ಸೋಮವಾರ, ಸೆಪ್ಟೆಂಬರ್ 26, 2022
24 °C
ಪಾಳು ಕಟ್ಟಡದಂತಿರುವ ಶಿವಪುರ ಧ್ವಜ ಸತ್ಯಾಗ್ರಹ ಸೌಧ; ಕೆರೆಯಂತಾದ ಗಾಂಧಿ ಉದ್ಯಾನ

ಮಂಡ್ಯ: ಸ್ವಾತಂತ್ರ್ಯ ಹೋರಾಟದ ಅವಧಿಯ ಸ್ಮಾರಕಗಳಿಲ್ಲ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಘಟನಾವಳಿಗಳನ್ನು ನೆನಪಿಸುವ ಹಲವು ಐತಿಹಾಸಿಕ ಸ್ಮಾರಕಗಳು ಜಿಲ್ಲಾ ವ್ಯಾಪ್ತಿಯಲ್ಲಿವೆ. ಆದರೆ, ಆಳುವವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಸ್ಮಾರಕಗಳಿಗೆ ರಕ್ಷಣೆಯೇ ಇಲ್ಲವಾಗಿದೆ.

ಶಿಂಷಾ ನದಿ ತಟದ ಶಿವಪುರದಲ್ಲಿ 1938ರ ಏಪ್ರಿಲ್‌ 10ರಂದು ನಡೆದ ಧ್ವಜ ಸತ್ಯಾಗ್ರಹದ ಕುರುಹು ಈ ಸ್ಮಾರಕಸೌಧ. ಎಚ್.ಕೆ. ವೀರಣ್ಣಗೌಡ, ಕೊಪ್ಪದ ಜೋಗಿಗೌಡ, ಸಾಹುಕಾರ ಚೆನ್ನಯ್ಯ ಸೇರಿದಂತೆ ಹಲವಾರು ಮಹನೀಯರ ಸ್ವಾತಂತ್ರ್ಯ ಹೋರಾಟದ ಪ್ರತೀಕವೂ ಆಗಿದೆ. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಾಂಗಿಯಾಗಿ ನಿಂತಿರುವ ಈ ಸೌಧಕ್ಕೆ ಜಿಲ್ಲಾಡಳಿತ ಯಾವುದೇ ಕಿಮ್ಮತ್ತು ಕೊಟ್ಟಿಲ್ಲ. ನಿರ್ವಹಣೆ ಕೊರತೆಯಿಂದಾಗಿ ಸತ್ಯಾಗ್ರಹ ಸೌಧ ಪಾಳು ಕಟ್ಟಡವಾಗಿದೆ.

ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಆವರಣಕ್ಕೆ ಪ್ರವಾಸಿ ತಾಣದ ರೂಪ ನೀಡಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಸತ್ಯಾಗ್ರಹ ಸೌಧದ ಮುಂದೆಯೇ ಚರಂಡಿ ನೀರು ಹರಿಯುತ್ತಿದ್ದು, ಸೌಂದರ್ಯ ಹಾಳಾಗಿದೆ. ಹೊರಾವರಣವು ಪಾಳು ಬಿದ್ದಿದ್ದು, ಇತ್ತ ಯಾರಾದರೂ ಪ್ರವಾಸಿಗರು ಬಂದರೆ ಮಾಹಿತಿ ನೀಡುವುದಕ್ಕೆ ನೌಕರರನ್ನೂ ನೇಮಿಸಿಲ್ಲ. ಸೌಧದ ಒಳಗಿರುವ ಚಿತ್ರಪಟಗಳು ಹಾಳಾಗಿದ್ದು, ಇರುವ ಪೀಠೋಪಕರಣಗಳು ದೂಳು ಹಿಡಿದು ಹಾಳಾಗಿವೆ. ಕಳೆದ ವರ್ಷ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಧ್ವಜ ಸತ್ಯಾಗ್ರಹ ಸೌಧದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಭವನಕ್ಕೆ ಒಂದಷ್ಟು ಸುಣ್ಣ ಬಣ್ಣ ಹೊಡೆಸಲಾಗಿತ್ತು. ಆ ಕಾರ್ಯ ಕ್ರಮದ ನಂತರ ಅಲ್ಲಿ ಯಾವುದೇ ಸರ್ಕಾರಿ ಚಟುವಟಿಕೆಗಳು ನಡೆದಿಲ್ಲ.

ಸತ್ಯಾಗ್ರಹ ನಡೆದು 36 ವರ್ಷಗಳ ನಂತರ, ಆಗ ಮುಖ್ಯಮಂತ್ರಿಯಾಗಿದ್ದ ಕೆಂಗಲ್‌ ಹನುಮಂತಯ್ಯ ಅವರು ಶಿವಪುರ ಸತ್ಯಾಗ್ರಹ ಸ್ಮಾರಕ ಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. 1979ರ ಸೆ.29ರಂದು ಸತ್ಯಾಗ್ರಹಸೌಧ ಉದ್ಘಾಟನೆಯಾಯಿತು. ಸುಂದರ ಕಮಾನು ಆಕೃತಿಯಲ್ಲಿ ಕಟ್ಟಡಕ್ಕೆ ರೂಪ ನೀಡಲಾಯಿತು. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಈ ಸೌಧ ಪುನರುಜ್ಜೀವನಗೊಂಡಿತು. ಸೌಧದ ಎಡ ಬದಿಯಲ್ಲಿ ಅನೆಕ್ಸ್ ಸಭಾಂಗಣ ನಿರ್ಮಾಣಗೊಂಡಿತು.

ನಿರ್ವಹಣೆ ಕೊರತೆಯಿಂದಾಗಿ ಮುಖ್ಯ ಭವನ, ಅನೆಕ್ಸ್‌ ಕಟ್ಟಡ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಬೀದಿನಾಯಿಗಳ ವಾಸ ಸ್ಥಾನವಾಗಿವೆ. ಸೌಧದ ಆವರಣದಲ್ಲಿದ್ದ ಸುಂದರ ಕಾರಂಜಿ ಸ್ಥಗಿತಗೊಂಡಿದೆ. ಸುಂದರ ಕೈತೋಟ, ಆಲಂಕಾರಿಕ ಗಿಡಗಳು ಹಾಳಾಗಿವೆ. ನಿರ್ವಹಣೆಗಾಗಿ ರಚನೆಯಾಗಿದ್ದ ಸಮಿತಿಗೂ ಅಧಿಕಾರಿಗಳು ಸಹಕಾರ ನೀಡದ ಕಾರಣ ಸಮಿತಿಯಿಂದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.

ಈಚೆಗೆ ನಡೆದ ಕಾಂಗ್ರೆಸ್‌ ಸಂಸ್ಥಾಪನಾ ದಿನವನ್ನು ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಆವರಣದಲ್ಲಿ ಆಚರಿಸಲಾಗಿತ್ತು. ಆ ವೇಳೆ ಕಾಂಗ್ರೆಸ್‌ನಿಂದ ಸೌಧದ ಆವರಣವನ್ನು ಸ್ವಚ್ಛಗೊಳಿಸಲಾಗಿತ್ತು. ನೆಪ ಮಾತ್ರಕ್ಕೆ ಸತ್ಯಾಗ್ರಹ ಸೌಧ ಬಳಕೆಯಾಗುತ್ತಿದ್ದು  ಶಾಶ್ವತವಾಗಿ ಕಾಯಕಲ್ಪ ನೀಡುವ ಕೆಲಸ ಆಗಿಲ್ಲ.

ಕೆರೆಯಂತಾದ ಗಾಂಧಿ ಉದ್ಯಾನ: ಮಹಾತ್ಮ ಗಾಂಧಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೌರವ ಹೊಂದಿ ದ್ದರು. ಆ ಕಾರಣಕ್ಕಾಗಿ ಮೈಸೂರಿಗೆ ತೆರಳುವ ಮಾರ್ಗಮಧ್ಯೆ ಮಂಡ್ಯ ಜಿಲ್ಲೆಯ ವಿವಿಧ ರೈಲು ನಿಲ್ದಾಣದಲ್ಲಿ ಇಳಿದು ಜನರ ಸನ್ಮಾನ ಸ್ವೀಕರಿಸುತ್ತಿದ್ದರು ಎಂಬ ಮಾಹಿತಿ ಗಾಂಧಿವಾದಿ ವೇಮಗಲ್‌ ಸೋಮಶೇಖರ್‌ ಅವರ ‘ಮೈಸೂರು ರಾಜ್ಯದಲ್ಲಿ ಗಾಂಧಿ’ ಪುಸ್ತಕದಲ್ಲಿ ದಾಖಲಾಗಿದೆ.

ಮೈಸೂರಿಗೆ ತೆರಳುತ್ತಿದ್ದ ಮಹಾತ್ಮ ಗಾಂಧಿ ಅವರನ್ನು ಮಂಡ್ಯ ರೈಲು ನಿಲ್ದಾಣದಲ್ಲಿ ನೂರಾರು ಯುವ ಹೋರಾಟಗಾರರು ಭೇಟಿಯಾಗಿ ಸನ್ಮಾನ ಮಾಡಿದ್ದರು. ಅವರು ರೈಲಿನಿಂದ ಇಳಿದು ಜನರಿಂದ ಸನ್ಮಾನ ಸ್ವೀಕರಿಸಿದ್ದರು. ಸ್ಥಳದಲ್ಲೇ ಭಾಷಣ ಮಾಡಿದ್ದರು. ಅದರ ಸವಿ ನೆನಪಿಗಾಗಿಯೇ ರೈಲು ನಿಲ್ದಾಣದ ಮುಂದಿನ ಉದ್ಯಾನಕ್ಕೆ ಗಾಂಧಿ ಉದ್ಯಾನ ಎಂದು ನಾಮಕರಣ ಮಾಡಲಾಗಿದೆ ಎಂಬ ಮಾಹಿತಿ ದೊರೆಯುತ್ತದೆ.

ನಗರಸಭೆ ಕಚೇರಿ ಮುಂದಿರುವ ಗಾಂಧಿ ಉದ್ಯಾನ ನಿರ್ವಹಣೆ ಕೊರತೆ ಯಿಂದ ಕೆರೆಯಂತಾಗಿದೆ. ಕಸದ ರಾಶಿ ಎದ್ದು ಕಾಣುತ್ತಿದೆ. ಕಿಡಿಗೇಡಿಗಳು ನಿದ್ದೆ ಮಾಡುವ ತಾಣವಾಗಿದೆ. ಮದ್ಯದ ಬಾಟಲಿಗಳು ಚೆಲ್ಲಾಡುತ್ತಿವೆ. ನಗರಸಭೆ ಕಚೇರಿ ಎದುರಲ್ಲೇ ಅಶುಚಿತ್ವ ತಾಂಡವವಾಡುತ್ತಿರುವುದು ಸ್ವಚ್ಛ ಭಾರತ ಅಭಿಯಾನವನ್ನು ಅಣಕ ಮಾಡುತ್ತಿದೆ. ಹಸಿರು ಹಾಸಿನಲ್ಲಿ ತಿಂದು ಬಿಸಾಡಿದ ಪಾರ್ಸೆಲ್‌ ಕವರ್‌ಗಳು, ಕುಡಿದು ಬಿಸಾಡಿದ ನೀರಿನ ಬಾಟಲಿಗಳು ಕಣ್ಣಿಗೆ ರಾಚುತ್ತವೆ. 

ಉದ್ಯಾನಕ್ಕೆ ಹೊಂದಿ ಕೊಂಡಂತಿರುವ ಕಾಂಪೌಂಡ್‌ ಮೂತ್ರ ವಿಸರ್ಜನೆ ತಾಣವಾಗಿದೆ. ರೈಲ್ವೆ ಹಳಿಯಿಂದ ಉದ್ಯಾನಕ್ಕೆ ಅಕ್ರಮವಾಗಿ ಪ್ರವೇಶಿಸಬಹುದಾಗಿದ್ದು, ಉದ್ಯಾನದ ನೀರಿನ ಟ್ಯಾಂಕ್‌ ಬಳಿ ಮಲ ವಿಸರ್ಜನೆ ಮಾಡುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಸೋಮಾರಿಗಳ ವಿಶ್ರಾಂತಿ ಸ್ಥಳವಾಗಿದೆ. ಇದಲ್ಲದೆ ಆಕರ್ಷಣೀಯವಾಗಿ ಗಮನ ಸೆಳೆಯುತ್ತಿದ್ದ ಡೈನೋಸರಸ್‌ ಪ್ರತಿಮೆ ಕುಸಿದಿದ್ದು, ನೆಲಕ್ಕೆ ಉರುಳುವುದೊಂದು ಬಾಕಿ ಇದೆ.

‘ಸರ್ಕಾರಗಳು ಸ್ಮಾರಕಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಆದರೆ, ನಿರ್ಲಕ್ಷ್ಯ ತೋರುತ್ತಿರುವ ಮನೋಭಾವದ ವಿರುದ್ಧ ಸಂಘಟನೆ ಗಳು ಧ್ವನಿ ಎತ್ತಬೇಕು’ ಎಂದು ಹೋರಾಟಗಾರ ಬಸವರಾಜ್ ಮನವಿ ಮಾಡಿದರು.

ಗಾಂಧಿ ಚಿತಾಭಸ್ಮ ಸ್ಮಾರಕ ಅನಾಥ

ಶ್ರೀರಂಗಪಟ್ಟಣ ಪಟ್ಟಣ ಸಮೀಪದ ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ಗಾಂಧೀಜಿ‌ ಅವರ ಚಿತಾಭಸ್ಮ ವಿಸರ್ಜಿಸಿದ ನೆನಪಿಗೆ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಸ್ಮಾರಕ ಅನಾಥವಾಗಿದೆ.

1948ರ ಫೆ.12ರಂದು ಅಂದಿನ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಮತ್ತು ಅವರ ಸಚಿವ ಸಂಪುಟವನ್ನು ಸದಸ್ಯರು ಇಲ್ಲಿ ಗಾಂಧೀಜಿಯ ಚಿತಾಭಸ್ಮವನ್ನು ವಿಸರ್ಜಿಸಿದ್ದಾರೆ. ಅಂದಿನಿಂದ ಪಶ್ಚಿಮವಾಹಿನಿಯಲ್ಲಿ ಗಾಂಧಿ ಪ್ರಣೀತ ವಿಚಾರಗಳ ಚೌಕಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಪ್ರತಿ ವರ್ಷ ಫೆ.10, 11, ಮತ್ತು 12ರಂದು ‘ಇಲ್ಲಿ ಸರ್ವೋದಯ ಮೇಳ’ ನಡೆಯುತ್ತದೆ.

ಪಶ್ಚಿಮ ವಾಹಿನಿಯಲ್ಲಿ ನಡೆಯುತ್ತಿದ್ದ ಸರ್ವೋದಯ ಮೇಳ ಕಳೆದ ನಾಲ್ಕು ವರ್ಷಗಳಿಂದ ಪಟ್ಟಣದ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ. ಸ್ಮಾರಕಕ್ಕೆ ಕಾಯಕಲ್ಪ ನೀಡಬೇಕು ಎಂದು ಹಲವು ಸಂಘಟನೆಗಳು ಒತ್ತಾಯಿಸಿವೆ. ಆದರೆ, ಇಲ್ಲಿಯವರೆಗೂ ಕಾಯಕಲ್ಪ ಮರೀಚಿಕೆಯಾಗಿದೆ.

ಗಾಂಧಿ ಪ್ರತಿಮೆ ಸ್ಥಾಪನೆಗೆ ಒತ್ತಾಯ

1938ರಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧಿ ಹಾಸನಕ್ಕೆ ಹೊರಟಿದ್ದಾಗ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ರೈಲ್ವೆ ನಿಲ್ದಾಣ ದಲ್ಲಿ ಇಳಿದಿದ್ದರು. ಈ ಸಂದರ್ಭದಲ್ಲಿ ನೂರಾರು ಜನರು ಅವರನ್ನು ಭೇಟಿಯಾಗಿ ಸನ್ಮಾನ ಮಾಡಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ದೇಣಿಗೆಯನ್ನೂ ನೀಡಿದ್ದರು.

‘ಗಾಂಧಿ ಭೇಟಿಯ ದಿನವನ್ನು ನನ್ನ ಅಜ್ಜಿ ನೆನಪು ಮಾಡಿಕೊಳ್ಳುತ್ತಿದ್ದರು. ರೈಲ್ವೆ ನಿಲ್ದಾಣಕ್ಕೆ ಹೋದಾಗಲೆಲ್ಲಾ ಮಹಾತ್ಮರು ಈ ಜಾಗದಲ್ಲಿ ನಿಂತಿದ್ದರು ಎಂದು ಸ್ಮರಿಸುತ್ತಿದ್ದರು’ ಎಂದು ರಂಗಕರ್ಮಿ ಶಶಿಧರ ಬಾರಿಘಾಟ್‌ ನೆನಪಿಸಿಕೊಂಡರು.

‘ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಕ್ಕಿಹೆಬ್ಬಾಳು ರೈಲು ನಿಲ್ದಾಣದಲ್ಲಿ ಗಾಂಧೀಜಿ ಪ್ರತಿಮೆ ಸ್ಥಾಪಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಯಾರು ಏನಂತಾರೆ?

ಸರ್ಕಾರದ ನಿರ್ಲಕ್ಷ್ಯ ವಿಪರ್ಯಾಸ

ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದಲ್ಲಿರುವ ಧ್ವಜಸತ್ಯಾಗ್ರಹ ಸೌಧವು ಸ್ವಾತಂತ್ರ್ಯ ಹೋರಾಟದ ಕುರುಹು. ಸೌಧವು ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೇ, ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಶ್ರೇಷ್ಠ ಸ್ಮಾರಕವನ್ನು ಸರ್ಕಾರ ಕಡೆಗಣಿಸಿರುವುದು ವಿಪರ್ಯಾಸ. ಸಂಬಂಧಪಟ್ಟವರು ಸೂಕ್ತಕ್ರಮ ಕೈಗೊಳ್ಳಬೇಕು.

–ಕೆ.ಟಿ.ಚಂದು, ಸ್ವಾತಂತ್ರ್ಯ ಹೋರಾಟಗಾರ, ಮದ್ದೂರು

ಗಾಂಧಿ ಭೇಟಿಯ ಸ್ಮರಣೆ

ಗಾಂಧೀಜಿ ನಮ್ಮ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮಕ್ಕೆ ಬಂದಿದ್ದರೆಂಬುದೇ ಹೆಮ್ಮೆಯ ವಿಚಾರ. ಮಹಾತ್ಮರ ನೆನಪಿಗಾಗಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಗಾಂಧೀಜಿ ಅವರನ್ನು ಸ್ಮರಿಸುವ ಕೆಲಸವನ್ನು ರೈಲ್ವೆ ಇಲಾಖೆ ಮಾಡಬೇಕು. ಈ ಸಂಬಂಧ ಗ್ರಾಮದವರು, ವಿವಿಧ ಸಂಘಟನೆಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ.

–ಕತ್ತರಘಟ್ಟ ವಾಸು, ಕೆ.ಆರ್.ಪೇಟೆ

ಚಿತಾಭಸ್ಮ ಸ್ಮಾರಕ ಪ್ರೇರಕ ಶಕ್ತಿ

ಪಶ್ಚಿಮವಾಹಿನಿ ಬಳಿ ಇರುವ ಗಾಂಧೀಜಿ ಚಿತಾಭಸ್ಮ ಸ್ಮಾರಕ ಗಾಂಧಿ ಅನುಯಾಯಿಗಳಿಗೆ ಪ್ರೇರಕ ಶಕ್ತಿ. ಈ ಕಾರಣಕ್ಕೆ ಗಾಂಧೀಜಿ ವಿಚಾರಗಳ ಕುರಿತು 1948ರಿಂದ ಚಿಂತನ– ಮಂಥನ ನಡೆಯುತ್ತಿದೆ. ಇದು ಇಂದಿನ ಪೀಳಿಗೆಗೆ ಅನಿವಾರ್ಯವೂ ಹೌದು. ಸ್ಮಾರಕಕ್ಕೆ ಶಾಶ್ವತವಾಗಿ ಕಾಯಕಲ್ಪ ನೀಡುವುದು ಸರ್ಕಾರಗಳ ಜವಾಬ್ದಾರಿಯಾಗಿದೆ.

–ಡಾ.ಬಿ.ಸುಜಯಕುಮಾರ್, ಗಾಂಧಿವಾದಿ

***

ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಹಲವು ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಶಾಶ್ವತವಾಗಿ ಕಾಯಕಲ್ಪ ನೀಡಲು ಯೋಜನೆ ರೂಪಿಸಲಾಗುವುದು

–ಎಸ್‌.ಅಶ್ವತಿ, ಜಿಲ್ಲಾಧಿಕಾರಿ

ನಿರ್ವಹಣೆ: ಎಂ.ಎನ್.ಯೋಗೇಶ್, ಪೂರಕ ಮಾಹಿತಿ: ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್, ಅಶೋಕ್ ಕುಮಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು