ಭಾನುವಾರ, ಏಪ್ರಿಲ್ 2, 2023
32 °C

‘ವಿಜ್ಞಾನ ಓದಿದವರಲ್ಲೂ ವೈಜ್ಞಾನಿಕ ಮನೋಭಾವ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಮೂಢನಂಬಿಕೆ ಸಮಾಜದಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಜ್ಞಾನ ಓದಿದವರಿಗೂ ವೈಜ್ಞಾನಿಕ ಮನೋಭಾವ ಇಲ್ಲದಿರುವುದು ದುರದೃಷ್ಟಕರ’ ಎಂದು ಸಾಹಿತಿ ಕಾಳೇಗೌಡ ನಾಗವಾರ ವಿಷಾಧಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ವೈಜ್ಞಾನಿಕ ಸಂಶೋಧನ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಎಚ್.ಎನ್.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

‘ವೈಜ್ಞಾನಿಕ ಚಿಂತನೆ ಎಂದರೆ ಸತ್ಯ ಶೋಧನೆಯಾಗಿರಬೇಕು. ಆದರೆ, ಮೂಢನಂಬಿಕೆ ಅಂಧಶ್ರದ್ಧೆಯ ಭಾವನೆಗಳಿಂದ ಜನಸಾಮಾನ್ಯರು ಗೊಂದಲಕ್ಕೆ ಒಳಗಾಗಿ ಪಟ್ಟಭದ್ರರ ಹಿಡಿತಕ್ಕೆ ಸಿಲುಕಿ ನಲುಗುವಂತಾಗಿದೆ. ಮಾನವಕೋಟಿಗೆ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆ ತಿಳಿಸಿದ್ದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕುವೆಂಪು, ಎಚ್.ಎನ್ ರಂಥವರು ನಮಗೆ ನಿತ್ಯ ಮಾರ್ಗದರ್ಶಕರಾಗಬೇಕು’ ಎಂದರು.

‘ಸಮಾಜದಲ್ಲಿ ಸ್ವಾಮಿವಿವೇಕಾನಂದ, ರಾಮಕೃಷ್ಣ ಪರಮಹಂಸರ ವಿಶಾಲ ಮನೋಭಾವದ ವಿರುದ್ಧ ಈ ಕಾಲದ ಧಾರ್ಮಿಕ ಮುಖಂಡರು ಮೂಢನಂಬಿಕೆ ಬಿತ್ತಿ ಸಂಕಿಚಿತ ಮನೋಭಾವ ಮೂಡಿಸುತ್ತಿದ್ಧಾರೆ. ಇಂಥವರಿಂದ ಸದಾ ಎಚ್ಚರಿಕೆಯಿಂದ ಇರಬೇಕು’ ಎಂದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ ‘ಪುರುಷ– ಮಹಿಳೆ ಎನ್ನದೆ ಅನುಭವ ಮಂಟಪ ಎಂಬ ಮಹಾಮನೆಯಲ್ಲಿ ಸರಳ ಮತ್ತು ಸತ್ಯ ಮಾರ್ಗದಲ್ಲಿ ಬದುಕುವ ಸೂತ್ರ ಕಲ್ಪಿಸಿದ ಬಸವಾದಿ ಶರಣರು ಮಾನವ ಕುಲಕ್ಕೆ ಮಾರ್ಗದರ್ಶಕರಾಗಿದ್ದಾರೆ, ಅವರ ವಿಚಾರ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು’ ಎಂದರು.

ಪ್ರಶಸ್ತಿ ಸ್ವೀಕರಿಸಿ ಕೊತ್ತತ್ತಿ ಸಿದ್ದರಾಜು ಮಾತನಾಡಿ ‘ವಿಜ್ಞಾನ ಎಂದರೆ ಸತ್ಯದ ಅನ್ವೇಷಣೆಯಾಗಿದ್ದು ಈ ಮಾರ್ಗದಲ್ಲಿ ನಡೆಯುವವರು ಕೇವಲ ಆಧಾರ ರಹಿತವಾಗಿ, ಕಪೋಲಕಲ್ಪಿತ ವಿಚಾರಗಳನ್ನು ವಿಜ್ಞಾನ ಎಂದರೆ ಒಪ್ಪಲು ಸಾಧ್ಯವಿಲ್ಲ. ನಾಡು ಕಂಡ ವಿಶೇಷ ವೈಜ್ಞಾನಿಕ ಚಳವಳಿಯ ಹರಿಕಾರ ಎಚ್.ಎನ್.ರಂತವರು ನಮಗೆ ನಿಜವಾದ ಆದರ್ಶ ವ್ಯಕ್ತಿಯಾಗಬೇಕು’ ಎಂದು ಸ್ಮರಿಸಿದರು.

ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ಕೆಂಪರಾಜು, ಪರಿಷತ್‌ನ ಮಾರ್ಗದರ್ಶಕ ಎಂ.ಸಿ.ಬಸವರಾಜು, ರೈತ ಸಂಘ(ಮೂಲ ಸಂಘಟನೆ)ದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್‌ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು