳಿದರು.

ದೇವಾಲಯಗಳಿಗೆ ರಕ್ಷಣೆ ಇಲ್ಲ: ಇತ್ತೀಚೆಗೆ ದೇವಾಲಯಗಳಿಗೂ ರಕ್ಷಣೆ ಇಲ್ಲದಾಗಿದೆ. ಗುತ್ತಲು ಅರಕೇಶ್ವರ ದೇವಾಲಯದ ತ್ರಿವಳಿ ಕೊಲೆ, ಹುಂಡಿ ದರೋಡೆ ಪ್ರಕರಣಗಳದಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ. ಅದಕ್ಕೂ ಮೊದಲು ಜಿಲ್ಲೆಯ ವಿವಿಧೆಡೆ ದೇವಾಲಯಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ನಡೆದಿವೆ.

ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯ, ಹೊಳಲು ತಾಂಡವೇಶ್ವರ ದೇವಾಲಯ ಹಾಗೂ ಮದ್ದೂರಿನ ದೇವಾಲಯವೊಂದರಲ್ಲಿ ಹುಂಡಿ ಕಳ್ಳತನವಾಗಿದೆ. ‘ಸರಣಿ ಕಳ್ಳತನ ಪ್ರಕರಣಗಳ ಬಗ್ಗೆ ತಹಶೀಲ್ದಾರ್‌ ಗಮನಕ್ಕೆ ತರಲಾಗಿತ್ತು. ಆದರೆ ದೇವಾಲಯಗಳಿಗೆ ಭದ್ರತೆ ಒದಗಿಸುವಲ್ಲಿ ಮುಜರಾಯಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ವಿಫಲವಾಗಿವೆ ’ಎಂದು ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಹೇಳಿದರು.

ಹಳ್ಳಿಗಳಲ್ಲೂ ಕಳ್ಳರ ಕಾಟ: ನಗರ, ಪಟ್ಟಣ ಪ್ರದೇಶದಲ್ಲಿ ಅಂಗಡಿ– ಮನೆ ಕಳ್ಳತನ ಹೆಚ್ಚುತ್ತಿದ್ದರೆ ಗ್ರಾಮೀಣ ಪ್ರದೇಶದಲ್ಲಿ ವಾಹನ, ವಿದ್ಯುತ್‌ ಉಪಕರಣಗಳ ಕಳ್ಳತನ ಹೆಚ್ಚಾಗುತ್ತಿದೆ. ರೈತರು ಸಾಮಾನ್ಯವಾಗಿ ಬಳಸುವ ಕೃಷಿ ಉಪಕರಣಗಳು, ಪಂಪ್‌ಸೆಟ್‌ಗಳು, ಕೇಬಲ್‌ ವೈರ್‌, ಪೈಪ್‌ಗಳು, ಮೀಟರ್‌ ಬೋರ್ಡ್‌, ಟ್ರಾಕ್ಟರ್‌ ಟ್ರಾಲಿ, ಸ್ಕೂಟರ್‌, ಬೈಕ್‌ಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ.

‘ಮಂಡ್ಯದಲ್ಲಿ ಕಳ್ಳತನ ತಡೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯರೇ ಕಳ್ಳತನ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಅವರ ಮೇಲೂ ನಿಗಾ ವಹಿಸಲಾಗಿದೆ’ ಎಂದು ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು ತಿಳಿಸಿದರು.

ಎಲೆಕ್ಟ್ರಾನಿಕ್‌ ಬೀಟ್ ವ್ಯವಸ್ಥೆ: ಎಸ್‌ಪಿ

‘ಕೋವಿಡ್‌ ಲಾಕ್‌ಡೌನ್‌ ನಂತರ ಮಂಡ್ಯ ನಗರದಲ್ಲಿ ಕಳ್ಳತನ ಜಾಸ್ತಿಯಾಗಿರುವ ಬಗ್ಗೆ ಮಾಹಿತಿ ಇದೆ. ಕಳ್ಳತನ ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಹಲವು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ’ ಕೆ.ಪರಶುರಾಮ್‌ ಹೇಳಿದರು.

‘ನಗರದಲ್ಲಿ ಎಲೆಕ್ಟ್ರಾನಿಕ್‌ ಪೊಲೀಸ್‌ ಬೀಟ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಮೊದಲು ಪೊಲೀಸರು ಭೇಟಿ ನೀಡಿದ ಸ್ಥಳದಲ್ಲಿ ಪುಸ್ತಕಕ್ಕೆ ಸಹಿ ಮಾಡಿ ಬರುತ್ತಿದ್ದರು. ಆದರೆ ಈಗ ಆ್ಯಪ್‌ ಆಧಾರಿತ ಬೀಟ್‌ ವ್ಯವಸ್ಥೆ ಇದ್ದು ಪೊಲೀಸರು ಬೀಟ್‌ ತೆರಳಿದ ಬಗ್ಗೆ ಮಾಹಿತಿ ದಾಖಲಾಗುತ್ತದೆ. ಸಿಬ್ಬಂದಿ ಬೀಟ್‌ ತಪ್ಪಿಸಲು ಸಾಧ್ಯವೇ ಇಲ್ಲ. ಸಿಬ್ಬಂದಿಯ ಪ್ರತಿ ಹೆಜ್ಜೆ ದಾಖಲಾಗುತ್ತದೆ. ಇದರಿಂದ ಕಳ್ಳತನ ಪ್ರಕರಣಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT